ಆಷಾಢ ಏಕಾದಶಿ: ಬೆಂಗಳೂರಿನಲ್ಲಿ ಮಂತ್ರಾಲಯ ಶ್ರೀಗಳಿಂದ ಭಕ್ತರಿಗೆ ತಪ್ತ ಮುದ್ರಧಾರಣೆ, ವಿಶೇಷ ಪೂಜೆ

Published : Jul 25, 2026, 07:35 PM IST
Ashada Ekadashi

ಸಾರಾಂಶ

Ashada Ekadashi: ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಬೆಂಗಳೂರು/ಗಂಗಾವತಿ (ಜು.25): ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಸುಬುದೇಂಧ್ರತೀರ್ಥ ಶ್ರೀಪಾದಂಗಳವರು ಭಕ್ತರಿಗೆ ತಪ್ತಮುದ್ರಾಧಾರಣೆ ನೆರವೇರಿಸಿದರು.

ಆಷಾಢ ಮೊದಲ ಏಕಾದಶಿಯ ಅಂಗವಾಗಿ ಶ್ರೀಮಠದಲ್ಲಿ ಶ್ರೀಮನ್ಮೂಲ ರಾಮದೇವರ ಪೂಜೆ, ಸುದರ್ಶನ ಹೋಮ, ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ವಿಶೇಷ ಪೂಜೆ ಹಾಗೂ ತೊಟ್ಟಿಲು ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುದರ್ಶನ ಹೋಮದಲ್ಲಿ ಭಾಗವಹಿಸಿದ ಬಳಿಕ ಶ್ರೀಗಳು ಸ್ವತಃ ತಪ್ತಮುದ್ರಾಧಾರಣೆ ಮಾಡಿಕೊಂಡು, ನಂತರ ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು.

ಶರೀರ ಶುದ್ಧೀಕರಣಕ್ಕೆ ತಪ್ತಮುದ್ರಾಧಾರಣೆ: ಶ್ರೀಗಳು

ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಸುಬುದೇಂಧ್ರತೀರ್ಥ ಶ್ರೀಪಾದಂಗಳವರು, "ಮಾನವನ ಶರೀರ ಶುದ್ಧೀಕರಣಕ್ಕಾಗಿ ಚಾತುರ್ಮಾಸ್ಯದ ಆಷಾಢ ಮೊದಲ ಏಕಾದಶಿಯಂದು ತಪ್ತಮುದ್ರಾಧಾರಣೆ ಮಾಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದರಿಂದ ಶರೀರ ಶುದ್ಧೀಕರಣ ಹಾಗೂ ಪಂಪಾ ಸಂಸ್ಕಾರವಾಗುತ್ತದೆ. ಈ ದಿನ ದಾನ, ಧರ್ಮಗಳನ್ನು ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ," ಎಂದು ಹೇಳಿದರು. ಸುದರ್ಶನ ಹೋಮದಲ್ಲಿ ಶಂಖ ಮತ್ತು ಚಕ್ರದ ಮುದ್ರೆಗಳನ್ನು ಪೂಜಿಸಿ, ನಂತರ ಅವುಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಲಾಗುತ್ತದೆ ಎಂದು ಶ್ರೀಗಳು ತಿಳಿಸಿದರು.

10 ಸಾವಿರಕ್ಕೂ ಅಧಿಕ ಭಕ್ತರು ಭಾಗಿ

ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ನಡೆದ ತಪ್ತಮುದ್ರಾಧಾರಣೆ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಬೆಂಗಳೂರು ಸೇರಿದಂತೆ ಮಂತ್ರಾಲಯ, ರಾಯಚೂರು, ಬಳ್ಳಾರಿ, ಧಾರವಾಡ, ಗಂಗಾವತಿ, ಹೊಸಪೇಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆ 8 ಗಂಟೆಗೆ ಆರಂಭವಾದ ತಪ್ತಮುದ್ರಾಧಾರಣೆ ಕಾರ್ಯಕ್ರಮ ಮಧ್ಯಾಹ್ನದವರೆಗೂ ನಡೆಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ರಾಯಚೂರಿನ ರಾಯಚೂರು ವಾಣಿ ಸಂಪಾದಕ ಅರವಿಂದ ಕುಲಕರ್ಣಿ ಅವರ ಕುಟುಂಬದವರು, ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಕರ್ನಾಟಕ ವಿಭಾಗದ ಪಿಆರ್‌ಒ ಸಂಜೀವ ಕುಲಕರ್ಣಿ, ಆನೆಗೊಂದಿ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ, ಮಾದಿನೂರು ಸುದೀಂದ್ರರಾವ್ ಕುಲಕರ್ಣಿ, ಪತ್ರಕರ್ತ ರಾಮಮೂರ್ತಿ ನವಲಿ, ವಿಜಯ ಕುಲಕರ್ಣಿ, ಆನಂದ ಕುಲಕರ್ಣಿ, ನಾಗರಾಜ್ ಚೂಡಿ, ಶ್ರೀನಿವಾಸರಾವ್ ಹೇರೂರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು. ಆಷಾಢ ಏಕಾದಶಿಯ ಈ ಧಾರ್ಮಿಕ ಕಾರ್ಯಕ್ರಮವು ಭಕ್ತರಲ್ಲಿ ಭಕ್ತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯದ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿತು.

PREV
Read more Articles on
click me!

Recommended Stories

ವಿಜಯನಗರ ಅರಸರ ಕಾಲದ ಅಣೆಕಟ್ಟಿಗೆ ಮತ್ತೆ ರೈತರ ಮೊರೆ: ಅಷ್ಟಕ್ಕೂ ಆಗಿದ್ದೇನು?
ಬಾಡಿಗೆ ಕಟ್ಟಡದಲ್ಲೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ: ಸಾರ್ವಜನಿಕರ ಪರದಾಟ ಹೆಚ್ಚಳ