
ಬೆಂಗಳೂರು(ಜು.25): ಉಗ್ರರ ತರಬೇತಿ ಕೇಂದ್ರವಾಗುತ್ತಿದೆ ಎಂಬ ಆರೋಪ ಬಂದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು ದಿಢೀರ್ ಪರಿಶೀಲನೆ ನಡೆಸಿ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಬ್ಯಾರಕ್‌ಗಳಲ್ಲಿ ಮೂರು ಮೊಬೈಲ್‌ಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಕಾರಾಗೃಹದ ಅಧಿಕಾರಿಗಳು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Suspected terrorists: ಶಂಕಿತ ಉಗ್ರರ ಮೊಬೈಲ್ ರಹಸ್ಯ ಬೇಧಿಸಲು ಸಿದ್ಧತೆ
ಇತ್ತೀಚೆಗೆ ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಐವರು ಶಂಕಿತ ಉಗ್ರರು ಸಿಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ವಿಚಾರಣೆ ವೇಳೆ ಬಂಧಿತ ಶಂಕಿತ ಉಗ್ರರನ್ನು ಭಯೋತ್ಪಾದಕ ಸಂಘಟನೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೇರಳ ಮೂಲದ ಶಂಕಿತ ಎಲ್‌ಇಟಿ ಉಗ್ರ ಟಿ.ನಸೀರ್ ನೇಮಕಗೊಳಿಸಿದ್ದ ಎಂಬ ಸಂಗತಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಉಗ್ರರ ತರಬೇತಿ ಕೇಂದ್ರವಾಗುತ್ತಿದೆ ಎಂದು ಅಪವಾದಕ್ಕೆ ತುತ್ತಾಗಿತ್ತು. ಈ ಆರೋಪ ಬೆನ್ನಲ್ಲೇ ಜೈಲಿನಲ್ಲಿ ದಿಢೀರ್ ದಾಳಿ ನಡೆಸಿ ಕಾರಾಗೃಹದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಆಗ ಕಾರಾಗೃಹದ ಶೌಚಗೃಹದ ಹಿಂಭಾಗದಲ್ಲಿ 1 ಸ್ಯಾಮ್‌ಸಂಗ್ ಮೊಬೈಲ್ ಹಾಗೂ ಭದ್ರತಾ ವಿಭಾಗ-2ರಲ್ಲಿ ನೋಕಿಯಾ ಮೊಬೈಲ್ ಹಾಗೂ ಒನಿಡಾ ಸ್ಮಾರ್ಚ್‌ಫೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.