
ಬೆಂಗಳೂರ : ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬುಧವಾರ ಹಗುರ ಹಾಗೂ ಸಾಧಾರಣ ಮಳೆಯಾಗಿದ್ದು, ಗುಡುಗು ಸಹಿತ ಜೋರು ಗಾಳಿ ಮಳೆಗೆ ವಿವಿಧೆಡೆ ಆರಕ್ಕೂ ಹೆಚ್ಚು ಬೃಹತ್ ಮರಗಳು ನೆಲಕ್ಕುರುಳಿವೆ.
ಮಳೆ ಅನಾಹುತದಿಂದ ಒಂದು ಬೈಕ್, ಎರಡು ಕಾರು ಮತ್ತು ಎರಡು ಅಂಗಡಿಗಳು ಜಖಂಗೊಂಡಿವೆ. ಹಲಸೂರಿನಲ್ಲಿ ಆಶ್ರಮವೊಂದರ ಕಾಂಪೌಂಡ್ ಕುಸಿದಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಮುಂಗಾರು ಪೂರ್ಣದ ಭಾಗವಾಗಿ ಉಷ್ಣಾಂಶ ಏರಿಕೆಯಿಂದಲೂ ಮಳೆಯಾಗುತ್ತಿದೆ.
ಇದು, ಇನ್ನೂ ಎರಡು ದಿನ ಮುಂದುವರಿಯಲಿದೆ. ಗುರುವಾರ ಕೂಡ ಬೆಂಗಳೂರಿನ ವಿವಿಧೆಡೆ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ವಿಜ್ಞಾನಿ ಡಾ.ಪ್ರಭು ತಿಳಿಸಿದ್ದಾರೆ.