ಸರ್ಕಾರಿ ಜಾಗದಲ್ಲಿನ ಕಾಂಪೌಂಡ್ ಒಡೆದ್ರೆ ಸಾರ್ವಜನಿಕರಿಗೆ ಸಿಗುತ್ತೆ ರಸ್ತೆ!

By Ravi Janekal  |  First Published Oct 15, 2022, 3:08 PM IST

ನಗರ ಸ್ಮಾರ್ಟ್ ಸಿಟಿಯಾಗಿ  ಏಳು ವರ್ಷಗಳೇ‌ ಕಳೆಯುತ್ತಿದೆ. ಇರುವ 41 ವಾರ್ಡ್ ಗಳಲ್ಲಿ ಕೆಲ ವಾರ್ಡ್‌ಗಳು ಬೆಂಗಳೂರಿನ ಡಾಲರ್ಸ್ ಕಾಲೋನಿಯಂತೆ ಅಭಿವೃದ್ಧಿ ಹೊಂದಿದ್ರೆ ಇನ್ನು ಕೆಲವು ವಾರ್ಡ್ ಗಳಿಗೆ ಮೂಲಸೌಕರ್ಯಗಳೇ‌ ಮರೀಚಿಕೆಯಾಗಿವೆ. 


ರಿಪೋರ್ಟರ್ : ವರದರಾಜ್  ಏಷ್ಯಾನೆಟ್ ಸುವರ್ಣನ್ಯೂಸ್ 

 ದಾವಣಗೆರೆ (ಅ.15) : ನಗರ ಸ್ಮಾರ್ಟ್ ಸಿಟಿಯಾಗಿ  ಏಳು ವರ್ಷಗಳೇ‌ ಕಳೆಯುತ್ತಿದೆ. ಇರುವ 41 ವಾರ್ಡ್ ಗಳಲ್ಲಿ ಕೆಲ ವಾರ್ಡ್‌ಗಳು ಬೆಂಗಳೂರಿನ ಡಾಲರ್ಸ್ ಕಾಲೋನಿಯಂತೆ ಅಭಿವೃದ್ಧಿ ಹೊಂದಿದ್ರೆ ಇನ್ನು ಕೆಲವು ವಾರ್ಡ್ ಗಳಿಗೆ ಮೂಲಸೌಕರ್ಯಗಳೇ‌ ಮರೀಚಿಕೆಯಾಗಿವೆ. 

Tap to resize

Latest Videos

ದಾವಣಗೆರೆ ವಿವಿಯ ಆರು ವಿಜ್ಞಾನಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಥಾನ!

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಎರಡು ವಾರ್ಡ್ ಗಳಿಗೆ ರಸ್ತೆ ಸಂಪರ್ಕವಿಲ್ಲವೆಂದ್ರೆ ಇನ್ನು ಆ ವಾರ್ಡ್ ಗಳ ಜನರ ಸಂಚಾರ ಸ್ಥಿತಿ ಹೇಗಿರಬೇಕೆಂದು‌ ನೀವೇ ಊಹಿಸಿ. ಆ ವಾರ್ಡ್ ಗಳಿಗೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವುದು  ಖಾಸಗಿ ವ್ಯಕ್ತಿಯೊಬ್ಬರ ಹಿತಾಸಕ್ತಿ. ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿ ತಮ್ಮ ಇಂಡಸ್ಟ್ರಿಗೆ ಕಾಂಪೌಂಡ್ ಕಟ್ಟಿರುವುದರಿಂದ ಸಾರ್ವಜನಿಕ ರಸ್ತೆ ನಿರ್ಮಾಣವಾಗುತ್ತಿಲ್ಲ. ಕಳೆದ 25 ವರ್ಷಗಳಿಂದ ಅತಿಕ್ರಮಣವಾಗಿರುವ ಜಾಗದಲ್ಲಿನ ಕಾಂಪೌಂಡ್ ತೆರವು ಮಾಡಲು ಅಲ್ಲಿನ ನಾಗರಿಕರು ಹೋರಾಟ ನಡೆಸಿದ್ರು ಅವರ ಹೋರಾಟ ನಿರರ್ಥವಾಗಿದೆ.

ಐದು ಲಕ್ಷ ಜನಸಂಖ್ಯೆ ವಾಸಿಸುವ ಬಡಾವಣೆಗಳಿಗೆ ಸಂಪರ್ಕ ರಸ್ತೆ ಇಲ್ಲ!

ದಾವಣಗೆರೆ ಲೋಕಿಕೆರೆ ರಸ್ತೆ(Lokikere)ಯಲ್ಲಿ ಸಾಗಿ ಶಶಿ ಸೋಪ್ ಪ್ಯಾಕ್ಟರಿ(Shashi soap Factory) ಹಿಂಭಾಗದ ಪಾಳು ಬಿದ್ದ ಜಮೀನಿನ‌ ಮೂಲಕ ಆ ಕಡೆ ಇರುವ ಎಸ್ ಓ ಜಿ ಕಾಲೋನಿ ರಾಮನಗರಕ್ಕೆ ವಾಹನಗಳು ಸಂಚರಿಸುವ ಮಣ್ಣಿನ ರಸ್ತೆ. ಆ ರಸ್ತೆಯಿಂದ ಹಾದು ಹೋದ್ರೆ ಮಹಾನಗರ ಪಾಲಿಕೆಗೆ ಸೇರಿದ ಎಸ್ ಓ ಜಿ ಕಾಲೋನಿ, ರಾಮನಗರ, ಬೆಂಕಿನಗರ , ಪಾಮೇನ ಹಳ್ಳಿ, ಎಸ್ ಎಸ್ ಹೈಟಕ್ ಬಡಾವಣೆಗಳಿಗೆ ಸಂಪರ್ಕ ಮಾರ್ಗವಿದೆ. ಹೀಗೆ ದೃಶ್ಯಾವಳಿಯಲ್ಲಿ ಸಾಗುತ್ತಿರುವ ರಸ್ತೆ ಮಾರ್ಗ ಸಂಪೂರ್ಣ ಅನಧಿಕೃತವಾಗಿದ್ದು,  ಆ ಬಡಾವಣೆಗಳಿಗೆ ಹೋಗಲು ಒಂದು ಸುಸಜ್ಜಿತ ರಸ್ತೆ ಮಾರ್ಗ ಬೇಕೇಂದು ಇದುವರೆಗೂ ಇಲ್ಲಿನ ಜನಪ್ರತಿನಿಧಿಗಳಿಗೆ ಅನಿಸಿಲ್ಲ. ಎರಡು ವಾರ್ಡ್ ಗಳ ಐದು ಬಡಾವಣೆಯಲ್ಲಿ ಅಂದಾಜು 5 ಲಕ್ಷ ಜನಸಂಖ್ಯೆ ಇದ್ದು ಅವರಿಗೆ ಒಂದು ಸುಸಜ್ಜಿತ ರಸ್ತೆ ಮಾರ್ಗ ನಿರ್ಮಿಸಿಕೊಡಬೇಕೆಂದು‌ ಇದುವರೆಗೂ ಅಲ್ಲಿನ‌ ಜನಪ್ರತಿನಿಧಿಗಳಿಗೆ ಅನಿಸಿಲ್ಲ

 ದಾವಣಗೆರೆ ಈ ಹಿಂದಿನ ಚಿತ್ರದುರ್ಗ ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು. ಅಂದಿನ‌ಕಾಲದಲ್ಲೇ ಅಲ್ಲಿನ‌‌ ಡಿಸಿಯವರಿಗೆ ರಾಮನಗರಕ್ಕೊಂದು ರಸ್ತೆಯಾಗಬೇಕು. ರಸ್ತೆ ಜಾಗವನ್ನು ಅಲ್ಲಿನ‌ ಆರ್ ಎಲ್‌ ಹನುಮಂತಪ್ಪ ಮತ್ತು‌  ಮಕ್ಕಳು ಅತಿಕ್ರಮಣ ಮಾಡಿದ್ದಾರೆ ಎಂದು  ದೂರು‌ ನೀಡಿದ್ದರು. ಆ ದೂರಿನ ಮೇಲೆ ಪರಿಶೀಲನೆ‌ ನಡೆಸಿದ ದಾವಣಗೆರೆ ಎಸಿ ಯವರು ಅತಿಕ್ರಮಣ ಪರಿಶೀಲಿಸಿ ತೆರೆವುಗೊಳಿಸುವುದಾಗಿ ಭರವಸೆ ನೀಡಿದರು. ನಂತರ ದಾವಣಗೆರೆ ಪ್ರತ್ಯೇಕ‌ ಜಿಲ್ಲೆಯಾಯಿತು. ಜಿಲ್ಲೆಯಲ್ಲಿ ನಗರಸಭೆ ಇದ್ದ ದಾವಣಗೆರೆ ನಗರಸಭೆ ಮಹಾನಗರ ಪಾಲಿಕೆಯಾಗಿ ಎಸ್ ಓ ಜಿ ರಾಮನಗರದಲ್ಲಿ ಎರಡು ವಾರ್ಡ್ ಗಳು ನಿರ್ಮಾಣವಾದವು.ದಿನದಿಂದ‌ ದಿನಕ್ಕೆ‌ ನಗರ ಅಭಿವೃದ್ಧಿಯಾಗಿ‌ ಜನಸಂಖ್ಯೆಯು ಬೆಳೆಯಿತು. ಆದ್ರೆ ಆ ನಗರ ಭಾಗಕ್ಕೆ ಸಂಪರ್ಕ ರಸ್ತೆ ಆಗಲೇ‌ ಇಲ್ಲ ಎನ್ನುತ್ತಾರೆ ಲೋಕೇಶ್ ಆಚಾರ್ 

25 ವರ್ಷಗಳ ರಸ್ತೆ ಸಮಸ್ಯೆಗೆ ಅಡ್ಡಿಯಾಗಿರುವುದು ಒಂದು ಕಾಂಪೌಂಡ್!

ದಾವಣಗೆರೆ ತಾಲ್ಲೂಕು ಆಪೀಸ್ ಸರ್ವೇಯರ್ ನೀಡಿರುವ ವರದಿಯಂತೆ 16.5 ಗುಂಟೆ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಮಹಾನಗರ ಪಾಲಿಕೆಯಾದ ಅಲ್ಲಿಗೆ ವರ್ಗಾವಣೆ ಗೊಂಡ ದಾಖಲೆಗಳ ಪ್ರಕಾರ 280 ಚದರು ಅಡಿ ರಸ್ತೆ ಜಾಗ ಒತ್ತುವರಿಯಾಗಿದೆ ಎಂದು ಕಂದಾಯ ವಿಭಾಗದವರು ವರದಿ ನೀಡಿದ್ದಾರೆ. ಆದರೆ ಆರ್ ಎಲ್ ಹನುಮಂತಪ್ಪ ಮತ್ತು ಮಕ್ಕಳು  ತಮ್ಮ ಇಂಡಸ್ಟ್ರೀಸ್  ಕಾಂಪೌಂಡ್ ನಿರ್ಮಿಸಿಕೊಂಡು ನೇರ  ರಸ್ತೆ ನಿರ್ಮಾಣಕ್ಕೆ ಅವಕಾಶಕೊಡುತ್ತಿಲ್ಲ. ಆ ಒತ್ತುವರಿ ಜಾಗ ತೆರವು ಆದ್ರೆ ಶಶಿ ಸೋಪ್ ಫ್ಯಾಕ್ಟರಿಯವರು ನೀಡಿರುವ ಸ್ಥಳ ಬಳಸಿಕೊಂಡು‌ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತದೆ. ಮೊದಲು ಇಂಡಸ್ಟ್ರಿ ಕಾಂಪೌಂಡ್ ತೆರವು ಆಗಬೇಕೆಂದು ಅಲ್ಲಿನ‌ ನಿವಾಸಿ ಮಹಾದೇವಪ್ಪ ಒತ್ತಾಯಿಸಿ ಹೋರಾಟ ನಡೆಸಿದ್ದಾರೆ. 

ಅಧಿಕಾರಿಗಳಿಂದ ಸಮಾಧಾನ ಉತ್ತರ ಬಿಟ್ಟರೇ ಸಮಸ್ಯೆಗೆ ಮುಕ್ತಿ ಇಲ್ಲ 

  ಎಸ್ ಓ ಜಿ ರಾಮನಗರ ಕಾಲೋನಿಯಲ್ಲಿ ರಾಜ್ಯ ಮಹಿಳಾ ನಿಲಯವಿದೆ. ಅನಾಥ ಮಕ್ಕಳ ಬಾಲ ಭವನ‌ ಇದೆ. ಈ ಭಾಗಕ್ಕೆ ಕಾಂಪೌಂಡ್ ಒಡೆದು  ಉತ್ತಮ ರಸ್ತೆ ನಿರ್ಮಿಸಿಕೊಡುವುದಾಗಿ ಮೂರು ಜಿಲ್ಲಾಧಿಕಾರಿಗಳು ಭೇಟಿ ನೀಡಿ‌ ಭರವಸೆ ನೀಡಿದ್ದಾರೆ. ಸಂಸ‌ದ ಜಿ ಎಂ ಸಿದ್ದೇಶ್ವರ್  ತಹಶೀಲ್ದಾರ್, ಮಹಾನಗರ ಪಾಲಿಕೆ ಕಮಿಷನರ್, ಮೇಯರ್ , ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ ,  ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಎಲ್ಲರಿಗೂ ಮನವಿ ಕೊಡಲಾಗಿದೆ. ಎಲ್ಲರಿಂದಲೂ ಸಮಾಧಾನದ ಮಾತುಗಳು ಬಿಟ್ಟರೆ ಆ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವ ಜಾಗವನ್ನು ಯಾರು ಬಿಡಿಸಿಲ್ಲ. ಪರಿಣಾಮ ಕಳೆದ 25 ವರ್ಷಗಳಿಂದ ಸುಸಜ್ಜಿತ ರಸ್ತೆಯಿಲ್ಲದೆ ಮಣ್ಣಿನ ರಸ್ತೆಯಲ್ಲೇ ಅನಿವಾರ್ಯವಾಗಿ ಸಂಚಾರ ಮಾಡಬೇಕಾದ ಸ್ಥಿತಿ ಇದೆ ಎನ್ನುತ್ತಾರೆ ನಿವಾಸಿ  ಹನುಮಂತಪ್ಪ 

Big 3: ಮೂಲಸೌಕರ್ಯ ಕೊರತೆ: ದಾವಣಗೆರೆಯ ಹೊಸ ಚಿಕ್ಕನಹಳ್ಳಿ ನಿವಾಸಿಗಳ ನರಕಯಾತನೆ

ಕಳೆದ 25 ವರ್ಷಗಳಿಂದ ಅಲ್ಲಿನ ನಿವಾಸಿಗಳು , ಕಾರ್ಮಿಕರು, ಶಾಲಾ‌ ಮಕ್ಕಳು ಮಹಿಳೆಯರು ‌ಮಕ್ಕಳು ಈ  ಕಲ್ಲು ಮಣ್ಣಿನ ರಸ್ತೆಯಲ್ಲಿ ಸಂಚರಿಸುತ್ತಾ ಅದೆಷ್ಟು‌ ಹಿಡಿಶಾಪ ಹಾಕಿದ್ದಾರೋ ಗೊತ್ತಿಲ್ಲ.‌ ಏನಾದ್ರು ಮಾಡಿ ರಸ್ತೆ ನಿರ್ಮಾಣಕ್ಕೆ ತೊಡಕಾಗಿರುವ ಕಾಂಪೌಂಡ್ ಒಡೆಸಲು ಕೆಲ ಹಿರಿಯ ಜೀವಗಳು‌ ಹೋರಾಟದ ಹಾದಿ ತುಳಿದು ಬಿಗ್-3 ಕದ ತಟ್ಟಿದ್ದಾರೆ.‌ ಆಳುವ ಸರ್ಕಾರಗಳು ಜನಪ್ರತಿನಿಧಿಗಳ ಮೇಲೆ ಭರವಸೆ  ಕಳೆದುಕೊಂಡಿರುವ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

click me!