ರೈಲಲ್ಲಿ ಕೋವಿಡ್‌ ಚಿಕಿತ್ಸಾ ಬೋಗಿ ಮರುಸಿದ್ಧತೆ

By Kannadaprabha NewsFirst Published Apr 21, 2021, 8:57 AM IST
Highlights

ರೈಲ್ವೆ ಬೋಗಿಗಳನ್ನು ಕೋವಿಡ್ ಐಸೋಲೇಷನ್ ವಾರ್ಡ್‌ಗಳಾಗಿ ಮಾರ್ಪಾಟು ಮಾಡಲಾಗುತ್ತಿದೆ. ಕೊರೋನಾ ಸೋಂಕಿತರಿಗೆ ಚಿಕಿತ್ಸೆ  ನೀಡಲು ಸೂಕ್ತ  ರೀತಿಯಲ್ಲಿ ಸಿದ್ಧಮಾಡಲಾಗುತ್ತಿದೆ. 

ವರದಿ :  ಶಿವಾನಂದ ಗೊಂಬಿ

 ಹುಬ್ಬಳ್ಳಿ (ಏ.21):  ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ನೈರುತ್ಯ ರೈಲ್ವೆ ವಲಯ ಕಳೆದ ವರ್ಷ ಸಿದ್ಧಪಡಿಸಿಕೊಂಡಿದ್ದ ಐಸೋಲೇಷನ್‌ ಬೋಗಿಗಳನ್ನು ಇದೀಗ ಮತ್ತೆ ಮರುಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಂಕಿನ ಎರಡನೇ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 270 ಐಸೋಲೇಷನ್‌ ಬೋಗಿಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ.

ಕಳೆದ ವರ್ಷ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಯಲ್ಲಿ ಜಾಗ ಸಿಗದಂತಹ ಪರಿಸ್ಥಿತಿ ಇತ್ತು. ಆಗ ಮುಂಜಾಗ್ರತಾ ಕ್ರಮವಾಗಿ ರೈಲ್ವೆ ಬೋಗಿಗಳನ್ನು ಐಸೋಲೇಷನ್‌ ವಾರ್ಡ್‌ಗಳಂತೆ ಪರಿವರ್ತಿಸಿ ಇರಿಸಿಕೊಳ್ಳಿ, ಆಸ್ಪತ್ರೆಗಳು ಸಂಪೂರ್ಣ ಭರ್ತಿಯಾದರೆ ಬೇಕಾಗಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು.

ಖಾಸಗಿ ಆಸ್ಪತ್ರೆಗಳಿಂದ ಹೋಂ ಕ್ವಾರಂಟೈನ್‌ ಪ್ಯಾಕೇಜ್‌ .

ಅದರಂತೆ ನೈರುತ್ಯ ರೈಲ್ವೆ ವಲಯದಲ್ಲಿ ಬರೋಬ್ಬರಿ 312 ಬೋಗಿಗಳನ್ನು ಐಸೋಲೇಷನ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿತ್ತು. ಪ್ರತಿ ಬೋಗಿಯಲ್ಲಿ 8 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಿತ್ತು. ಪ್ರತಿ ವಾರ್ಡ್‌ನಲ್ಲೂ ಆಕ್ಸಿಜನ್‌ ವ್ಯವಸ್ಥೆ ಸೇರಿದಂತೆ ಐಸಿಯುಗೆ ಅಗತ್ಯವಿರುವ ಪರಿಕರಗಳನ್ನು ವ್ಯವಸ್ಥೆ ಮಾಡಿ ಬೇರೆ ಬೇರೆ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು. ಆದರೆ, ತದನಂತರ ಕೊರೋನಾ ನಿಯಂತ್ರಣಕ್ಕೆ ಬಂದಿದ್ದರಿಂದ ಸಂಪೂರ್ಣವಾಗಿ ಬಳಕೆಯಾಗಿರಲಿಲ್ಲ. ಸದ್ಯ 312ರಲ್ಲಿ 270 ಐಸೋಲೇಷನ್‌ ಬೋಗಿಗಳಿವೆ.

ಈಗಿನ ಸೂಚನೆಯೇನು?:  ಈಗಾಗಲೇ ಮಹಾರಾಷ್ಟ್ರದ ನಂದೂರಬರ್‌ನಲ್ಲಿ ಐಸೋಲೇಷನ್‌ ಬೋಗಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಅದೇ ರೀತಿ ನೈರುತ್ಯ ರೈಲ್ವೆ ವಲಯದಲ್ಲೂ ಸಿದ್ಧಪಡಿಸಿಟ್ಟುಕೊಳ್ಳಿ. ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿದರೆ ಕೊಡಲು ಸಿದ್ಧರಾಗಿರಿ ಎಂದು ರೈಲ್ವೆ ಮಂಡಳಿ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

click me!