
ರಾಯಚೂರು (ಜ.31): ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅಮಾಯಕ ಬಾಲಕಿಯೊಬ್ಬಳು ಬಲಿಯಾದ ದಾರುಣ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ನಡೆದಿದೆ. ನೀರು ಕುಡಿಯಲು ಹೋದ 11 ವರ್ಷದ ವಿದ್ಯಾರ್ಥಿನಿ ತನುಶ್ರೀ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಗ್ರಾಮದ ಹರಿಜನ ವಾರ್ಡ್‌ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಬಾಲಕಿ ತನುಶ್ರೀ ನೀರು ಕುಡಿಯಲು ಹೋಗಿದ್ದಳು. ಈ ವೇಳೆ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ (RO Plant) ನೀಡಲಾಗಿದ್ದ ವಿದ್ಯುತ್ ವೈರ್ ಕಿತ್ತು ಬಂದಿದ್ದು, ಅಕಸ್ಮಿಕವಾಗಿ ಬಾಲಕಿಗೆ ತಗುಲಿದೆ. 5ನೇ ತರಗತಿಯಲ್ಲಿ ಓದುತ್ತಿದ್ದ ತನುಶ್ರೀ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಶಾಲಾ ಆವರಣದಲ್ಲಿ ವಿದ್ಯುತ್ ವೈರ್‌ಗಳು ಅಸ್ತವ್ಯಸ್ತವಾಗಿದ್ದರೂ ಗಮನಹರಿಸದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಸುಗೂಸಿನಂತಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸಿಂಧನೂರು ಬಿಇಒ ಬಸಲಿಂಗಪ್ಪ ಪವಾರ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, "ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ತಪ್ಪಿತಸ್ಥ ಮುಖ್ಯಗುರುಗಳು ಹಾಗೂ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಲು ಶಿಫಾರಸ್ಸು ಮಾಡುತ್ತೇನೆ," ಎಂದು ತಿಳಿಸಿದ್ದಾರೆ. ಅಲ್ಲದೆ, ಮೃತ ಬಾಲಕಿಯ ಕುಟುಂಬಕ್ಕೆ ಶಿಕ್ಷಕರ ಕಲ್ಯಾಣ ನಿಧಿ (SWF) ವತಿಯಿಂದ 2 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.