
ರಾಯಚೂರು (ಜು.30): ಬೋರ್‌ವೆಲ್ ಪಂಪ್‌ಸೆಟ್ ಆನ್ ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಶಿವಕುಮಾರ್(18) ಎಂದು ಗುರುತಿಸಲಾಗಿದೆ. ಎಂದಿನಂತೆ ಇಂದು ಕೂಡ ಬೆಳಗ್ಗೆಯೇ ಪಂಪ್‌ಸೆಟ್ ಆನ್ ಮಾಡಿಬರಲು ಹೊಲಕ್ಕೆ ತೆರಳಿದ್ದ ಮೃತ ಶಿವಕುಮಾರ್. ಪಂಪ್ ಸೆಟ್ ಆನ್ ಮಾಡುವ ವೇಳೆ ತಂತಿ ತಗುಲಿ ವಿದ್ಯುತ್ ಪ್ರವಹಿಸಿದೆ, ಕರೆಂಟ್ ಶಾಕ್‌ನಿಂದ ಸ್ಥಳದಲ್ಲೇ ಕುಸಿದುಬಿದ್ದಿರುವ ಯುವಕ ಕೆಲ ಕ್ಷಣಗಳ ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: Electric Shock First Aid: ಕರೆಂಟ್ ಶಾಕ್ ಹೊಡೆದಾಗ ತಕ್ಷಣ ಹೀಗೆ ಮಾಡಿ ಜೀವ ಉಳಿಯುತ್ತೆ!
ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿತು. ಎದೆ ಎತ್ತರ ಬೆಳೆದುನಿಂತಿದ್ದ ಮಗ. ಚಿಕ್ಕವಯಸ್ಸಿಗೆ ಮನೆಯ ನೊಗ ಹೊತ್ತು ಹೆತ್ತವರಿಗೆ ಆಸರೆಯಂತಿದ್ದ ಮಗನ ಅಕಾಲಿಕ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.