ಬೆಂಗಳೂರಿನಲ್ಲಿ ಶ್ರದ್ಧಾ ಭಕ್ತಿಯ ರಂಜಾನ್‌ ಆಚರಣೆ: ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

By Kannadaprabha NewsFirst Published Apr 23, 2023, 7:02 AM IST
Highlights

ನಗರದಲ್ಲಿ ಪವಿತ್ರ ರಂಜಾನ್‌ ಹಬ್ಬವನ್ನು ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶ್ವೇತ ವಸ್ತ್ರ ಧರಿಸಿ ಈದ್ಗಾ ಮೈದಾನ, ಮಸೀದಿ ಸೇರಿದಂತೆ ನಿಗದಿತ ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. 

ಬೆಂಗಳೂರು (ಏ.23): ನಗರದಲ್ಲಿ ಪವಿತ್ರ ರಂಜಾನ್‌ ಹಬ್ಬವನ್ನು ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶ್ವೇತ ವಸ್ತ್ರ ಧರಿಸಿ ಈದ್ಗಾ ಮೈದಾನ, ಮಸೀದಿ ಸೇರಿದಂತೆ ನಿಗದಿತ ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಕಳೆದ ಒಂದು ತಿಂಗಳು ಹಗಲು ಉಪವಾಸ ವೃತ ಆಚರಣೆ ಮಾಡಿದ್ದ ಮುಸಲ್ಮಾನರು ಶನಿವಾರ ಈದ್‌ ಉಲ್‌ ಫಿತ್ರ್‌ ಆಚರಣೆ ನಡೆಸಿದರು. ಧರ್ಮಗುರುಗಳು ಕುರಾನ್‌ ಪಠಣದ ಬಳಿಕ ಅಲ್ಲಾಹುವಿನಲ್ಲಿ ಸೌಹಾರ್ದತೆ, ಸಾಮರಸ್ಯ ಜೀವನ, ರೋಗ ರುಜಿನಗಳ ನಿವಾರಣೆ, ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. 

ನಂತರ ಜನತೆ ಪರಸ್ಪರ ಆಲಿಂಗನದ ಮೂಲಕ ಹಬ್ಬದ ಶುಭಾಶಯವನ್ನು ಕೋರಿಕೊಂಡರು. ಮಿಲ್ಲರ್ಸ್‌ ರಸ್ತೆ, ಖುದ್ದೂಸ್‌ ಶಾ ಈದ್ಗಾ ಮೈದಾನ, ಮೈಸೂರು ರಸ್ತೆ, ಶಿವಾಜಿ ನಗರ, ಕದಿರೇನಹಳ್ಳಿ ಜಯನಗರ 4ನೇ ಬ್ಲಾಕ್‌, ಹೆಗಡೆ ನಗರ, ಬನ್ನೇರುಘಟ್ಟರಸ್ತೆಯ ಜುಮ್ಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚಾಮರಾಜ ಪೇಟೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಸೇರಿದ್ದರಿಂದ ಹಬ್ಬದ ರಂಗು ಹೆಚ್ಚಾಗಿತ್ತು. 

ಇಂದು ಅಕ್ಷಯ ತೃತೀಯಾ: ಈ ದಿನ ಏನು ಕೊಟ್ಟರೂ ಅಕ್ಷಯವಾಗುವ ದಿನ!

ರಾಜೀವ್‌ ಗಾಂಧಿ ಬಡಾವಣೆಯ ಇಲಾಹಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಜರುಗಿದವು. ಹಬ್ಬದ ದಿನವಾದರೂ ಶನಿವಾರ ಸಂಜೆ ಶಿವಾಜಿನಗರ, ಫ್ರೇಜರ್‌ ಟೌನ್‌, ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ವಿಶೇಷ ಖಾದ್ಯಗಳ. ಹೈದ್ರಾಬಾದಿ ಹಲೀಂ, ಮಟನ್‌, ಒಂಟೆ ಮಾಂಸ, ಚಿಕನ್‌ ಸಮೋಸಾ, ಕಬಾಬ್‌ಗಳನ್ನು ಜನತೆ ಸವಿದರು. ಜೊತೆಗೆ ಶೀರ್‌ಕುರ್ಮಾ, ಬಾದಾಮ್‌ ಫಲೂದಾ, ರಸ್‌ಮಲಾಯಿ ಸಿಹಿಯನ್ನು ಸವಿದರು.

ಶ್ರೀಮಂತರಿಂದ ಸದ್ಕೆ ಫಿತ್ರ್‌ ಆಚರಣೆ: ಬೆಳಗ್ಗೆ 7ರಿಂದ 11ಗಂಟೆವರೆಗೆ ವಿವಿಧೆಡೆ ಪ್ರಾರ್ಥನಾ ವಿಧಿಗಳು ಜರುಗಿದವು. ಧರ್ಮಗುರುಗಳಾದ ಶೇಖ್‌ ಫಾರೂಕ್‌ ಮೌಲಾನಾ ಸೇರಿ ಇತರರು ಪ್ರಾರ್ಥನೆಯನ್ನು ಬೋಧಿಸಿದರು. ಹಬ್ಬದ ಹಿನ್ನೆಲೆಯಲ್ಲಿ ನಮಾಜ್‌ ಮಾಡುವ ಮುನ್ನ ಶ್ರೀಮಂತರು ಸದ್ಕೆ ಫಿತ್ರ್‌ (ದಾನ) ಆಚರಿಸಿದರು. ಮಸೀದಿ, ಈದ್ಗಾ ಎದುರು ಸೇರಿದ್ದ ಬಡವರು, ನಿರ್ಗತಿಕರಿಗೆ ಉಳ್ಳವರು ದಾನ ಮಾಡಿದರು.

ಏಕತೆ ಸಾರಿದ ರಂಜಾನ್‌ ಹಬ್ಬ: ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್‌ ಹಬ್ಬದ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಬಾಂಧವರು ಮೂರು ಸಾವಿರ ಮಠಕ್ಕೆ ಆಗಮಿಸಿ ಕರ್ತೃ ಗುರುಸಿದ್ದೇಶ್ವರ ದೇವರ ದರ್ಶನ ಪಡೆದು ಹಿಂದೂ- ಮುಸ್ಲಿಂ ರಂಜಾನ ಹಬ್ಬದ ಸಂತೋಷ ವಿನಿಮಯ ಮಾಡಿಕೊಂಡು ಏಕತೆ ಸಾರಿದರು.

ಇಂದು ಬಸವ ಜಯಂತಿ: ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ

ಈ ಸಂದರ್ಭದಲ್ಲಿ ಮೂರುಸಾವಿಮಠದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ, ಅನ್ನಪೂರ್ಣೇಶ್ವರ ದಾಸೋಹ ಸಮಿತಿಯ ಚೇರ್‌ಮನ್‌ ವಿಜಯ ಶೆಟ್ಟರ, ಮಲ್ಲಿಕಾರ್ಜುನ ಕಳಸರಾಯ, ಪೂಜಾ ಸೇವಾ ಸಮಿತಿಯ ಚೇರ್‌ಮನ್‌ ಚನ್ನಬಸಪ್ಪ ಧಾರವಾಡಶೆಟ್ಟರ, ಮೋಹನ ಲಿಂಬಿಕಾಯಿ, ಕುಮಾರಗೌಡ ಪಾಟೀಲ, ಸದಾನಂದ ಡಂಗನವರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅಲ್ತಾಫ ಹಳ್ಳೂರ, ಮಲ್ಲಕಾ ಸಿಕಂದರ, ಶಾರುಕ ಮುಲ್ಲಾ, ರಾಜೇಸಾಬ ಸಿಕಂದರ, ಶಿರಾಜ ಅಹ್ಮದ ಕುಡಚಿವಾಲೆ, ದಾವಲಸಾಬ್‌ ನದಾಫ, ಮಲಿಕಜಾನ ಸಿಕಂದರ, ಪಾರಸ್‌ಮಲ್‌ ಜೈನ, ಎಂ.ಎಸ್‌. ಸಿರಗಣ್ಣವರ, ಶರಣಪ್ಪ ಕೊಟಗಿ, ಅನೀಲ ಬೋಲೆನ್‌, ಶಂಕ್ರಣ್ಣ ಬಿಜವಾಡ ಮುಂತಾದವರು ಉಪಸ್ಥಿತರಿದ್ದರು.

click me!