
ಗಂಗಾವತಿ (ಜು.25): ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ. ಈ ಹಿಂದೆ ಗ್ರಾಮೀಣ ಪೊಲೀಸ್ ಠಾಣೆಯ ನಗರದ ಪೊಲೀಸ್ ಸಮುಚ್ಚಯದಲ್ಲಿ ಇತ್ತು. ತೀರಾ ಹಳೆಯದಾಗಿದ್ದರಿಂದ ಅನುದಾನ ಬರುತ್ತದೆ ಎನ್ನುವ ಲೆಕ್ಕಚಾರದಿಂದ ಇದ್ದ ಕಟ್ಟಡ ನೆಲಸಮ ಮಾಡಲಾಗಿದೆ.
ಬಾಡಿಗೆ ಕಟ್ಟಡದಲ್ಲಿ ಗ್ರಾಮೀಣ ಠಾಣೆ: ನಗರದ ಸಿಬಿಎಸ್ ಗಂಜ್ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಸಮಿತಿ ಅಧ್ಯಕ್ಷರ ಅತಿಥಿ ಗೃಹದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಇದ್ದು, ಇದಕ್ಕಾಗಿ 22 ಸಾವಿರ ರುಪಾಯಿಗಳನ್ನು ಸಮಿತಿಗೆ ಪೊಲೀಸ್ ಇಲಾಖೆ ಪಾವತಿಸುತ್ತಿದೆ. ಸಮಿತಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಇಲ್ಲದ ಕಾರಣ ಅಧ್ಯಕ್ಷರ ಅತಿಥಿ ಗೃಹವನ್ನು 55 ತಿಂಗಳು ಕರಾರು ಮಾಡಿದ್ದಾರೆ.
ಇದ್ದ ಕಟ್ಟಡ ನೆಲ ಸಮ: ತೀರಾ ಹಳೆಯದಾದ ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸಕಟ್ಟಡ ನಿರ್ಮಾಣಕ್ಕೆ ಜಾಗೆ ಸಿದ್ದಪಡಿಸಲಾಗಿತ್ತು. 40 ವರ್ಷಗ ಳ ಹಳೆಯದಾದ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಕ್ಕೆ ಕಾಯುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಹೊಸ ಕಟ್ಟಡ ಮರಿಚಿಕೆಯಾಗಿ ಉಳಿಯಿತು.
ಬಾರದ ಅನುದಾನ: ಗ್ರಾಮೀಣ ಪೊಲೀಸ್ ಠಾಣೆಯ ಹೊಸಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡಿನವರು 2 ಕೋಟಿ 80 ಲಕ್ಷ ರು ವೆಚ್ಚದ ಅಂದಾಜು ಪಟ್ಟಿ ಮಾಡಿ ರಾಜ್ಯ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡಿಗೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಅನುದಾನ ಬಾರದ ಕಾರಣ ಕಳೆದ ಒಂದು ವರ್ಷದಿಂದ ಹಾಳು ಬಿದ್ದಿದೆ.
ದೂರುದಾರರ ಪರದಾಟ: ಗಂಗಾವತಿ ನಗರ ಪೊಲೀಸ್ ಸಮುಚ್ಚಯದಲ್ಲಿ ಡಿವೈಎಸ್ಪಿ ಕಚೇರಿ, ನಗರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆ ಜೊತೆಗೆ ಗ್ರಾಮೀಣ ಪೊಲೀಸ್ ಠಾಣೆಯು ಇತ್ತು. ಆ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ವಿವಿಧ ರೀತಿಯ ಪ್ರಕರಣಗಳ ಕುರಿತು ದೂರು ನೀಡುತ್ತಿದ್ದು, ಈಗ 3 ಕೀಮಿ ದೂರದಲ್ಲಿ ಠಾಣೆ ಇರುವದರಿಂದ ಗ್ರಾಮೀಣ ಭಾಗದ ಜನರು ಪರದಾಡುವ ಪರಿಸ್ಥಿತಿ ಒದಗಿದೆ.
ಅಲ್ಲದೆ ಪೊಲೀಸ್ ಸಿಬ್ಬಂದಿಗಳು ತಮ್ಮ ವಸತಿ ಗೃಹದಿಂದ ಠಾಣೆಗೆ ಹೋಗಲು ವಿಳಂಭವಾಗುವ ಪರಿಸ್ಥಿತಿ ಎದುರಿಸುವ ಪರಿಸ್ಥಿತಿ ಒದಗಿದೆ. ಇನ್ನಾದರು ಸರ್ಕಾರ( ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡ್) ಅನುದಾನ ನೀಡಿದರೆ ಸಾರ್ವಜನಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಕೇಳಿ ಬರುತ್ತದೆ.
ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದೆ, ಹೊಸಕಟ್ಟಡಕ್ಕಾಗಿ ಸರ್ಕಾರ ಅನುದಾನ ಮಂಜೂರಿ ಮಾಡಿ ಅನುಮೋದನೆ ನೀಡಬೇಕಾಗಿದೆ. ಪ್ರತಿ ವರ್ಷ ಪ್ರತಿ ತಾಲೂಕಗಳಿಗೆ ಠಾಣೆಯ ಕಟ್ಟಡಕ್ಕಾಗಿ ಅನುದಾನ ನೀಡುತ್ತಾ ಬರುತ್ತದೆ. ಈ ವರ್ಷ ಅನುದಾನ ಬರಬಹುದು.
-ಜಾಯಪ್ಪ ನ್ಯಾಮಗೌಡರ್, ಡಿವೈಎಸ್ಪಿ ಗಂಗಾವತಿ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಹೊಸ ಕಟ್ಟಡದ ಪ್ರಸ್ತಾನೆಯ ಬಗ್ಗೆ ಮಾಹಿತಿ ಇಲ್ಲ. ಕಳೆದ 4 ತಿಂಗಳಿನಿಂದ ಅಧಿಕಾರ ವಹಿಸಿಕೊಂಡಿದ್ದೇನೆ. ಕಟ್ಟಡದ ಬಗ್ಗೆ ಮಾಹಿತಿ ಇಲ್ಲ.
-ಲಿಂಗರಾಜ್, ಎಇಇ, ಕರ್ನಾಟಕ ಸ್ಟೇಟ್ ಪೊಲೀಸ್ ಹೌಸಿಂಗ್ ಬೋರ್ಡ್, ರಾಯಚೂರು.