ಕೊನೆಗೂ ಬಿಡುವು ಕೊಟ್ಟ ಮಳೆ: ನಿಟ್ಟುಸಿರು ಬಿಟ್ಟ ಜನತೆ

By Girish Goudar  |  First Published May 22, 2022, 4:13 AM IST

*   ಎಡೆಬಿಡದೇ ಸುರಿದಿದ್ದ ಮಳೆಗೆ ಬಿಡುವು
*  ಕರಗದ ಕಾರ್ಮೋಡ
*  ವರುಣನಿಂದ ಹೈರಾಣಾಗಿದ್ದ ಜನತೆ ನಿಟ್ಟುಸಿರು
 


ಕಾರವಾರ(ಮೇ.22):  ಜಿಲ್ಲೆಯಲ್ಲಿ 3-4 ದಿನಗಳಿಂದ ವ್ಯಾಪಕವಾಗಿ ಸುರಿದಿದ್ದ ಮಳೆ ಶನಿವಾರ ವೇಳೆಗೆ ಬಹುತೇಕ ಕ್ಷೀಣಿಸಿದೆ. ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಆಗಾಗ ತುಂತುರು, ಜಿಟಿಜಿಟಿ ಮಳೆ ಬೀಳುತ್ತಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿದಿದೆ. ಭಟ್ಕಳ, ಕುಮಟಾ, ಹೊನ್ನಾವರ, ಶಿರಸಿ, ಸಿದ್ಧಾಪುರ, ಯಲ್ಲಾಪುರಗಳಲ್ಲಿ ಮಳೆ ಅಬ್ಬರಿಸಿತ್ತು. ಬಿರುಗಾಳಿ ಮಳೆಗೆ ಉರುಳಿದ ಮರಗಳಿಂದ ಕೆಲವು ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು. ಜನಜೀವನದಲ್ಲಿ ವ್ಯತ್ಯಯ ಉಂಟಾಗಿತ್ತು. ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಕೈಕೊಟ್ಟಿತ್ತು. ಮುಂಡಗೋಡದಲ್ಲಿ ರಸ್ತೆಯ ಮೇಲೆ ಮರಗಳು ಉರುಳಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

Tap to resize

Latest Videos

Land Slides: ಉತ್ತರ ಕನ್ನಡ ಜಿಲ್ಲೆಯ 5 ಸ್ಥಳಗಳಲ್ಲಿ ಮತ್ತೆ ಭೂಕುಸಿತ ಸಾಧ್ಯತೆ: ಈ 5 ಪ್ರದೇಶಗಳಿಗೆ ಅಪಾಯವಂತೆ!

ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಮತ್ತೆ ಮುಂದುವರಿಯುವ ಆತಂಕವೂ ಉಂಟಾಗಿತ್ತು. ಆದರೆ ಶನಿವಾರ ಬೆಳಗ್ಗೆ ಆಗುತ್ತಿದ್ದಂತೆ ಕವಿದ ಕಾರ್ಮೋಡ ಕರಗದಿದ್ದರೂ ಮಳೆ ಮಾತ್ರ ಇಳಿಮುಖವಾಯಿತು. ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ನಗರ ಪ್ರದೇಶದಲ್ಲಿ ಮಳೆಗಾಲದ ಸಿದ್ಧತೆಗೆ ಮಳೆ ಕೈಕೊಟ್ಟಿತು. ಎಲ್ಲೆಡೆ ಚರಂಡಿಗಳಲ್ಲಿ ತುಂಬಿದ ತ್ಯಾಜ್ಯ, ಹೂಳನ್ನು ತೆಗೆಯಲಾಗಿಲ್ಲ. ಮಳೆಗಾಲದ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆಯಾಗಿಲ್ಲ. ಅಷ್ಟರಲ್ಲಿ ಮಳೆ ಅಬ್ಬರಿಸಿತ್ತು.
ಮೇ ಅಂತ್ಯದಲ್ಲಿ ಮಳೆಗಾಲದ ಸಿದ್ಧತೆಯಲ್ಲಿ ಜನತೆ ಬಿರುಸಿನಿಂದ ತೊಡಗಿಕೊಳ್ಳುತ್ತಾರೆ. ಮಳೆಗಾಲ ಕಳೆಯಲು ದವಸ ಧಾನ್ಯಗಳ ಶೇಖರಣೆ, ಸಂಪರ್ಕಕ್ಕಾಗಿ ಕಾಲು ಸಂಕಗಳ ನಿರ್ಮಾಣ, ಉರುವಲು ಜೋಡಿಸುವುದು... ಹೀಗೆ ಹತ್ತು ಹಲವು ಕೆಲಸಗಳು ನಡೆಯಬೇಕಾದ ದಿನಗಳಲ್ಲಿ ಭಾರಿ ಮಳೆ ಹಗಲು ರಾತ್ರಿ ಸುರಿದು ಜನತೆಯನ್ನು ಹೈರಾಣಾಗಿಸಿತು.

ಮೀನುಗಾರಿಕೆ ಕರಾವಳಿಯ ಪ್ರಮುಖ ಉದ್ಯಮವಾಗಿದೆ. ಸಾವಿರಾರು ಕುಟುಂಬ ಮೀನುಗಾರಿಕೆಯನ್ನು ಅವಲಂಬಿಸಿದೆ. ಬಿರುಗಾಳಿ ಮಳೆ ಮೀನುಗಾರಿಕೆಯ ಮೇಲೂ ದುಷ್ಪರಿಣಾಮ ಬೀರಿತು. ಸದ್ಯ ಭಾರಿ ಮಳೆ ನಿಂತಿದೆ. ಆದರೆ ದಟ್ಟವಾದ ಮೋಡ ಕವಿದ ವಾತಾವರಣ ಇದ್ದು, ಆಗಾಗ ತುಂತುರು ಮಳೆಯಷ್ಟೇ ಬೀಳುತ್ತಿದೆ. ಜನ ಸಂಚಾರಕ್ಕೆ ಶನಿವಾರ ಯಾವುದೇ ತೊಂದರೆ ಉಂಟಾಗಿಲ್ಲ. ಈ ಮಳೆ ಸಂಪೂರ್ಣ ನಿಲ್ಲುವಷ್ಟರಲ್ಲಿ ಮುಂಗಾರು ಮಳೆ ಶುರುವಾಗುವ ನಿರೀಕ್ಷೆ ಇದೆ.

ಮಳೆಗೆ ಮಂಕಾದ ಮಾವಿನ ಹಂಗಾಮು

ಮಾವಿನ ಹಣ್ಣುಗಳು ಭರದಿಂದ ಮಾರಾಟವಾಗಬೇಕಿದ್ದ ದಿನಗಳಲ್ಲಿ ಭರ್ಜರಿ ಮಳೆ ಬಿದ್ದಿದ್ದರಿಂದ ಮಾವಿನ ದರ ಹಠಾತ್‌ ಕುಸಿಯಿತು. ಬೆಳೆಗಾರರು ಹಾಗೂ ಮಾರಾಟಗಾರರಿಗೆ ಮಳೆ ಬರೆ ಎಳೆಯಿತು. ಮಳೆ ಬಿದ್ದೊಡನೆ ಮಾವಿಗೆ ಸಹಜವಾಗಿ ಬೇಡಿಕೆಯೂ ಕಡಿಮೆಯಾಗುತ್ತದೆ. ಈ ಬಾರಿ ಮಾವಿನ ಹಂಗಾಮು ವಿಳಂಬವಾಗಿ ಆರಂಭವಾಗಿತ್ತು. ಮಾರುಕಟ್ಟೆಗೆ ಭರಪೂರ ಹಣ್ಣುಗಳು ಬರುತ್ತಿದ್ದಂತೆ ಮಳೆ ಶುರುವಾಗಿ ಮಾವಿನ ಹಂಗಾಮನ್ನು ಮಂಕಾಗಿಸಿತು.
 

click me!