* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಪೂರ್ವಾರಾಧನೆ, ವಿಶೇಷ ಅಲಂಕಾರ
* ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನ ಮಹೋತ್ಸವ
* ಪ್ರತಿ ವರ್ಷ ಮೂರು ದಿನಗಳ ಕಾಲ ನಡೆಯುವ ಆರಾಧನೆ
ಗಂಗಾವತಿ(ಆ.24): ಕೋವಿಡ್ ಹಿನ್ನೆಲೆಯಲ್ಲಿ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ವರ್ಷದ ಆರಾಧನಾ ಮಹೋತ್ಸವ ಸರಳವಾಗಿ ಪ್ರಾರಂಭಗೊಂಡಿತು.
ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ರಾಯರ ವೃಂದಾವನಕ್ಕೆ ನಿರ್ಮಾಲ್ಯ, ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಷ್ಟೋತ್ತರ ಪಾರಾಯಣ, ಹರಿಕಥಾಮೃತಸಾರ ಪಾರಾಯಣ ಜರುಗಿತು. ಪ್ರತಿ ವರ್ಷ ಮೂರು ದಿನಗಳ ಕಾಲ ಆರಾಧನೆ ಅದ್ಧೂರಿಯಾಗಿ ಜರುಗುತ್ತಿತ್ತು. ಮಂತ್ರಾಲಯ ಮಠದ ಸೂಚನೆ ಮೇರೆಗೆ ಸರಳ ರೀತಿಯಲ್ಲಿ ಪೂರ್ವಾರಾಧನೆ ನಡೆಯಿತು.
undefined
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕರಾಗಿರುವ ಜಿ. ಶ್ರೀಧರ ಅವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಪಯೋಗಿಸುವಂತೆ ಸೂಚನೆ ನೀಡಿದರು. ಮೂರು ದಿನಗಳ ಕಾಲ ನಡೆಯುವ ಆರಾಧನೆ ನಿಮಿತ್ತ ಭಾನುವಾರ ರಾತ್ರಿ ದವಸ ಧಾನ್ಯಗಳ ಪೂಜೆ ಜರುಗಿತು. ಆ. 24 ಮದ್ಯರಾಧನೆ ಮತ್ತು ಆ. 25ರಂದು ಉತ್ತರಾರಾಧನೆ ಸರಳ ರೀತಿಯಲ್ಲಿ ಜರುಗಲಿದೆ.
ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ
ಸತ್ಯನಾರಾಯಣ ಪೇಟೆ
ಜಯನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ನಡೆಯಿತು. ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ಮೂರ್ತಿಗೆ ಅಲಂಕಾರ, ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆ. 24ರಂದು ಮದ್ಯಾರಾಧನೆ ಅದ್ಧೂರಿಯಾಗಿ ಜರುಗಲಿದೆ. ದೇವಸ್ಥಾನದ ಆವರಣದಲ್ಲಿ ರಥೋತ್ಸವ ಜರುಗಲಿದ್ದು, ವಿವಿಧ ಭಜನಾ ಮಂಡಳಿಗಳು ಭಾಗವಹಿಸಲಿವೆ.
ಆನೆಗೊಂದಿ
ತಾಲೂಕಿನ ಆನೆಗೊಂದಿಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಸರಳ ರೀತಿಯಲ್ಲಿ ರಾಘವೇಂದ್ರಸ್ವಾಮಿಗಳ ಪೂರ್ವಾರಾಧನೆ ಜರುಗಿತು. ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಎರಡು ದಿಗಳ ಕಾಲ ಮದ್ಯಾರಾಧನೆ ಮತ್ತು ಉತ್ತರಾರಾಧನೆ ಜರುಗಲಿದೆ. 9 ಯತಿವರೇಣ್ಯರ ಪುಣ್ಯ ಕ್ಷೇತ್ರ ಎನಿಸಿಕೊಂಡಿರುವ ನವ ವೃಂದಾವನಕ್ಕೂ ಭಕ್ತರು ಆಗಮಿಸಿ ದರ್ಶನ ಪಡೆದರು.
ನವಲಿ ಸಮೀಪದ ನವಲಿ ಗ್ರಾಮದ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನ ಮಹೋತ್ಸವ ಶದ್ಧಾ ಭಕ್ತಿಯಿಂದ ಜರುಗಿತು. ಬೆಳಗ್ಗೆ ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀಭೋಗಾಪುರೇಶ ಸ್ವಾಮಿಗೆ ವಿಶೇಷವಾಗಿ 10 ಕೆಜಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಅಲಂಕಾರ ಸೇವೆಯನ್ನು ಹೊಸಪೇಟೆ ನಗರಸಭಾ ವ್ಯವಸ್ಥಾಪಕ ಗುರುರಾಜ ಸೌದಿ ಮತ್ತು ಪೂರ್ವರಾಧನೆ ನೇತೃತ್ವವನ್ನು ಮಧುಸೂಧನ್ ಕುಲಕರ್ಣಿ ಗುಡೂರು ವಹಿಸಿದ್ದರು.