ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಬಿಕಾರಾಮ್ ಹಾವೇರಿಯಲ್ಲಿ ಬಂಧನ!

By Sathish Kumar KH  |  First Published Nov 6, 2024, 8:56 PM IST

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ತಾನ ಮೂಲದ ಬಿಕಾರಾಮ್ ಎಂಬಾತನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ. 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು.


ಹಾವೇರಿ (ನ.06): ಬಾಲಿವುಡ್ ಖಾನ್ ಖ್ಯಾತಿಯ ನಟ ಸಲ್ಮಾನ್ ಖಾನ್‌ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ರಾಜಸ್ತಾನ ಮೂಲದ ಬಿಕಾರಾಮ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಹಾವೇರಿ ನಗರದ ಗೌಡರ ಓಣಿಯಲ್ಲಿ ಬಂಧಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ಇಡೀ ದೇಶದಲ್ಲಿ ಭಾರೀ ದೊಡ್ಡ ಸುದ್ದಿಯಾಗಿತ್ತು. ಮುಂಬೈ ನಗರದ ವರ್ಲಿ ಪೊಲೀಸರಿಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ಸಲ್ಮಾನ್ ಖಾನ್‌ ಅವರಿಗೆ ವ್ಯಕ್ತಿಯೊಬ್ಬ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ಕೊಡದಿದ್ದರೆ ಕೊಲ್ಲುವುದಾಗಿ ಹೇಳಿದ್ದಾನೆ. ಈ ಬೆದರಿಕೆ ಸಂದೇಶ ಬರುತ್ತಿದ್ದಂತೆ ಮುಂಬೈನ ವರ್ಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

Latest Videos

ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಸಂದೇಶ ಹಾಗೂ ಆತನ ಮೊಬೈಲ್ ಟವರ್ ಸೇರಿದಂತೆ ವಿವಿಧ ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸುತ್ತಾ ಆತನನ್ನು ಹುಡುಕಿಕೊಂಡ ಬಂದ ಮುಂಬೈ ಪೊಲೀಸರು ಸೀದಾ ಕರ್ನಾಟಕದ ಏಲಕ್ಕಿ ನಾಡು ಹಾವೇರಿಗೆ ಬಂದಿದ್ದಾರೆ. ಹಾವೇರಿ ನಗರದಲ್ಲಿನ ಗೌಡರ ಓಣಿಯಲ್ಲಿ ಬಾಡಿಗೆ ರೂಮು ಮಾಡಿಕೊಂಡು ಕೂಲಿ ಕೆಲಸ ಮಾಡುತ್ತಾ ಬಿಕಾರಾಮ್ ವಾಸವಾಗಿದ್ದನು. ಹಾವೇರಿ ನಗರದಲ್ಲಿ ಗ್ರಿಲ್ ಕೆಲಸ ಮಾಡಿಕೊಂಡಿದ್ದ ಬಿಕಾರಾಮ್‌ನನ್ನು ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ, 2 ಕೋಟಿ ರೂ. ಬೇಡಿಕೆ!

ರಾಜಸ್ತಾನ ಮೂಲದ ಬಿಕಾರಾಮ್‌ ವಿವಿಧೆಡೆ ಕೆಲಸ ಮಾಡುತ್ತಿದ್ದರು. ಈ ಹಿಂದೆ ಮುಂಬೈನಲ್ಲಿಯೂ ಕೆಲಸ ಮಾಡಿಕೊಂಡಿದ್ದನು. ಆಗಾಗ ತಮ್ಮ ಸ್ವಗ್ರಾಮ ರಾಜಸ್ಥಾನಕ್ಕೆ ಹೋಗಿ ಬರುತ್ತಿದ್ದನು. ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯರು ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿ ಕೊಲೆ ಮಾಡಿದ ನಂತರ ರಾಜಸ್ಥಾನ ಮೂಲದ ಬಿಕಾರಾಮ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟು, ಇಲ್ಲದಿದ್ದರೆ ಕೂಡ ಸಲ್ಮಾನ್ ಖಾನ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿ ಆಗಿದ್ದನು. ಕಳೆದ ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಹಾವೇರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು. ಇದೀಗ ಬಿಕಾರಾಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂಬೈ ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.

ಲಾರೆನ್ಸ್ ಬಿಷ್ಣೋಯಿ ಸಂಗಡಿಗರು ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ದಿಕಿಯನ್ನು ಕೊಲೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಮುಂಬೈ ಪೊಲೀಸರಿಂದ ಸಲ್ಮಾನ್ ಖಾನ್‌ಗೆ ಭಾರಿ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅದರ ನಡುವೆ ಕೆಲವರು ಕೊಲೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುವ ಸಂದೇಶಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊಲೆ ಬೆದರಿಕೆ ಹಾಕಿದ ಎಲ್ಲ ವ್ಯಕ್ತಿಗಳನ್ನು ಬಂಧಿಸಿ ಜೈಲೂಟ ಮಾಡಲು ಕಳಿಸುತ್ತಿದ್ದಾರೆ.

click me!