ವರುಣನ ಕೃಪೆಯಿಂದಾಗಿ ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ಸುರಿದ ಹದ ಮಳೆಯಿಂದ ಮುಂಗಾರು ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ತುರುವೇಕೆರೆ : ವರುಣನ ಕೃಪೆಯಿಂದಾಗಿ ತಾಲೂಕಿನಾದ್ಯಂತ ಗುರುವಾರ ತಡರಾತ್ರಿ ಸುರಿದ ಹದ ಮಳೆಯಿಂದ ಮುಂಗಾರು ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜುಲೈ ಮಧ್ಯ ಭಾಗದಿಂದ ಮುಂಗಾರು ಮಳೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬಿದ್ದಿತ್ತು. ಹಾಗಾಗಿ ಕೆಲವು ಆಯ್ದ ಕಡೆಗಳಲ್ಲಿ ರೈತರು ಬಿತ್ತನೆ ಮಾಡಿದ್ದರು. ತದ ನಂತರ ಜುಲೈ ಅಂತ್ಯದಲ್ಲಿ ಚದುರಿದ ರೀತಿಯಲ್ಲಿ ಸೋನೆ ಮಳೆಯಾಗಿದ್ದರಿಂದ ರೈತರಲ್ಲಿ ಭರವಸೆ ಮೂಡಿಸಿತ್ತು. ಆದರೆ ಅಲ್ಲಿಂದ ಆಗಸ್ಟ್ ಅಂತ್ಯದವರೆಗೂ ಮಳೆ ಬೀಳದ ಕಾರಣ ಬಿತ್ತಿದ್ದ ಮುಂಗಾರು ಬೆಳೆಗಳು ಒಣಗ ತೊಡಗಿದವು. ಇತ್ತ ಇನ್ನೂ ಬಿತ್ತನೆ ಮಾಡದ ರೈತರಲ್ಲಿ ಆತಂಕ ಮನೆ ಮಾಡಿತ್ತು. ರಾತ್ರಿ ಹದ ಮಳೆ ಬಿದ್ದಿದ್ದರಿಂದ ತಾಲೂಕಿನ ಕೆಲ ಭಾಗದಲ್ಲಿ ಮುಂಗಾರು ಬಿತ್ತನೆ ಕಾರ‍್ಯ ಚುರುಕುಗೊಳ್ಳಲು ಸಾಧ್ಯವಾಗಿದೆ. ಮಾಯಸಂದ್ರ ಹೋಬಳಿಯಲ್ಲಿ 112. ಮಿಲಿ ಮೀಟರ್ ಮಳೆಯಾಗಿದೆ. ಇದರಿಂದ ರೈತರು ಬಿತ್ತಿದ್ದ ಮುಂಗಾರು ಬೆಳೆಗಳಾದ ರಾಗಿ, ಅವರೆ, ಜೋಳ, ತೊಗರಿ, ಹರಳು ಗಿಡಗಳಿಗೆ ತಂಪೆರೆದಿದೆ. ಇನ್ನು ವಾಣಿಜ್ಯ ಬೆಳೆಗಳಾದ , ಅಡಿಕೆ, ಬಾಳೆ ಗಿಡಗಳಿಗೆ ಈ ಮಳೆ ಕೊಂಚ ಚೇತರಿಕೆ ನೀಡಿದೆ.
ಗುರುವಾರ ಸುರಿದ ಮಳೆಯಿಂದಾಗಿ ತೋಟ, ಹೊಲ, ಗದ್ದೆ ಸಾಲುಗಳ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ಈ ಬಾರಿ ಮುಂಗಾರು ಬಿತ್ತನೆ ಕಾರ್ಯ ತಡವಾಗಿ ಆರಂಭವಾಗಿದೆ. ತಾಲೂಕಿನಲ್ಲಿ ಒಟ್ಟು ಶೇ 40 ರಷ್ಟುಮಾತ್ರ ಮುಂಗಾರು ಬಿತ್ತನೆಯಾಗಿದೆ. ಇನ್ನು ಕೆಲವೆಡೆ ಭೂಮಿ ತೇವಾಂಶವಿದ್ದು, ಮಳೆ ನಿಂತ ತಕ್ಷಣರಾಗಿ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಕೆಲವು ಭಾಗಗಳಲ್ಲಿನ ರೈತರು ರಾಗಿ ಬಿತ್ತನೆ ಕಾರ್ಯ ಮಾಡುತ್ತಿದ್ದು ಕಂಡು ಬಂದಿದೆ.
ಕಸಬಾ 33 ಮಿಲಿ ಮೀಟರ್, ದಂಡಿನಶಿವರ 25.8 ಮಿಲಿ ಮೀಟರ್, ಮಾಯಸಂದ್ರ, 112.4 ಮಿಲಿ ಮೀಟರ್, ಸಂಪಿಗೆ 60.6 ಮಿಲಿ ಮೀಟರ್, ದಬ್ಬೇಘಟ್ಟ8 ಮಿಲಿ ಮೀಟರ್ ಮಳೆಯಾಗಿದೆ.