
ಚಾಮರಾಜನಗರ(ಆ.27): ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಲ್ಲಿ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ 2,000 ರು. ನೀಡುವ ಮಹಾತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಆ.30ಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಕೊಡಬೇಕೆಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪ್ರಥಮ ಬಾರಿಗೆ ಭೇಟಿ ನೀಡಿ ಮಾತನಾಡಿದ ಅವರು, ಚಾಮರಾಜನಗರ ಕಾಂಗ್ರೆಸ್ ಭದ್ರ ಕೋಟೆಯಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಮೂರಲ್ಲಿ ನಮ್ಮ ಪಕ್ಷದ ಶಾಸಕರು ಇದ್ದಾರೆ. ಹೀಗಾಗಿ ಪಕ್ಷದ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯ ಯೋಜನೆಗಳನ್ನು ರೂಪಿಸಿ, ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿ ನಿಮ್ಮೆಲ್ಲರಾದ್ದಾಗಿದೆ ಎಂದರು.
ಕೈಗಾರಿಕೆ ಹೂಡಿಕೆ ಮಾಡೋರಿಗೆ ಪ್ರೋತ್ಸಾಹ: ಡಿ.ಕೆ.ಶಿವಕುಮಾರ್
ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರು ಹಾಗೂ ಶಾಸಕರು ಐದು ಗ್ಯಾರಂಟಿಯನ್ನು ಈಡೇರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಈಗಾಗಲೇ ಶಕ್ತಿ ಯೋಜನೆ ಜಾರಿಯಲ್ಲಿದೆ. ಗೃಹಜ್ಯೋತಿ ಯೋಜನೆ ಜುಲೈನಿಂದಲೇ ಜಾರಿಯಲ್ಲಿದೇ. ಬಿಪಿಎಲ್ ಪಡಿತರ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡುವ ಯೋಜನೆ ಅನುಷ್ಠಾನಗೊಂಡಿದೆ. ರಾಹುಲ್ ಗಾಂಧಿ ಅವರು 30ರಂದು ಚಾಲನೆ ನೀಡುತ್ತಿದ್ದಂತೆ ರಾಜ್ಯ ಎಲ್ಲಾ ಮನೆಗಳ ಕುಟುಂಬದ ಯಜಮಾನಿಗೆ ಬ್ಯಾಂಕ್ ಖಾತೆಗೆ 2,000 ರು. ಜಮಾ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಉಪ ಮುಖ್ಯಮಂತ್ರಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಚಾಮರಾಜನಗರಕ್ಕೆ ಉಪ ಮುಖ್ಯಮಂತ್ರಿಗಳಾದ ನಂತರ ಪ್ರಥಮ ಬಾರಿಗೆ ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಭಿಸಿ, ಉಪಯುಕ್ತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಂಘಟಿಸಿದರು ಎಂದರು,
ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗ ಶೆಟ್ಟಿ, ಎಚ್.ಎಂ.ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ನೆಲಮಂಗಲದ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮಾಜಿ ಸಂಸದ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ತೋಟೇಶ್, ಮಹೇಂದ್ರ ವರ್ಮ, ಹೊಂಗನೂರು ಚಂದ್ರು, ಜಿ.ಪಂ. ಮಾಜಿ ಸದಸ್ಯ ಕಾಗಲವಾಡಿ ಸದಾಶಿವಮೂರ್ತಿ, ಹೊಂಗನೂರು ಜಯರಾಜ್,ಗ್ರಾ.ಪಂ. ಅಧ್ಯಕ್ಷ ಪಿ. ಶೇಖರ್, ಪದ್ಮ ಪುರುಷೋತ್ತಮ್, ಮೊದಲಾದವರು ಇದ್ದರು.