ಸಂಚಾರ ದಟ್ಟಣೆ ತಪ್ಪಿಸಲು ಪಾರ್ಕಿಂಗ್‌ ವ್ಯವಸ್ಥೆ ಜಾರಿ

By Kannadaprabha NewsFirst Published Jul 27, 2022, 2:43 PM IST
Highlights

ಬಹುವರ್ಷಗಳ ಬಳಿಕ ನಗರದ ವಾಹನ ನಿಲುಗಡೆ, ಏಕಮುಖ, ದ್ವಿಮುಖ ಸಂಚಾರದ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದ್ದು,ಸಂಚಾರ ದಟ್ಟಣೆ, ಕಿರಿಕಿರಿ ಇನ್ನು ಮುಂದೆ ಪರಿಹಾರವಾಗಲಿದೆ.

ಕಾರವಾರ (ಜು.27) : ಬಹುವರ್ಷಗಳ ಬಳಿಕ ನಗರದ ವಾಹನ ನಿಲುಗಡೆ, ಏಕಮುಖ, ದ್ವಿಮುಖ ಸಂಚಾರದ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದ್ದು,ಸಂಚಾರ ದಟ್ಟಣೆ, ಕಿರಿಕಿರಿ ಇನ್ನು ಮುಂದೆ ಪರಿಹಾರವಾಗಲಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರಸಭೆ, ಸಂಚಾರಿ ಪೊಲೀಸರು ನಗರದಲ್ಲಿ ವಾಹನಗಳ ನಿಲುಗಡೆ,ಏಕ ಮತ್ತು ದ್ವಿಮುಖ ನಿಯಮ ಅನುಷ್ಠಾನಗೊಳಿಸುತ್ತಿದ್ದಾರೆ. ನಗರಸಭೆಯಿಂದ ಸೂಚನಾ ಫಲಕಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿಸುತ್ತಿದ್ದ, ಅನುಷ್ಠಾನಕ್ಕೆ ಬಂದರೆ ಸಂಚಾರ ದಟ್ಟಣೆಯಿಂದ ಬೇಸತ್ತಿದ್ದ ಜನರಿಗೆ ಕಿರಿಕಿರಿ ತಪ್ಪಲಿದೆ.

ವಾಹನ ನಿಲುಗಡೆ, ಏಕಮುಖ,ದ್ವಿಮುಖ ಸಂಚಾರದ ಬಗ್ಗೆ ಈಗಾಗಲೇ ಫಲಕಗಳನ್ನು ಅಳವಡಿಸಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತದೆ. ನಗರದ ಕುಟಿನೋ ರಸ್ತೆ, ರಾಧಾಕೃಷ್ಣ ರಸ್ತೆ, ಸವಿತಾ ಹೊಟೆಲ್‌ ಹಿಂಭಾಗದ ರಸ್ತೆ ಒಳಗೊಂಡು ಹಲವು ರಸ್ತೆಗಳು ಕಿರಿದಾಗಿದೆ. ಈ ಮೊದಲು ಎರಡು ಕಡೆಗೆ ವಾಹನ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಸಾರ್ವಜನಿಕ ವಾಹನಗಳ ಜತೆಗೆ ಆ್ಯಂಬುಲೆನ್ಸ್‌, ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು.

 

ಸಂಚಾರ ನಿಯಮ ಜಾರಿಗೆ ತಂದಿದ್ದು, ಕಿರಿದಾದ ರಸ್ತೆಗಳಲ್ಲಿ ದಿನ ಬಿಟ್ಟು ದಿನ ವಾಹನಗಳ ಪಾಕಿಂರ್‍ಗ್‌ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ಟ್ರಾಫಿಕ್‌ ಜಾಮ್‌ ಆಗುವಂತೆ ಆಗುತ್ತಿತ್ತು. ಆದರೆ ಈಗ ನಿಗದಿತ ಸ್ಥಳದಲ್ಲೇ ನಿಲುಗಡೆ ಮಾಡಬೇಕಾಗಿದ್ದು, ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.

ಈಗಾಗಲೇ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಗಣೇಶ ಚತುರ್ಥಿ,ದೀಪಾವಳಿ, ನವರಾತ್ರಿ ಹಾಗೂ ವಿಶೇಷ ಸಂದರ್ಭದಲ್ಲಿ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಡುತ್ತಿದ್ದರು.ಸವಾರರು ಕೂಡಾ ತೊಂದರೆಗೆ ಒಳಗಾಗುತ್ತಿದ್ದರು. ಹೀಗಾಗಿ ಕಳೆದ ಹಲವಾರು ವರ್ಷದಿಂದ ಏಕಮುಖ, ದ್ವಿಮುಖ ಸಂಚಾರ, ಪಾರ್ಕಿಂಗ್‌ ಬಗ್ಗೆ ಚರ್ಚೆ ನಡೆಯುತ್ತಲೇ ಬಂದಿತ್ತು.

ಶಿರಸಿ ನಗರದಲ್ಲಿ ಈಗಾಗಲೇ ಸಂಚಾರಿ ನಿಯಮ ಅಳವಡಿಕೆ ಮಾಡಲಾಗಿದೆ. ಕದಂಬ ನೌಕಾನೆಲೆ 2ನೇ ಹಂತ, ಕೈಗಾ ಅಣು ವಿದ್ಯುತ್‌ ಕೇಂದ್ರದಲ್ಲಿ 5, 6 ನೇ ಘಟಕ ನಿರ್ಮಾಣ ಹಾಗೂ ವಿವಿಧ ಯೋಜನೆಗಳಿಂದ ಮುಂದಿನ ದಿನದಲ್ಲಿ ನಗರದಲ್ಲಿ ವಾಹನ ಓಡಾಟ ಮತ್ತಷ್ಟುಹೆಚ್ಚಾಗಲಿದ್ದು, ಈಗಲೇ ಸಂಚಾರ ನಿಯಮ ರೂಪಿಸಿ ಅನುಷ್ಠಾನಕ್ಕೆ ತಂದರೆ ಮುಂದೆ ಸಮಸ್ಯೆಗಳು ಉದ್ಭವ ಆಗುವ ಸಾಧ್ಯತೆ ಕಡಿಮೆಯಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಕಾರವಾರ ನಗರದಲ್ಲಿ ಸುಗಮ ಸಂಚಾರ ಹಾಗೂ ವಾಹನಗಳ ಪಾರ್ಕಿಂಗ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ವಾಹನ ನಿಲುಗಡೆ, ಸಂಚಾರಕ್ಕೆ ಸಂಬಂಧಿಸಿ ಸೂಚನಾ ನಡೆಯುತ್ತಿದೆ. ಸಂಪೂರ್ಣಗೊಂಡ ಮೇಲೆ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿ ಬಳಿಕ ಕಡ್ಡಾಯವಾಗಿ ನಾಮಫಲಕ ಅಳವಡಿಕೆ ಮಾಡಲಾಗುತ್ತದೆ.

ಆರ್‌.ಪಿ,ನಾಯ್ಕ, ಪೌರಾಯುಕ್ತರು ಕಾರವಾರ ನಗರಸಭೆ

ಸುಗಮ ಸಂಚಾರಕ್ಕೆ ವ್ಯವಸ್ಥೆ:

ಪ್ರಾಧಿಕಾರದ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದರು. ನಗರದಲ್ಲಿ ಏಕ ಮುಖ, ದ್ವಿಮುಖ ಹಾಗೂ ವಾಹನ ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುವ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಅನುಮೂದನೆಯಾಗಿದ್ದು, ಈಗ ಫಲಕ ಅಳವಡಿಕಾ ಕೆಲಸ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆಯಿದ್ದು, ಈಗಾಗಲೇ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಹಬ್ಬಹರಿದಿನಗಳ ಸಂದರ್ಭದಲ್ಲಿ ಸಾಕಷ್ಟುತೊಂದರೆ ಆಗುತ್ತಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಕಾರವಾರ ನಗರದಲ್ಲಿ ಸುಗಮ ಸಂಚಾರ ಹಾಗೂ ವಾಹನಗಳ ಪಾರ್ಕಿಂಗ ವ್ಯವಸ್ಥೆಗಳನ್ನು ಕಲ್ಪಿಸುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

click me!