ಮಳೆಯಿಂದ ಜಿಲ್ಲಾದ್ಯಂತ ಸಾಕಷ್ಟುಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಲಾಭ ಸಿಗುವುದು ಅಷ್ಟಕಷ್ಟೇ ಎನ್ನಲಾಗುತ್ತಿದ್ದು ಜಿಲ್ಲಾದ್ಯಂತ ಆರಂಭಗೊಂಡಿರುವ ರಾಗಿ ಬೆಳೆಗಾರರ ನೊಂದಣಿ ಪ್ರಮಾಣದಲ್ಲಿ ಕುಸಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ: ಮಳೆಯಿಂದ ಜಿಲ್ಲಾದ್ಯಂತ ಸಾಕಷ್ಟುಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಲಾಭ ಸಿಗುವುದು ಅಷ್ಟಕಷ್ಟೇ ಎನ್ನಲಾಗುತ್ತಿದ್ದು ಜಿಲ್ಲಾದ್ಯಂತ ಆರಂಭಗೊಂಡಿರುವ ರಾಗಿ ಬೆಳೆಗಾರರ ನೊಂದಣಿ ಪ್ರಮಾಣದಲ್ಲಿ ಕುಸಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕೇಂದ್ರ ಸರ್ಕಾರ (Govt) ಕ್ವಿಂಟಾಲ್ 3,758 ರು, ಬೆಂಬಲ ಬೆಲೆ (Price) ಘೋಷಿಸಿದ್ದರೂ ಈ ವರ್ಷ ಮಳೆಯ ಕಾರಣಕ್ಕೆ ಅಪಾರ ಪ್ರಮಾಣದ ರಾಗಿ ಕಳೆದುಕೊಂಡಿರುವ ರೈತರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಲಾಭ ಸಿಗದೇ ದೂರ ಉಳಿಯುವಂತಾಗಿದೆ.
ಜಿಲ್ಲೆಯಲ್ಲಿ ಡಿ.15 ರಿಂದಲೇ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡುವ ರೈತರ ನೊಂದಣಿಯನ್ನು ಆಹಾರ ಇಲಾಖೆ ಆರಂಭಿಸಿದ್ದರೂ ಜಿಲ್ಲೆಯಲ್ಲಿ ಇಲ್ಲಿವರೆಗೂ ಕೇವಲ 1,633 ಮಂದಿ ರೈತರು ಮಾತ್ರ ನೊಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 369, ಚಿಂತಾಮಣಿ 52, ಗೌರಿಬಿದನೂರು ತಾಲೂಕಿನಲ್ಲಿ 82, ಗುಡಿಬಂಡೆ 580 ಹಾಗೂ ಶಿಡ್ಲಘಟ್ಟತಾಲೂಕಿನಲ್ಲಿ 550 ಮಂದಿ ಇಲ್ಲಿವರೆಗೂ ನೊಂದಣಿ ಮಾಡಿಸಿಕೊಂಡಿದ್ದಾರೆ. 24,267 ಕ್ವಿಂಟಾಲ್ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡುವುದಾಗಿ ರೈತರು ತಿಳಿಸಿದ್ದಾರೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಮಯಕ್ಕೆ ರೈತರ ನೊಂದಣಿ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಕುಸಿತ ಕಂಡಿರುವುದು ಎದ್ದು ಕಾಣುತ್ತಿದೆ.
8,999 ಮಂದಿ ನೊಂದಣಿ: ಕಳೆದ ವರ್ಷ ರಾಗಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲಾದ್ಯಂತ ಬರೋಬರಿ 8,999 ಮಂದಿ ರೈತರು ನೊಂದಾಯಿಸಿಕೊಂಡಿದ್ದರು. ಆ ಪೈಕಿ ಒಟ್ಟು ಜಿಲ್ಲಾದ್ಯಂತ 8,545 ರೈತರು 1,22,770 ಕ್ವಿಂಟಾಲ್ ರಾಗಿ ಬೆಂಬಲ ಬೆಲೆಗೆ ಮಾರಾಟ ಮಾಡಿದ್ದರು. ರಾಗಿ ಮಾರಾಟ ಮಾಡಿದ 8.526 ಮಂದಿ ರೈತರಿಗೆ ಕಳೆದ ವರ್ಷ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 41,45,95,978 ರು, ಗಳನ್ನು ರೈತರಿಗೆ ಪಾವತಿ ಮಾಡಲಾಗಿತ್ತು. ಆದರೆ ಈ ಬಾರಿ ಮಳೆ ಹಾಗೂ ಚಂಡಮಾರುತ ಪರಿಣಾಮ ಬಳಷ್ಟುಕಡೆ ರಾಗಿ ನೆಲ ಕಚ್ಚಿರುವ ಪರಿಣಾಮ ಬೆಂಬಲ ಬೆಲೆ ಲಾಭ ರಾಗಿ ಬೆಳೆಗಾರರಿಗೆ ಗಗನ ಕುಸುಮವಾಗಲಿದೆ.
ರಾಗಿ ಖರೀದಿಗೆ ಬೆಳೆಗಾರರು ಮಿತಿಗೆ ಆಕ್ರೋಶ
ಸರ್ಕಾರ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಮಿತಿ ಏರಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎಕೆರೆ ಕನಿಷ್ಠ 10 ರಿಂದ 20 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಮಾತ್ರ ರೈತರಿಗೆ ಅವಕಾಶ ನೀಡಿದ್ದು, ಈ ಯೋಜನೆಯಡಿ ದೊಡ್ಡ ರೈತರನ್ನು ಸರ್ಕಾರ ದೂರ ಇಟ್ಟಿದೆಯೆಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ. ಅಲ್ಲದೇ 5 ಲಕ್ಷ ಮೆಟ್ರಿಕ್ ರಾಗಿ ಖರೀದಿ ಬಳಿಕ ರಾಗಿ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಆದೇಶಿಸಿರುವುದು ಕೂಡ ರಾಗಿ ಬೆಳೆಗಾರರು ಕಣ್ಣು ಕೆಂಪಾಗಿಸಿದೆ. ಸರ್ಕಾರ ಯಾವುದೇ ಮಿತಿ ಹೇರದೇ ರಾಗಿಯನ್ನು ರೈತರಿಂದ ಬೆಂಬಲ ಯೋಜನೆಯಡಿ ಖರೀದಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಪ್ರತಿ ಕ್ವಿಂಟಾಲ್ ರಾಗಿಯನ್ನು 3,758 ರು, ನಂತೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುತ್ತಿದ್ದು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ನೊಂದಣಿ ಮಾಡಿಸಿಕೊಂಡು ಬೆಂಬಲ ಬೆಲೆ ಲಾಭ ಪಡೆಯಬೇಕು, 5 ಲಕ್ಷ ಮೆಟ್ರಿಕ್ ಟನ್‌ವರೆಗೂ ರಾಗಿ ಖರೀದಿ ಮಾಡುವುದರಿಂದ ರೈತರು ಕೂಡಲೇ ನೊಂದಣಿ ಕೇಂದ್ರಗಳಿಗೆ ಬಂದು ರಾಗಿ ಮಾರಾಟಕ್ಕೆ ಹೆಸರು ನೊಂದಾಯಿಸಿಕೊಳ್ಳಬೇಕು.
ಸವಿತಾ, ಉಪ ನಿರ್ದೇಶಕರು, ಆಹಾರ ಇಲಾಖೆ,
ಬಾಗೇಪಲ್ಲಿಯಲ್ಲಿ ನೊಂದಣಿ ಪ್ರಕ್ರಿಯೆ ಆರಂಭಗೊಂಡಿಲ್ಲ
ಜಿಲ್ಲೆಯಲ್ಲಿ ಬೆಂಬಲ ಬೆಲೆ ನೊಂದಣಿ ಪ್ರಕ್ರಿಯೆಯಲ್ಲಿ ಆರಂಭದಿಂದಲೂ ಸಮಸ್ಯೆಗಳ ಆಗರ ಎದ್ದು ಕಾಣುತ್ತಿದೆ. 15 ರಿಂದಲೇ ನೊಂದಣಿ ಶುರುವಾದರೂ ಜಿಲ್ಲೆಯಲ್ಲಿ 3, 4 ದಿನ ನೊಂದಣಿ ಪ್ರಕ್ರಿಯೆ ತಡವಾಗಿ ಆರಂಭಗೊಂಡಿತು. ಇನ್ನೂ ರಾಗಿ ಹೆಚ್ಚು ಬೆಳೆಯುವ ಬಾಗೇಪಲ್ಲಿಯಲ್ಲಿ ಇಲ್ಲಿಯವರೆಗೂ ನೊಂದಣಿ ಆರಂಭಗೊಂಡಿಲ್ಲ.