ಮಳೆಗೆ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ(ಜು.17): ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆಯ ಪ್ರಮಾಣ ತಗ್ಗಿದ್ದರಿಂದ ನಿಟ್ಟುಸಿರುಬಿಟ್ಟಿದ್ದ ಜನತೆಗೆ ಸಂಜೆಹೊತ್ತಿಗೆ ಮತ್ತೆ ಮಳೆ ತನ್ನ ರೌದ್ರನರ್ತನ ಮುಂದುವರಿಸಿದ್ದು, ಶನಿವಾರವೂ ಸತತವಾಗಿ ಮಳೆ ಸುರಿದಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಈ ಮೂಲಕ ಒಟ್ಟು 13 ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದೆ ವೇಳೆ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನೀರು ಪಾಲಾಗಿದ್ದಾನೆ.
ವ್ಯಕ್ತಿ ನೀರು ಪಾಲು:
ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಮೃತಪಟ್ಟಿರುವ ಘಟನೆ ನಿಪ್ಪಾಣಿ ತಾಲೂಕಿನ ಮಾಂದೂರಿನಲ್ಲಿ ಶನಿವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂದೂರು ಗ್ರಾಮದ ಶಿವಾಜಿ ಪೂರ್ವಿ (55) ಮೃತಪಟ್ಟಿರುವ ಮೀನುಗಾರ. ನಂತರ ಶಿವಾಜಿ ಮೃತದೇಹವನ್ನು ಪೊಲೀಸರು ಮತ್ತು ಸ್ಥಳೀಯರು ಹೊರಗೆ ತೆಗೆದಿದ್ದಾರೆ. ಈ ಘಟನೆಯು ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗದಗ: ತುಂಗಭದ್ರಾ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್ ಬೆಳೆ ಜಲಾವೃತ
ಪಶ್ಚಿಮಘಟ್ಟ ಮತ್ತು ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಮೂಡಲಗಿ ತಾಲೂಕಿನ ನಾಲ್ಕು ಸೇತುವೆಗಳು ಜಲಾವೃತವಾಗಿವೆ. ಕೆಲ ದ್ವಿಚಕ್ರ ವಾಹನ ಸವಾರರು ಅಪಾಯ ಲೆಕ್ಕಿಸದೇ ಜಲಾವೃತವಾದ ಸೇತುವೆ ಮೇಲೆಯೇ ಸಂಚರಿಸುತ್ತಿದ್ದಾರೆ. ಪ್ರಮುಖವಾಗಿ ಅವರಾದಿ-ಮಹಾಲಿಂಗಪುರ, ಸುಣಧೋಳಿ-ಮೂಡಲಗಿ, ವಡೇರಹಟ್ಟಿ-ಉದಗಟ್ಟಿಹಾಗೂ ಮೂಡಲಗಿ-ಭೈರನಹಟ್ಟಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿವೆ. ಪರಿಣಾಮ ಈ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿದೆ.
ಸದ್ಯ ಬಳ್ಳಾರಿ ನಾಲಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳಿಂದ ಘಟಪ್ರಭಾ ನದಿಗೆ 14,227 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಿದೆ. ಹೀಗಾಗಿ, ಮೂಡಲಗಿ ಗೋಕಾಕ ತಾಲೂಕಿನ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಅಪಾಯಮಟ್ಟ ಮೀರಿ ಹರಿಯುತ್ತಿರುವ ಘಟಪಭ್ರಾ ನದಿಯಿಂದ ಮುಳುಗಡೆಯಾಗಿರುವ ಸುಣಧೋಳಿ-ಮೂಡಲಗಿ ಸೇತುವೆ ಮೇಲೆ ದ್ವಿಚಕ್ರ ವಾಹನ ಸವಾರರು ಸಂಚಾರ ನಡೆಸಿದ್ದಾರೆ. ಸ್ವಲ್ಪ ಆಯತಪ್ಪಿಬಿದ್ದರೂ ನದಿ ಪಾಲಾಗುವ ಆತಂಕ ಎದುರಾಗಿದೆ. ನೆರೆಯ ಮಹಾರಾಷ್ಟ್ರದ ಮಹಾಬಳೇಶ್ವರ ಪ್ರದೇಶದಲ್ಲಿ ಶುಕ್ರವಾರ 143 ಮಿ.ಮೀಗೆ ಇಳಿಕೆ ಕಂಡಿದ್ದ ಮಳೆ ಪ್ರಮಾಣ ಶನಿವಾರ 178ಕ್ಕೆ ಏರಿಕೆಯಾಗಿದೆ. ಅದೆ ರೀತಿ ದೂಧಗಂಗಾ ನದಿಯಿಂದ 27128 ಕ್ಯುಸೆಕ್, ರಾಜಾಪೂರ 100792 ಕ್ಯುಸೆಕ್ ಸೇರಿದಂತೆ ಒಟ್ಟು ಕೃಷ್ಣಾ ನದಿಗೆ 127920 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೊಯ್ನಾ-153 ಮಿ.ಮೀ, ವಾರಣಾ-90 ಮಿ.ಮೀ, ಕಾಳಮ್ಮವಾಡಿ-117 ಮಿ.ಮೀ, ನವಜಾ-162 ಮಿ.ಮೀ, ಸಾಂಗ್ಲಿ 3ಮಿ.ಮೀ, ರಾಧಾನಗರಿ-133 ಮಿ.ಮೀ, ಮಹಾಬಳೇಶ್ವರ 178 ಮಿ.ಮೀ, ಕೊಲ್ಹಾಪುರ-20 ಮಿ.ಮೀ, ಪಾಟಗಾಂವ-137 ಮಿ.ಮೀ ಮಳೆಯಾಗಿದೆ.
ಬೆಳಗಾವಿ ತಾಲೂಕಿನ ಕೇದನೂರ ಮತ್ತು ಮಣ್ಣಿಕೇರಿ ಗ್ರಾಮದಲ್ಲಿ ಪ್ರಕಾಶ ರಾಮಚಂದ್ರ, ಶಾಂತಾ ವರ್ಗೆ, ರೇಖಾ ರಾಜಾಯಿ, ಮಲ್ಲವ್ವ ಪಾಟೀಲ, ಪ್ರಭು ರಾಜಾಯಿ ಹಾಗೂ ಕಲ್ಪನಾ ಪಾಟೀಲ ಅವರ ಮನೆಗಳು ಮಳೆಯಿಂದ ಬಿದ್ದಿವೆ. ಹೀಗಾಗಿ, ಇವರ ಮನೆಗಳಿಗೆ ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಭೇಟಿ ನೀಡಿದ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ ಅವರು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿಗಳನ್ನು ವಿತರಿಸಿ, ಸಾಂತ್ವನ ಹೇಳಿದರು. ಇದೇ ವೇಳೆ ಗ್ರಾಮದ ಚರಂಡಿಗಳನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಸ್ವಚ್ಛಗೊಳಿಸಲಾಯಿತು.
ಹಾವೇರಿ: ತುಂಗಭದ್ರಾ, ವರದೆಯ ಅಬ್ಬರ: ಹೆಚ್ಚಿದ ಪ್ರವಾಹ, ಪರದಾಡಿದ ಗರ್ಭಿಣಿ
ಇನ್ನೂ ಖಾನಾಪುರ ತಾಲೂಕಿನ ಕಡತನ ಬಾಗೇವಾಡಿ-ಬೇಕವಾಟಿ ಹೋಗುವ ರಸ್ತೆ ಮೇಲೆ ಪಕ್ಕದ ಮರಗಳು ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದರಿಂದ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅನಾಹುತಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದ್ದ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಐವರು ಪ್ರಾಣಾಪಾಯದಿಂದ ಪಾರು:
ಮಳೆಗೆ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಮಾಬುಸಾಬ್ ಕರನಾರ್ಚಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಮಳೆಯಿಂದ ಮನೆ ನೆನೆದಿತ್ತು. ಇವರು ಪಕ್ಕದ ಕೋಣೆಯಲ್ಲಿದ್ದ ಪರಿಣಾಮ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಮನೆಯಲ್ಲಿ ಮಾಬುಸಾಬ್ ಕರನಾರ್ಚಿ ಸೇರಿ ಐವರು ವಾಸವಿದ್ದರು. ಘಟನೆಯು ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.