
ಪುತ್ತೂರು: ತರಗತಿಯ ಪಕ್ಕದಲ್ಲಿಯೇ ನಡೆಯುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದಾಗಿ ಉಂಟಾಗುವ ದೂಳಿನಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಲೇಜು ವಿದ್ಯಾರ್ಥಿನಿಯರು ತರಗತಿಯಿಂದ ಹೊರಬಂದು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ವಿದ್ಯಾಮಾನ ಸೋಮವಾರ ನಡೆದಿದೆ. ವಿದ್ಯಾರ್ಥಿಗಳ ಈ ಪ್ರತಿಭಟನೆಯು ಮಾಜಿ ಶಾಸಕರ ಮತ್ತು ಹಾಲಿ ಶಾಸಕರ ಆರೋಪ, ಪ್ರತ್ಯಾರೋಪ, ಆಕ್ರೋಶಗಳಿಗೂ ಸಾಕ್ಷಿಯಾಯಿತು.
ಕಾಲೇಜು ಸಂಪರ್ಕ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಧರಣಿ ಕುಳಿತು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆ ಕೂಗಿದರು. ನ್ಯಾಯ ಸಿಗದಿದ್ದರೆ ರಸ್ತೆ ಬಿಟ್ಟು ತೆರಳುವುದಿಲ್ಲ ಹಠ ಹಿಡಿದರು. ಸಮಸ್ಯೆಯ ಬಗ್ಗೆ ಮಾಧ್ಯಮದೊಂದಿಗೆ ವಿದ್ಯಾರ್ಥಿನಿಯರಾದ ಚೈತನ್ಯ, ಭೂಮಿಕಾ, ಅರ್ಚನ ಮತ್ತಿತರರು ಮಾತನಾಡಿ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಬಿಜೆಪಿ ನಾಯಕರು ಆಗಮಿಸಿ ವಿದ್ಯಾರ್ಥಿನಿಯರ ಅಳಲು ಆಲಿಸಿದರು. ಸಂಜೀವ ಮಠಂದೂರು ಮಾತನಾಡಿ, ವಿದ್ಯಾರ್ಥಿನಿಯರು ಬೀದಿಯಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ಪುತ್ತೂರಿನಲ್ಲಿ ಸೃಷ್ಟಿಯಾದದು ಇದೇ ಪ್ರಥಮವಾಗಿದೆ. ಕಾಲೇಜು ಕಟ್ಟಡ ನಿರ್ಮಾಣಕ್ಕೆಂದು ಐದು ಕೋಟಿ ದುಡ್ಡು ಬಂದು ಐದನೇ ವರ್ಷ ಸಮೀಪಿಸಿದರೂ ಇನ್ನೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ನನ್ನ ಶಾಸಕತ್ವದ ಅವಧಿಯಲ್ಲಿ ಈ ಹಣ ಮಂಜೂರುಗೊಂಡು ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದೆ. ಬಳಿಕ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ. ಶಿಕ್ಷಣ ಇಲಾಖೆಯ ಆಯುಕ್ತರು ಜವಾಬ್ದಾರಿ ಕೊಡದ ಕಾರಣ ಈ ರೀತಿಯಾಗಿದೆ ಎಂದರಲ್ಲದೆ ವಿದ್ಯಾರ್ಥಿನಿಯರ ಹೋರಾಟಕ್ಕೆ ನಾವು ಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಇದಾದ ಕೆಲ ಹೊತ್ತಲ್ಲೇ ಆಗಮಿಸಿದ ಶಾಸಕ ಅಶೋಕ್ ರೈ, ನಾನು ಶಾಸಕನಾದ ಬಳಿಕ ಹೊಸ ಕಟ್ಟಡಕ್ಕೆ ರೂ. 7ಕೋಟಿ ಅನುದಾನ ತರಿಸಿ, ಅದರಲ್ಲಿ ಹೊಸ ಕಟ್ಟಡವಾಗುತ್ತಿದೆ ಈ ವೇಳೆ ನೀವು ಪ್ರತಿಭಟನೆ ಮಾಡುವುದು ಸರಿ ಅಲ್ಲ, ನಿಮಗೆ ಹೊಸ ಕಟ್ಟಡಕ್ಕೆ ಅನುದಾನ ಕೊಡಿಸಿರುವುದು ನಾನೇ. ತರಗತಿಗೆ ಹೋಗಿ ಎಂದರು. ಸಮಸ್ಯೆಯನ್ನು ನನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಾಂಶುಪಾಲರು, ಉಪನ್ಯಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಕಾಲೇಜಿಗೆ ಇರುವ ಕಟ್ಟಡದ ಒಂದು ಭಾಗದಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ಡಯಾಲಿಸಿಸ್ ಸೆಂಟರ್ ಸ್ಥಾಪನೆಗೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಳೆದ ಕೆಲ ತಿಂಗಳಿನಿಂದ ಈ ಕೆಲಸ ಪ್ರಗತಿಯಲ್ಲಿದ್ದು ಕಾಮಗಾರಿಯಿಂದ ಧೂಳು ತರಗತಿ ಕೊಠಡಿಯೊಳಗೆ ಬರುತ್ತಿದ್ದು ಇದರಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ನಮಗೆ ಉಸಿರಾಟ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನ ನಿರತ ವಿದ್ಯಾರ್ಥಿನಿಯರು ಶಾಸಕರ ಗಮನಕ್ಕೆ ತಂದರು. ಈ ಬಗ್ಗೆ ನನ್ನ ಗಮನಕ್ಕೆ ನೀವು ತರಬೇಕಿತ್ತು, ಕಾಲೇಜಿನವರು ತಂದಿಲ್ಲ ಎಂದು ಶಾಸಕರು ಹೇಳಿದಾಗ ನಾವು ಮನವಿ ಕೊಟ್ಟಿದ್ದೇವೆ ಎಂದು ವಿದ್ಯಾರ್ಥಿನಿಯರು ಉತ್ತರಿಸಿದರು.
2014ರಲ್ಲಿ ಕಾಲೇಜು ಪ್ರಾರಂಭವಾಗಿದ್ದು ವಿದ್ಯಾರ್ಥಿನಿಯರ ಸಂಖ್ಯೆ 500 ಕ್ಕಿಂತ ಹೆಚ್ಚು ಇದೆ. ಇನ್ನೂ ಸಹ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣವಾಗಿಲ್ಲ. ನೂತನ ಕಟ್ಟಡವು ಆಗುತ್ತದೆ ಎಂದು ಹನ್ನೆರಡು ವರ್ಷಗಳಿಂದ ಕಾಯುತ್ತಲೇ ಇದ್ದೇವೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈ ಮುಂದಿನ 45 ದಿನಗಳಲ್ಲಿ ಹೊಸ ಕಟ್ಟಡ ಉದ್ಘಾಟನೆ ಆಗಲಿದೆ. ಈಗ ಇರುವ ಧೂಳಿನ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದರು. ಹೊಸ ಕಟ್ಟಡ ಉದ್ಘಾಟನೆ ಆಗುವುದು ಸತ್ಯವೇ, ಹೇಳಿ ಸರ್ ಎಂದು ಶಾಸಕರನ್ನೇ ವಿದ್ಯಾರ್ಥಿನಿಯರು ಮರು ಪ್ರಶ್ನಿಸಿದ ಘಟನೆ ನಡೆಯಿತು.
ವಿದ್ಯಾರ್ಥಿನಿಯರ ಆಗ್ರಹದ ಮೇರೆಗೆ ತರಗತಿ ಕೊಠಡಿ ವೀಕ್ಷಿಸಿದ ಶಾಸಕರು ಗುತ್ತಿಗೆದಾರರಿಗೆ ಧೂಳಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಿದ್ದ ನಡುವೆ ಶಾಸಕ ಅಶೋಕ್ ಕುಮಾರ್ ರೈ ಅವರು ಪ್ರಾಂಶುಪಾಲೆ ವೇದಶ್ರೀ ನಿಡ್ಯ ಅವರನ್ನು ಸಮಸ್ಯೆ ಬಂದಾಗ ನನ್ನ ಗಮನಕ್ಕೆ ತರಬೇಕು. ನೀವು ಇಲ್ಲಿ ಬಂದು ಸುಮ್ಮನೇ ಟೈಮ್ ವೇಸ್ಟ್ ಮಾಡುವುದು ಬೇಡ ಎಂದಾಗ ಕಾಲೇಜ್ ಪ್ರಾಂಶುಪಾಲರು ನೀವು ನೋಡಿ ಮಾತನಾಡಬೇಕು. ಸುಮ್ಮನೆ ಹೇಳುವುದು ಬೇಡ. ಕಾಮಗಾರಿ ಆಗುವಾಗ ಧೂಳು ಬರುವುದು ಕಾಮನ್ ಸೆನ್ಸ್ ಎಂದು ಶಾಸಕರಿಗೆ ಉತ್ತರಿಸಿದರು.
ಮುಂದಿನ 45 ದಿನಗಳಲ್ಲಿ ಬೊಳುವಾರಿನ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಧೂಳಿನ ಸಮಸ್ಯೆ ಪರಿಹರಿಸಲು ಗುತ್ತಿಗೆದಾರರಿಗೆ ಸೂಚನೆ ನೀಡುತ್ತೇನೆ ಎಂದು ಶಾಸಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ತಹಸೀಲ್ದಾರ್ ಕೂಡಲಗಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.