ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದೆ. ಪುನರ್ವಸು ಆರ್ಭಟಕ್ಕೆ ಮಲೆನಾಡು ತತ್ತರಿಸುತ್ತಿದ್ದು, ಅಲ್ಲಲ್ಲಿ ಅನಾಹುತಗಳು ಸಂಭವಿಸಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.16): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದೆ. ಪುನರ್ವಸು ಆರ್ಭಟಕ್ಕೆ ಮಲೆನಾಡು ತತ್ತರಿಸುತ್ತಿದ್ದು, ಅಲ್ಲಲ್ಲಿ ಅನಾಹುತಗಳು ಸಂಭವಿಸಿದೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ. ಕೊಟ್ಟಿಗೆಹಾರ, ಬಣಕಲ್, ಕುದುರೇಮುಖ, ಕಳಸ, ಕೊಪ್ಪ, ಕೆರೆಕಟ್ಟೆ, ಕಿಗ್ಗಾ, ಜಯಪುರ, ಬಾಳೆಹಿನ್ನೂರು ಸೇರಿದಂತೆ ಮಲೆನಾಡು, ಘಟ್ಟಪ್ರದೇಶದಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ತುಂಗ-ಭದ್ರಾ, ಹೇಮಾವತಿ ಸೇರಿದಂತೆ ಹಲವು ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿವೆ.
undefined
ಸೇತುವೆ ಮುಳುಗಡೆ: ನಿರಂತರ ಮಳೆಯಿಂದಾಗಿ ಭದ್ರಾ ನದಿ ಭೋರ್ಗರೆದು ಹರಿಯುತ್ತಿರುವುದರಿಂದ ಹೊರನಾಡು ಸಮೀಪದ ಹೆಬ್ಬಾಳ ಸೇತುವೆ ಕಳೆದ ರಾತ್ರಿ ಮುಳುಗಡೆಯಾಗಿದೆ. ಕೂಡಲೇ ಪೊಲೀಸರು ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸಂಚಾರ ಬಂದ್ ಮಾಡಿರುವುದರಿಂದ ಹತ್ತಾರು ಗ್ರಾಮಗಳು ಸಂಪರ್ಕ ಕಡಿತಗೊಂಡಿದೆ.
ಹೆದ್ದಾರಿ ಕುಸಿತ: ಭಾರೀ ಮಳೆಯಿಂದಾಗಿ ಕೊಪ್ಪ ತಾಲೂಕಿನ ನಾರ್ವೆಯ ಕುಂಚೂರು ಘಾಟಿ ಬಳಿ ಕೊಪ್ಪ-ಜಯಪುರ ರಾಜ್ಯ ಹೆದ್ದಾರಿಯಲ್ಲಿ ಭಾರೀ ಕುಸಿತ ಸಂಭವಿಸಿದ್ದು, ವಾಹನ ಸವಾರರು ಆತಂಕಕ್ಕೆ ಸಿಕ್ಕಿದ್ದಾರೆ.ಸ್ಥಳೀಯರು ರಸ್ತೆಗೆ ಕಲ್ಲುಗಳನ್ನಿಟ್ಟು ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿದ್ದು, ನಾರ್ವೆ ಸರ್ಕಲ್‌ನಿಂದ ನಾಗಲಾಪುರ ಮೂಲಕ ಕೊಪ್ಪ ಪಟ್ಟಣಕ್ಕೆ ಹಾಗೆ ಕೊಪ್ಪದಿಂದ ಹಂದಗಾರ ಮೂಲಕ ಕಲ್ಕೆರೆ ಮುಖ್ಯ ರಸ್ತೆಗೆ ತಲುಪಿ ಚಿಕ್ಕಮಗಳೂರಿಗೆ ಪ್ರಯಾಣಿಸಲು ಪೊಲಿಸರು ಮನವಿ ಮಾಡಿದ್ದಾರೆ.
ಕಾಂಪೌಂಡ್ ಕುಸಿತ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದ ಕಾಪೌಂಡ್ ಕಿಸಿದಿದೆ. ನಿನ್ನೆ ಸಂಜೆಯ ನಂತರ ಧಾರಾಕಾರ ಮಳೆಯಾದಾಗ ಈ ಕುಸಿತ ಸಂಭವಿಸಿದೆ.
ಎರಡು ಮನೆಗಳಿಗೆ ಹಾನಿ: ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರೀ ಗಾಳಿ-ಮಳೆಗೆ ಮರಗಳು ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಬಾಳೂರು ಗುಡ್ಡಟ್ಟಿ ಗ್ರಾಮದಲ್ಲಿ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದಿದೆ.ನವೀನ್, ಶೇಷಪ್ಪ ಎಂಬುವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ನಾಶವಾಗಿವೆ.
ಮಾಕೋನಹಳ್ಳಿ, ದಾರದಹಲ್ಲಿ ಘಟ್ಟದಹಳ್ಳಿ ಭಾಗದಲ್ಲಿ ಬಿರುಸಿನ ಮಳೆಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಧೋ.. ಎಂದು ಸುರಿಯುತ್ತಿರುವ ಮಳೆಯಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟುವ ಹೇಮಾವತಿ ಗೊರೂರು ಡ್ಯಾಂ ಮೂಲಕ ಕೆ.ಆರ್.ಎಸ್. ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದೆ.
ರಸ್ತೆ ಜಲಾವೃತ: ಕೊಗ್ರೆ-ಶೃಂಗೇರಿ ರಸ್ತೆ ಜಲಾವೃತಗೊಂಡಿದೆ. ತುಂಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದು ಇದಕ್ಕೆ ಕಾರಣವಾಗಿದೆ. ರಸ್ತೆ ಬಂದಾಗಿ ಜನರು ಪರದಾಡುವಂತಾಗಿದೆ.
ಭೋರ್ಗರೆದ ಜಲಪಾತ: ಕೊಪ್ಪ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಬ್ಬಿಕಲ್ಲು ಜಲಪಾತ ಭೋರ್ಗರೆಯುತ್ತಿದೆ. ಕ್ಷಣ-ಕ್ಷಣಕ್ಕೂ ಜಲಪಾತದ ನೀರಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಹಳ್ಳದ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರಿಗೆ ಇದರಿಂದ ಆತಂಕ ಹೆಚ್ಚಾಗಿದೆ. ಭಾರಿ ಮಳೆಗೆ ಅಬ್ಬಿಕಲ್ಲು ಜಲಪಾತ ನದಿಯಂತಾಗಿದೆ. ಜಲಪಾತದ ರೌದ್ರಾವತಾರಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮೂವರಿಗೆ ಗಾಯ: ಗಾಳಿಗೆ ಕಾಫಿ ತೋಟದ ಲೈನ್ ಮನೆಗಳ ಮೇಲೆ ಬೃಹತ್ ಮರ ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ಕೆಳಗೂರು ಬಳಿ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ.ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತುಂಗಾನದಿಯ ಪ್ರವಾಹ: ಶೃಂಗೇರಿಯ ಕಿಗ್ಗಾ ಹಾಗೂ ಕೆರೆ ಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶಾರದಾ ಮಠದ ಯಾತ್ರೆನಿವಾಸ, ಗಾಂಧೀ ಮೈದಾನ ಜಲಾವೃತ್ತಗೊಂಡಿದೆ. ಮಠದ ಯಾತ್ರಿ ನಿವಾಸದ ಪಾರ್ಕಿಂಗ್ ಲಾಟ್ ಜಲಾವೃತಗೊಂಡಿದೆ, ಗಾಂಧಿ ಮೈದಾನ ನದಿಯಂತಾಗಿದೆ. ಅಲ್ಲಿನ 20 ಕ್ಕೂ ಹೆಚ್ಚು ಮಂಡಕ್ಕಿ, ಆಟಿಕೆಗಳ ಮಾರಾಟ ಮಳಿಗೆಗಳು ಅರ್ಧದಷ್ಟು ಮುಳುಗಿದೆ.
ಶ್ರೀಮಠದ ಆವರಣದ ಕಪ್ಪೆ ಶಂಕರ ದೇವಾಲಯ, ನರಸಿಂಹ ವನ ಜಲಾವೃತಗೊಂಡಿದೆ. ಗಾಂಧಿ ಮೈದಾನದ ಪಕ್ಕದ ಸಮನಾಂತರ ರಸ್ತೆಗೂ ನೀರು ನುಗ್ಗಿರುವುದರಿಂದ ಜನ ಜೀವನ ಸ್ತವ್ಯಸ್ಥಗೊಂಡಿದೆ.ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂಧಿ ಬೋಟ್‌ಗಳೊಂದಿಗೆ ಕಾವಲು ಕಾಯುತ್ತಿದ್ದು, ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ.