ಮುಪ್ಪು ವಜ್ರ್ಯವಲ್ಲ, ಅಂತರಂಗದ ಸಾಧನೆಯ ದರ್ಶನ: ರಾಘವೇಶ್ವರ ಭಾರತೀ ಶ್ರೀ

By Kannadaprabha NewsFirst Published Jan 13, 2023, 2:07 PM IST
Highlights
  • ಮುಪ್ಪು ವಜ್ರ್ಯವಲ್ಲ, ಅಂತರಂಗದ ಸಾಧನೆಯ ದರ್ಶನ
  • ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ
  • ಕುಮಟಾದಲ್ಲಿ ರಂಗ ಮಹಾಬಲ, ಗಾನ ಮಹಾಬಲ ಪ್ರಶಸ್ತಿ ಪ್ರದಾನ
  • ಗುರುಭಿಕ್ಷೆ, ಭಾಸ್ಕರ ಹೆಗಡೆ ಸಂಸ್ಮರಣೆ ಕಾರ್ಯಕ್ರಮ

ಕುಮಟಾ (ಜ.13) : ಮುಪ್ಪು ಎಂದರೆ ವಜ್ರ್ಯವಲ್ಲ, ಅಂತರಂಗದ ಸಾಧನೆಯ ದರ್ಶನ. ಆ ವೇಳೆಯಲ್ಲಿ ಬದುಕಿನ ಸಾರ ಕಾಣುತ್ತದೆ. ಶ್ರೇಷ್ಠ ಕಲಾವಿದರಾದ ಮಹಾಬಲ ಹೆಗಡೆ, ಭಾಸ್ಕರ ಹೆಗಡೆ ಅವರು ರಂಗ ಸಾಕ್ಷಾತ್ಕಾರ ಆದವರು ಎಂದು ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ಹೊಸ ಹೆರವಟ್ಟಾದಲ್ಲಿ ಬುಧವಾರ ಶ್ರೀ ಮಹಾಬಲ ಶೋಧ ಸಂಸ್ಥಾನದಿಂದ ರಂಗ ಮಹಾಬಲ, ಗಾನ ಮಹಾಬಲ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಗುರು ಭಿಕ್ಷಾ, ಭಾಸ್ಕರ ಹೆಗಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನುಡಿದರು. ಎಲ್ಲರ ಮನೆಗಳೂ ಸಂಸ್ಕಾರದ ಮನೆಯಾಗಲಿ, ಗುರುವಿಗಾದರೂ, ಸಂಸ್ಥೆಗೂ, ಸಮಾಜಕ್ಕೂ ಬೇಕು ಎನ್ನುವಂತೆ ಬದುಕಬೇಕು. ಸಮಾಜಕ್ಕೆ ಇಂಥ ಮನೆಗಳ ಸಂಖ್ಯೆ ಹೆಚ್ಚಬೇಕು. ಮಹಾಬಲರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಖುಷಿಯಾಗಿದೆ. ಪ್ರಶಸ್ತಿ ಪಡೆದ ಐವರು ಸಾಧಕರೂ ಅನುಭವಿಗಳೇ ಎಂದರು.

ಸಂಪ್ರಾರ್ಥನೆ ನಡೆಸಿದ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟಕೆರೇಕೈ, ಅಂತರಂಗ ಬೆಳೆದು ಬಹಿರಂಗಕ್ಕೆ ಬರಬೇಕು. ಬಹಿರಂಗದಿಂದ ಅಂತರಂಗಕ್ಕೆ ರಂಗ ಯಾತ್ರೆ ನಡೆಸಬೇಕು. ಹಿಂದೆ ಗುರು ಮುಂದು ಗುರಿ ಇದ್ದರೆ ದಾರಿ ಸರಿ ಇರುತ್ತದೆ ಎಂದರು.

GouSwarga: ಇಂದಿನಿಂದ ಭಾನ್ಕುಳಿ ಗೋಸ್ವರ್ಗದಲ್ಲಿ ಗೋವು ದಿನ ಆಚರಣೆ

ರಂಗ ಮಹಾಬಲ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಕೃಷ್ಣಯಾಜಿ ಬಳ್ಕೂರು, ಹಸಿದು-ಹಸಿದು ತಿನ್ನುವ ಈ ಕಾಲದಲ್ಲಿ ಹಂಚಿ ತಿನ್ನುವವರು ಶ್ರೇಷ್ಠರು ಎಂದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಯಕ್ಷಗಾನದಲ್ಲಿ ಒಬ್ಬರೇ ಮಹಾಬಲ ಹೆಗಡೆ ಅವರು. ಸಾಹಿತ್ಯ, ಹಾಡುಗಾರಿಕೆ, ಪಾತ್ರ ಕಟ್ಟುವ ರೀತಿ ಅದ್ಭುತ ಎಂದರು.

ಪ್ರಶಸ್ತಿ ಪುರಸ್ಕೃತ, ನಾಟ್ಯ ವಿನಾಯಕ ದೇವಸ್ಥಾನ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ, ರಂಗ ಮಹಾಬಲ ಪ್ರಶಸ್ತಿ ಜೀರ್ಣಿಸಿಕೊಳ್ಳುವುದು ಕಷ್ಟ. ಮಹಾಬಲ ಹೆಗಡೆ ಅವರು ದೊಡ್ಡ ಭಂಡಾರ. ಪದ್ಯ, ಪಾತ್ರದ ಚೌಕಟ್ಟು ಮೀರದಂತೆ ಹೇಳಿಕೊಟ್ಟವರು. ಯಕ್ಷಗಾನದ ಜಗದ್ಗುರುಗಳು ಮಹಾಬಲ ಹೆಗಡೆ ಎಂದರು.

ಗಾನ ಮಹಾಬಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಮಾತನಾಡಿ, ಭಾರತ ರತ್ನ ಪ್ರಶಸ್ತಿ ಪಡೆದಕ್ಕಿಂತ ಖುಷಿಯಾಗಿದೆ. ಮಹಾಬಲ ಹೆಗಡೆ ಅವರಂಥವರು ನೂರಾರು ವರ್ಷಕ್ಕೆ ಒಬ್ಬರೂ ಇಲ್ಲ ಎಂದರು. ಇನ್ನೋರ್ವ ಭಾಗವತ ಜೋಗಿಮನೆ ಗೋಪಾಲಕೃಷ್ಣ ಹೆಗಡೆ, ಶ್ರೀ ಸಂಸ್ಥಾನದಿಂದ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ ಎಂದರು.

ಶಾಸಕ ಸುನೀಲ ನಾಯ್ಕ, ಡಾ. ಜಿ.ಎಲ್‌. ಹೆಗಡೆ, ಪಾರ್ವತಿ ಭಾಸ್ಕರ ಹೆಗಡೆ, ಶ್ರೀಕಾಂತ ಹೆಗಡೆ, ನಾಗವೇಣಿ ಹೆಗಡೆ, ಹಂಗಾರಕಟ್ಟೆರಾಜಶೇಖರ ಹೆಬ್ಬಾರ, ನಾರಾಯಣ ಯಾಜಿ, ಗುರುಪ್ರಸಾದ ಶೆಟ್ಟಿ, ಪ್ರಸನ್ನ ಹೆಗಡೆ, ಶಂಭು ಹೆಗಡೆ, ಡಾ. ಗಜಾನನ ಶರ್ಮಾ, ಎಂ.ಎನ್‌. ಹೆಗಡೆ, ಗೋಪಾಲಕೃಷ್ಣ ಭಾಗವತ, ಸತ್ಯ ಭಾಗವತ ಇನ್ನಿತರರು ಇದ್ದರು.

ಮನೆಮನೆಗೆ ರಾಘವ ರಾಮಾಯಣ: ರಾಮಚಂದ್ರಾಪುರ ಮಠದಿಂದ ವಿಶೇಷ ಅಭಿಯಾನ

ವಿಷ್ಣು ಗುಪ್ತ ವಿಶ್ವ ವಿದ್ಯಾಲಯಕ್ಕೆ ಸೆಲ್ಕೋ ಸಿಬ್ಬಂದಿ ಐದು ಲಕ್ಷ ರು., ಸತ್ಯ ಹಾಸ್ಯಗಾರ .50 ಸಾವಿರಗಳನ್ನು ಶ್ರೀಗಳಿಗೆ ಸಮರ್ಪಿಸಿದರು. ಮೋಹನ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮೋದ ಹೆಗಡೆ ನಿರ್ವಹಿಸಿದರು.

click me!