ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಇಂದು ಹೊರ ಬಂದಿದ್ದಾರೆ.
ಹುಬ್ಬಳ್ಳಿ (ಜ.06): ಹುಬ್ಬಳ್ಳಿಯಲ್ಲಿ 1992ರಲ್ಲಿ ನಡೆದ ರಾಮ ಜನ್ಮಭೂಮಿ ಕುರಿತ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ನಂತರ ರಾಮ ಮಂದಿರ ಉದ್ಘಾಟನೆಗೆ ವೇಳೆಗೆ ಕಾಂಗ್ರೆಸ್ ಸರ್ಕಾರ ಬಂಧಿಸಿ ಜೈಲಿಗಟ್ಟಿತ್ತು. ಆದರೆ, ಒಂದು ವಾರಗಳ ಕಾಲ ಜೈಲಿನಲ್ಲಿದ್ದ ಶ್ರೀಕಾಂತ ಪೂಜಾರಿ ಅವರಿಗೆ ನಿನ್ನೆ ಜಾಮೀನು ಲಭ್ಯವಾಗಿದ್ದು, ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿನಿಂದಬಿಡುಗಡೆಯಾಗಿ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಕಾಂತ ಪೂಜಾರಿ ಅವರು, ಹುಬ್ಬಳ್ಳಿಯ ಪೊಲೀಸರು ಮಾರ್ಕೆಟ್‌ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಡಿ.29ರಂದು ನನ್ನನ್ನು ಬರಲು ಹೇಳಿದರು. ನಾನು ಬೆಳಗಾವಿಯಲ್ಲಿದ್ದವನು ಬಂದು ಪೊಲೀಸರನ್ನು ಭೇಟಿಯಾದಾಗ ಮಾರುಕಟ್ಟೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ನನಗೆ ಯಾವುದೇ ನೋಟಿಸ್ ಅಥವಾ ಸಮನ್ಸ್ ಕೂಡ ನೀಡದೇ ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದರು.
ಕರಸೇವಕ ಶ್ರೀಕಾಂತ್ ಪೂಜಾರಿಗೆ ಕೋರ್ಟ್ ಜಾಮೀನು, ನ್ಯಾಯಾಲಯದ ಷರತ್ತುಗಳೇನು?
ನನ್ನ ಮೇಲೆ ಯಾವುದೇ ಕೇಸ್‌ಗಳಿಲ್ಲ ಎಂದು ಹೇಳಿದರೂ ಕೇಳಿದರೇ ನಿಂದು ಜಾಸ್ತಿ ಆಗಿದೆ ಮಗನಾ ಜೈಲಿಗೆ ನಡಿ ಎಂದು ಬಂಧಿಸಿದ್ದಾರೆ. ನನ್ನ ಮೇಲಿರುವ ಎಲ್ಲ ಕೇಸ್‌ಗಳು ಖುಲಾಸೆ ಮಾಡಿಕೊಂಡೇ ನಾನು ಜೈಲಿನಿಂದ ಹೊರಗಿದ್ದೇನೆ. ಆದರೆ, ಈ ಕೇಸನ್ನು ಮುಂದಿಟ್ಟುಕೊಂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾನು ಜೈಲಿಗೆ ಹೋದ ನಂತರ ಬಿಜೆಪಿ ನಾಯಕರು, ಮುಖಂಡರು, ಹಿಂದೂ ಸಂಘನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿ ಬಿಡುಗಡೆಗೆ ಆಗ್ರಹಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಇನ್ನು ಜ.22ರಂದು ನಡೆಯುವ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೂ ನಾನು ಹೋಗುತ್ತೇನೆ ಎಂದು ತಿಳಿಸಿದರು.
ಜ.5ರಂದೇ ಜಾಮೀನು ಮಂಜೂರು:
ಹುಬ್ಬಳ್ಳಿಯ 1ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಿಂದ ಜ.05ರಂದು ಶ್ರೀಕಾಂತ ಪೂಜಾರಿಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, ನಿನ್ನೆ ಜಾಮೀನು ವಾರೆಂಟ್ ಪೊಲೀಸರ ಕೈಗೆ ತಲುಪುವುದು ವಿಳಂಬವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶ್ರೀಕಾಂತ ಪೂಜಾರಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇನ್ನು 1 ಲಕ್ಷ ರೂ. ಶೂರಿಟಿ ಬಾಂಡ್, ಪೊಲೀಸರು ಕರೆದಾಗ ಬರಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತನ್ನು ಒಡ್ಡಲಾಗಿದೆ. ಇನ್ನು ಶ್ರೀಕಾಂತ ಪೂಜಾರಿ ಪರ ವಕೀಲರು ರಾಮ ಜನ್ಮಭೂಮಿ ಕುರಿತ ಗಲಭೆ ಪ್ರಕರಣ ರದ್ದತಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್
ಪ್ರಕರಣದ ಮಾಹಿತಿ ಏನು?:
1992ರಲ್ಲಿ ಡಿ.5 ರಂದು ನಾವು ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ರಾಮ ಜನ್ಮಭೂಮಿ ಕುರಿತು ಪ್ರತಿಭಟನೆ ಮಾಡಲಾಗಿತ್ತು. ಈ ಕುರಿತು 5 ಜನರ ಮೇಲೆ ಗಲಭೆ ಪ್ರಕರಣ ದಾಖಲಿಸಲಾಗಿರುತ್ತದೆ. ಆದರೆ, ಈ ಪ್ರಕರಣವನ್ನು ಹಲವು ವರ್ಷಗಳಿಂದ ಮುಂದುವರೆಸಿಕೊಂಡ ಸರ್ಕಾರ ರಾಮ ಮಂದಿರ ಉದ್ಘಾಟನೆ ವೇಳೆ ರಾಮ ಜನ್ಮಭೂಮಿ ಕುರಿತ ಹೋರಾಟಗಾರರನ್ನು ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿನ ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಈಗ 3 ಜನರು ಮಾತ್ರ ಬದುಕಿದ್ದಾರೆ. ಅದರಲ್ಲಿ ಒಬ್ಬರಿಗೆ ತೀವ್ರ ಅನಾರೋಗ್ಯ ಇರುವ ಕಾರಣ ಅವನ್ನು ಕೈಬಿಟ್ಟು, ಉಳಿದ ಇಬ್ಬರನ್ನು ಬಂಧನ ಮಾಡಿದ್ದರು.