Rain Deficit : ಬಾರದ ಮಳೆ, ಕೂಡ್ಲಿಗಿ ತಾಲೂಕಿನ ಹಳ್ಳಿಹಳ್ಳಿಗಳಿಂದ ಜನರ ಗುಳೆ

Kannadaprabha News   | Kannada Prabha
Published : Jul 05, 2026, 05:48 AM IST
Rain Deficit Forces Kudligi Farmers to Migrate to Cities

ಸಾರಾಂಶ

ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!

ಭೀಮಣ್ಣ ಗಜಾಪುರ

ಕೂಡ್ಲಿಗಿ (ವಿಜಯನಗರ): ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!

ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾ, ಗೋವಿಂದಗಿರಿ, ಬಂಡೆಬಸಾಪುರ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ಜನತೆ ಗುಳೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. 2 ದಿನಗಳ ಹಿಂದೆ ಶ್ರೀಕಂಠಾಪುರ ತಾಂಡಾದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಸದಾ ಬರವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಈಗ್ಗೆ 4-5 ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು. ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಸಿ ಇದ್ದಾಗಲೇ ಕಮರಿ ಹೋಗಿವೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲು ಇಲ್ಲಿಯ ರೈತರಿಗೆ ಗುಳೆ ಅನಿವಾರ್ಯವಾಗಿದೆ.

ಕೆಲ ಕುಟುಂಬಗಳು ಬೆಂಗಳೂರು ಕಡೆಗೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಲು ಮುಂದಾಗಿದ್ದಾರೆ. ಕುಟುಂಬದ ಹೆಣ್ಣು ಮಕ್ಕಳು ಬೆಂಗಳೂರಿನ ಮನೆಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಂಗಳೂರಿಗೆ ಶೇ.30ರಷ್ಟು ಮಾತ್ರ ಹೋಗಿದ್ದಾರೆ. ಉಳಿದಂತೆ ಶೇ.70ರಷ್ಟು ಜನರು ಮೈಸೂರು, ಮಂಡ್ಯ, ಕಿಕ್ಕೇರಿ, ಚನ್ನರಾಯಪಟ್ಟಣ, ಮಂಗಳೂರು, ಚಿಕ್ಕಮಗಳೂರು ಕಡೆಗೆ ಕಬ್ಬು ಕಟಾವು, ಕಾಫಿ ಬೀಜ ಬಿಡಿಸುವ ಕಾರ್ಯಕ್ಕೆ ತೆರಳುತ್ತಿದ್ದಾರೆ.

ಉಳಿದಂತೆ ವಯಸ್ಸಾದವರು, ಶಾಲೆಗೆ ಹೋಗುವ ಮಕ್ಕಳು ಮಾತ್ರ ಗ್ರಾಮಗಳಲ್ಲಿ ಉಳಿದುಕೊಂಡಿದ್ದಾರೆ. ತಂದೆ- ತಾಯಿ ಇಲ್ಲದೆ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಮಾತ್ರ ಆ ದೇವರಿಗೆ ಪ್ರೀತಿ. ಆ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊರುವವರು ಯಾರು? ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದ್ದು, ಜೊತೆಗೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಉದಾಹರಣೆ ಕಣ್ಣ ಮುಂದೆ ಕಾಣಬಹುದಾಗಿದೆ.

2 ದಿನಗಳ ಹಿಂದೆ ರಾತ್ರೋರಾತ್ರಿ ತಾಲೂಕಿನ ಶ್ರೀಕಂಠಾಪುರ ತಾಂಡಾದಿಂದ ವೆಂಕಟೇಶನಾಯ್ಕ ಎನ್ನುವ ಮೇಸ್ತ್ರಿ ನೇತೃತ್ವದಲ್ಲಿ 3 ಲಾರಿಗಳಲ್ಲಿ ನಿತ್ಯದ ಬಳಕೆಯ ವಸ್ತುಗಳು, ಪಾತ್ರೆ, ಬಿಂದಿಗೆ ಸೇರಿದಂತೆ ಮಕ್ಕಳು ಮರಿಗಳನ್ನು ಹೊತ್ತುಕೊಂಡು ಸುಮಾರು 50 ಜನರು ತುತ್ತಿನ‌ ಚೀಲ ತುಂಬಿಸಿಕೊಳ್ಳಲು ಹೊರಟಿದ್ದು ನೋಡುಗರ ಮನ ಕಲಕಿತು. ತಾಂಡಾಗಳ ಜನರು ಬಯಲು ಸೀಮೆಯಿಂದ ಕಾಫಿ ಸೀಮೆಯತ್ತ ಗುಳೆ ಹೊರಟಿದ್ದಾರೆ.

ತಾಲೂಕಿನ ತಾಂಡಾಗಳು ಸೇರಿದಂತೆ ಅನೇಕ ಗ್ರಾಮದ ಜನರು ಗುಳೆ ಹೋಗುತ್ತಿದ್ದಾರೆ. ಅದಕ್ಕೆ ಸರ್ಕಾರ ನರೇಗಾದಂತಹ ಯೋಜನೆ ಜಾರಿಗೊಳಿಸಿದೆ. ಆದರೆ ಅದು ಕೇವಲ 3 ತಿಂಗಳ ಕೆಲಸ ಮಾತ್ರ. ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಮಲೆನಾಡು ಕಡೆ ಜೀವನ ಮಾಡಲು ಹೋಗುತ್ತಿದ್ದೇವೆ.

ಕುಬೇರನಾಯ್ಕ, ಶ್ರೀಕಂಠಾಪುರ ತಾಂಡಾದ ಕೂಲಿಕಾರ್ಮಿಕ

ಮುಂಗಾರು ಕೈಕೊಟ್ಟಿದ್ದರಿಂದ ಬರದ ನಾಡು ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ 50ಕ್ಕೂ ಹೆಚ್ಚು ಕುಟುಂಬಗಳು ಮಲೆನಾಡು, ಬೆಂಗಳೂರು ಕಡೆಗೆ ಲಾರಿಗಳಲ್ಲಿ ಗುಳೆ ಹೊರಟಿರುವುದು.

PREV
Read more Articles on
click me!

Recommended Stories

ಮಳೆಗಾಗಿ ನೂರಾರು ರೈತರು ಮಲೆ ಮಾದಪ್ಪನ ಮೊರೆ: ದೇವರು ಭಕ್ತರ ಕಣ್ಣೀರಿಗೆ ಸ್ಪಂದಿಸುತ್ತಾನಾ?
ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ