ಜಾನುವಾರ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

By Kannadaprabha News  |  First Published Dec 22, 2022, 5:48 AM IST

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರ ಅನುಸಾರ ಜಾನುವಾರುಗಳ ರಕ್ಷಣೆ ಸಂಬಂಧ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಸೂಚನೆ ನೀಡಿದರು.


 ತುಮಕೂರು (ಡಿ.22): ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020ರ ಅನುಸಾರ ಜಾನುವಾರುಗಳ ರಕ್ಷಣೆ ಸಂಬಂಧ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ನಡೆದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಕುರಿತ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ ಕೋಣ ಹಾಗೂ ಎಮ್ಮೆಗಳ ಹತ್ಯೆಯನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ನಿಷೇಧಿಸಿದ್ದು, ಈ ಅಧಿನಿಯಮದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

Latest Videos

undefined

ಅಕ್ರಮ ಸಾಗಾಣಿಕೆಗಳನ್ನು ( Cow)  ವಶಪಡಿಸಿಕೊಂಡ ನಂತರ ಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲಿಸಿ, ಗೋವುಗಳನ್ನು (Health)  ತಪಾಸಣೆಗೆ ಒಳಪಡಿಸಿ ರಕ್ಷಿಸಲ್ಪಟ್ಟಂತಹ ಜಾನುವಾರುಗಳನ್ನು ಜಿಲ್ಲೆಯ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಗೋಶಾಲೆಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗೋಹತ್ಯೆ ನಿಷೇಧ ಕಾಯ್ದೆ-2020 ಸೆಕ್ಷನ್‌ 8ರ ಪ್ರಕಾರ ಕಾನೂನು ಬಾಹಿರ ಕಸಾಯಿಖಾನೆಗಳನ್ನು ಸಬ್‌ ಇನ್ಸ್‌ಪೆಕ್ಟರ್‌ ದರ್ಜೆಗಿಂತ ಕಡಿಮೆ ಇಲ್ಲದ ಪೊಲೀಸ್‌ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಜಪ್ತಿ ಮಾಡುವ ಅಧಿಕಾರ ಹೊಂದಿದ್ದು, ಜಪ್ತಿ ಮಾಡಿದ ನಂತರ ಮುಟ್ಟುಗೋಲಿಗಾಗಿ ಆಯಾ ಉಪವಿಭಾಗೀಯ ದಂಡಾಧಿಕಾರಿಗಳ ಮುಂದೆ ವರದಿ ಮಾಡಬೇಕು ಎಂದರು.

ವರದಿಯನ್ನು ಸ್ವೀಕರಿಸಿದ ನಂತರ ದಂಡಾಧಿಕಾರಿಗಳು ಅಪರಾಧವನ್ನು ಅಧಿನಿಯಮದಡಿಯಲ್ಲಿ ಎಸಗಲಾಗಿದೆ ಅಥವಾ ಎಸಗಬೇಕೆಂದು ಉದ್ದೇಶಿಸಲಾಗಿದೆಯೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು, ಅಕ್ರಮ ಕಸಾಯಿಖಾನೆಗಳ ಬಗ್ಗೆ ನಿಗಾವಹಿಸಬೇಕು, ವಶಪಡಿಸಿಕೊಳ್ಳಲಾದ ಜಾಗಗಳ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ನಿಯಮ 8(4) ಅಡಿಯಲ್ಲಿ ಮುಟ್ಟುಗೋಲು ಹಾಕಲು ಅವಕಾಶವಿದೆ ಎಂದರು.

ಜಿಲ್ಲೆಯಲ್ಲಿ ಸಂಪೂರ್ಣವಾಗಿ ಜಾನುವಾರು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಮತ್ತು ಪಶುವ್ಯೆದ್ಯಕೀಯ ಇಲಾಖೆ, ಪೊಲೀಸ್‌ ಇಲಾಖೆಗಳ ಹಾಗೂ ಕಂದಾಯ ಸೇರಿದಂತೆ ನಾವೆಲ್ಲರೂ ಪರಸ್ಪರ ಸಹಕಾರದಿಂದ ವ್ಯವಸ್ಥಿತವಾಗಿ ಶ್ರಮಿಸಬೇಕೆಂದು ಅವರು ಕರೆ ನೀಡಿದರು.

ತಿಪಟೂರು ಉಪವಿಭಾಗದ ಪೋಲಿಸ್‌ ಉಪಾಧ್ಯಕ್ಷ ಸಿದ್ದಾರ್ಥ ಗೋಯೆಲ್‌, ಪೋ›ಬೇಷನರಿ ಐಪಿಎಸ್‌, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಅಧಿನಿಯಮದ ಅನುಷ್ಠಾನ, ಪರಿಣಾಮ ಮೊದಲಾದ ಮಾಹಿತಿಯನ್ನು ಸಭೆಗೆ ನೀಡಿ ಮಾತನಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಾಪುರವಾಡ್‌, ಜಿಲ್ಲಾ ಪಶು ಸಂಗೋಪನ ಇಲಾಖೆಯ ಉಪ ನಿರ್ದೇಶಕ ಡಾ. ಜಯಣ್ಣ, ಪಶುಪಾಲನಾ ಮತ್ತು ಪಶುವ್ಯೆದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ.ಜಿ ನಂದೀಶ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಾಮನಿರ್ದೇಶಿತ ಸದಸ್ಯ ಪಾರಸ್‌ ಜೈನ್‌, ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸಿಲ್ದಾರ್‌ಗಳು, ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಭಾಗವಹಿಸಿದ್ದರು.

ನಿಯಮಾನುಸಾರ ಜಾನುವಾರು ಸಾಗಟಕ್ಕೆ ಅವಕಾಶ

ಕಾಯ್ದೆಯ ಸೆಕ್ಷನ್‌ 5ರ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲೂ ರಾಜ್ಯದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಲ್ಲುವ ಉದ್ಧೇಶಕ್ಕೆ ಜಾನುವಾರುಗಳನ್ನು ಸಾಗಿಸಬಾರದು ಅಥವಾ ಸಾಗಾಣಿಕೆಗೆ ಅವಕಾಶ ಮಾಡಿಕೊಡಬಾರದು. ನಿಯಮ ಉಲ್ಲಂಘಿಸಿ ಸಾಗಣೆ ಮಾಡಿದರೆ ಅದು ಅಪರಾಧ ಕೃತ್ಯವಾಗಲಿದೆ. ಆದರೆ, ಕೃಷಿ ಮತ್ತು ಪಶುಸಂಗೋಪನೆ ಉದ್ಧೇಶಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಜಾನುವಾರು ಸಾಗಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

click me!