
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಪ್ರೀತಿ, ದೈಹಿಕ ಸಂಬಂಧ ಹಾಗೂ ಮದುವೆಯ ಭರವಸೆ ನೀಡಿ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಬೆಳವಣಿಗೆಗಳು ಕಂಡುಬಂದಿವೆ. ಮದುವೆಯ ಆಮಿಷವೊಡ್ಡಿ ಯುವತಿಯೊಂದಿಗೆ ದೀರ್ಘಕಾಲ ಸಂಬಂಧ ಬೆಳೆಸಿ, ಬಳಿಕ ಗರ್ಭಿಣಿಯಾಗಿಸಿದ ನಂತರ ಮದುವೆ ನಿರಾಕರಿಸಿ ವಂಚನೆ ಮಾಡಿದ ಆರೋಪದ ಮೇಲೆ ಕೃಷ್ಣ ಜೆ. ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆರೋಪದ ಪ್ರಕಾರ, ಕೃಷ್ಣ ಜೆ. ರಾವ್ ಮತ್ತು ಯುವತಿಯ ನಡುವೆ ಸುಮಾರು ಏಳು ವರ್ಷಗಳ ಕಾಲ ಪ್ರೀತಿಯ ಸಂಬಂಧವಿತ್ತು. ಈ ಅವಧಿಯಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ನಂತರ ಯುವತಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ ಬಳಿಕ ಆರೋಪಿಯು ಮದುವೆಯಾಗಲು ನಿರಾಕರಿಸಿದ್ದಾನೆ ಎಂಬುದು ಪ್ರಕರಣದ ಮುಖ್ಯ ಅಂಶವಾಗಿದೆ.
ಇದೀಗ ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಕೃಷ್ಣ ಜೆ. ರಾವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಆರೋಪಿಯ ಪರ ವಕೀಲರಾದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಇದು ಪರಸ್ಪರ ಒಪ್ಪಿಗೆಯ ಸಂಬಂಧವಾಗಿದ್ದು, ಇಬ್ಬರ ನಡುವೆ ಹಲವು ವರ್ಷಗಳಿಂದ ಪ್ರೀತಿ ಇತ್ತು. ರಾಜಕೀಯ ಕಾರಣಗಳಿಂದಾಗಿ ಈ ಪ್ರಕರಣವನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ. ಆರೋಪಿಯ ತಂದೆಯ ತೇಜೋವಧೆ ಮಾಡಲು ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದರು.
ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಹಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ, ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿ ಕರ್ತವ್ಯ. ಯುವತಿಗೆ ಮಾಸಿಕ 10 ಸಾವಿರ ಜೀವನಾಂಶ ನೀಡಲು ಸಿದ್ದರಿದ್ದಾರಾ ? ಎಂದು ಆರೋಪಿ ಪರ ವಕೀಲರಿಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಪ್ರಶ್ನೆ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ. ಈ ಪ್ರಕರಣವು ಸಾಮಾಜಿಕ ಹಾಗೂ ಕಾನೂನು ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ತೀರ್ಮಾನ ನಿರೀಕ್ಷಿಸಲಾಗಿದೆ.
ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಿ ಡಿಎನ್‌ಎ ಪರೀಕ್ಷೆಯ ವರದಿ ಹೊರಬಂದಿತ್ತು. ಯುವತಿ ಹೆತ್ತ ಮಗುವಿನ ತಂದೆ ಕೃಷ್ಣ ಜೆ. ರಾವ್ ಎಂಬುದು ದೃಢಪಟ್ಟಿತ್ತು. 2025ರ ಸೆಪ್ಟೆಂಬರ್‌ನಲ್ಲಿ ಬಂದ ಈ ವರದಿ ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಈ ಹಿಂದೆ ಮೈಸೂರಿನಲ್ಲಿ ಬಂಧನಕ್ಕೊಳಗಾದ ಕೃಷ್ಣ ಜೆ. ರಾವ್, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಈಗ ಹೊರಗಡೆ ಇದ್ದಾನೆ.