ಮಂಗಳೂರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ನಿರ್ಬಂಧ!

By Suvarna NewsFirst Published May 17, 2022, 7:29 PM IST
Highlights

* ಇದೇ ತಿಂಗಳ 17 ರಿಂದ 19ರ ವರೆಗೆ ಭಾರೀ ಮಳೆಯಾಗುವ ಸಂಭವ
* ಮಂಗಳೂರಿನಲ್ಲಿ ಹೊಸ ಕಟ್ಟಡಗಳ ಕಾಮಗಾರಿಗೆ ನಿರ್ಬಂಧ!
* ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಪ್ರಕಟಣೆ 

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು, (ಮೇ.17)
: ಮಳೆ ಎಫೆಕ್ಟ್‌ನಿಂದಾಗಿ ಮಂಗಳೂರಿನಲ್ಲಿ ಹೊಸ ಕಟ್ಟಡಗಳ ಕಾಮಗಾರಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಪ್ರಕಟಣೆ ಹೊರಡಿಸಿದ್ದಾರೆ.

ಹೌದು...ಇದೇ ತಿಂಗಳ 17 ರಿಂದ 19ರ ವರೆಗೆ ಭಾರೀ ಮಳೆಯಾಗುವ ಸಂಭವವಿರುವುದರಿಂದ ಹಾಗೂ ಜೂನ್ ತಿಂಗಳಾರಂಭದಲ್ಲಿ ಮುಂಗಾರು  ಪ್ರಾರಂಭವಾಗುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ, ಮಳೆಗಾಲ ಪೂರ್ಣಗೊಂಡ ನಂತರ ಆ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. 

Latest Videos

ಗುಡ್ಡ ಅಗೆದು ನಿವೇಶನ ಸಮತಟ್ಟು ಗೊಳಿಸುವುದರಿಂದ ಗುಡ್ಡ ಕುಸಿದು ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಗುಡ್ಡ ಅಗೆದು ನಿವೇಶನವನ್ನು ಸಮತಟ್ಟುಗೊಳಿಸಿ ಮಣ್ಣು ಸಾಗಾಟ ಮಾಡುವುದನ್ನು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಖ್ಯವಾಗಿ ಈಗಾಗಲೇ ಆರಂಭಿಸಿರುವ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಅಕ್ಕಪಕ್ಕದ ನಿವೇಶನಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಮತ್ತು ತಗ್ಗು ಪ್ರದೇಶವಿರುವ ಸಂದರ್ಭದಲ್ಲಿ ಯಾವುದೇ ಅನಾಹುತವಾಗದ ಹಾಗೆ ತಡೆಗೋಡೆ ನಿರ್ಮಿಸಿ ಸೂಕ್ತ ರೀತಿಯಲ್ಲಿ ಭದ್ರಪಡಿಸಬೇಕು. ತಪ್ಪಿದಲ್ಲಿ ಕೆ.ಎಂ.ಸಿ ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Karnataka Rains: ಕರ್ನಾಟಕದಲ್ಲಿ ಮುಂದಿನ ಐದು ದಿನ ಭಾರೀ ಮಳೆ: ಕರಾವಳಿಗೆ ರೆಡ್‌ ಅಲರ್ಟ್‌

ಮಳೆಗೆ ಗುಡ್ಡ ಕುಸಿತದ ಆತಂಕ!
ಮಳೆಗಾಲದಲ್ಲಿ ಸಹಜವಾಗಿ ಗುಡ್ಡ ಕುಸಿತದ ಆತಂಕವಿರುತ್ತದೆ. ಈ ಹಿಂದೆ ಮಂಗಳೂರು ನಗರದ ಹಲವು ತಗ್ಗು ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾಗ ಗುಡ್ಡ ಕುಸಿದು ಕಾರ್ಮಿಕರು ಮೃತಪಟ್ಟ ಘಟನೆಗಳೂ ನಡೆದಿದ್ದವು. ಇದರ ಜೊತೆಗೆ ಭಾರೀ ಮಳೆ ಪರಿಣಾಮ ಕಟ್ಟಡ ಕಾಮಗಾರಿ ವೇಳೆ ಭೂ ಕುಸಿತದ ಪರಿಣಾಮ ಅಕ್ಕಪಕ್ಕದ ಮನೆ ಹಾಗೂ ಕಟ್ಟಡಗಳಿಗೂ ಅಪಾಯ ಎದುರಾಗೋ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ‌ನೂತನ ಕಟ್ಟಡ ಕಾಮಗಾರಿಗೆ ಪಿಲ್ಲರ್ ನಿರ್ಮಿಸಲು ಯಂತ್ರಗಳನ್ನ ಬಳಸಿ ಕಾಮಗಾರಿ ನಡೆಸುವಾಗ ಮಳೆಗಾಲದಲ್ಲಿ‌ ಎತ್ತರ ಪ್ರದೇಶಗಳಲ್ಲಿ ಹೆಚ್ಚಿನ ಅಪಾಯ ಇರುತ್ತದೆ. ಹೀಗಾಗಿ ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು ಪಾಲಿಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಭಾರೀ ಮಳೆ ಎಚ್ಚರಿಕೆ
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದ್ದು(Rain), ರಾಜ್ಯ ಹವಾಮಾನ ಇಲಾಖೆ ಬುಧವಾರ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ರೆಡ್‌ ಅಲರ್ಟ್‌(Red Alert) ಘೋಷಿಸಿದೆ.

ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಕರ್ನಾಟಕದ(Karnataka) ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗಲಿದೆ. ಮುಖ್ಯವಾಗಿ ಕರಾವಳಿಯಲ್ಲಿ ಮಂಗಳವಾರ ಮತ್ತು ಬುಧವಾರ ನಿರಂತರ ಮಳೆಯಾಗಲಿದ್ದು, ಅದರಲ್ಲೂ ಬುಧವಾರ ಕರಾವಳಿಯ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ, ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿಯೂ ಐದು ದಿನ ಸಾಧಾರಣ ಮಳೆ ಇರಲಿದ್ದು, ಕೆಲ ಪ್ರದೇಶಗಳಲ್ಲಿ ಮಾತ್ರ ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ(Department of Meteorology) ತಜ್ಞ ಪ್ರಸಾದ್‌ ಹೇಳಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಮುಂಗಾರು ಮಾರುತಗಳು ಸಶಕ್ತವಾಗಿದ್ದು, ಮುಂದಿನ 2-3 ದಿನಗಳಲ್ಲಿ ಬಂಗಾಳ ಕೊಲ್ಲಿಯ ಇನ್ನಷ್ಟುಭಾಗಕ್ಕೆ ವ್ಯಾಪಿಸಲಿವೆ. ಮುಂದಿನ ಐದು ದಿನಗಳಲ್ಲಿ ಕೇರಳ, ತಮಿಳುನಾಡು, ಲಕ್ಷದ್ವೀಪ ಹಾಗೂ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪೂರ್ವ ಮಾರುತಗಳು ಉತ್ತಮ ಮಳೆ ಸುರಿಸಲಿದೆ. ಬುಧವಾರ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!