ಸಾರ್ ಬೆಳಗ್ಗೆ 4 ಗಂಟೆಗೆ ಬಂದಿದ್ದೀವಿ. ಆ ಹೊತ್ತಿಗಾಗಲೇ ಯಾರೋ ಬಂದು ನಮಗಿಂತಲೂ ಮೊದಲು ತಮ್ಮ ಚಪ್ಪಲಿ ಬಂದು ಬಿಟ್ಟು ಹೋಗಿದ್ದಾರೆ. ಈಗ ನಾನೇ ಆರನೇಯವಳು ಸಾರ್. ನೋಡಿ ಎಷ್ಟುದ್ದ ಚಪ್ಪಲಿಯ ಕ್ಯೂ ಇದೆ. ಇನ್ನೂ ಎಷ್ಟುಹೊತ್ತು ಕಾಯಬೇಕೋ ನಾನು.
ಎಸ್.ನಾಗಭೂಷಣ
ತುರುವೇಕೆರೆ: ಸಾರ್ ಬೆಳಗ್ಗೆ 4 ಗಂಟೆಗೆ ಬಂದಿದ್ದೀವಿ. ಆ ಹೊತ್ತಿಗಾಗಲೇ ಯಾರೋ ಬಂದು ನಮಗಿಂತಲೂ ಮೊದಲು ತಮ್ಮ ಚಪ್ಪಲಿ ಬಂದು ಬಿಟ್ಟು ಹೋಗಿದ್ದಾರೆ. ಈಗ ನಾನೇ ಆರನೇಯವಳು ಸಾರ್. ನೋಡಿ ಎಷ್ಟುದ್ದ ಚಪ್ಪಲಿಯ ಕ್ಯೂ ಇದೆ. ಇನ್ನೂ ಎಷ್ಟುಹೊತ್ತು ಕಾಯಬೇಕೋ ನಾನು.
ಹೀಗೆಂದು ಪತ್ರಿಕೆಯ ಮುಂದೆ ಅಳಲು ತೋಡಿಕೊಂಡರು ತಾವರೇಕೆರೆಯ ಅಸ್ಮಾ ಭಾನು. ಹೌದು. ಇದು ತುರುವೇಕೆರೆ ಪಟ್ಟಣದಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಮುಂದೆ ಬೆಳಗ್ಗೆಯಿಂದಲೇ ಆಧಾರ್ ನೋಂದಣಿ ಸಂಬಂಧ ಸರತಿ ಸಾಲಿಗಾಗಿ ಕಾದಿರುವ ಮಹಿಳೆಯ ಮಾತು.
ಆಧಾರ್ ಕಾರ್ಡ್‌ನ್ನು ಹೊಸದಾಗಿ ಮಾಡಿಸುವವರು, ತಿದ್ದುಪಡಿ ಮಾಡಿಸುವವರು, ಪೋನ್ ನಂಬರ್ ಲಿಂಕ್ ಮಾಡಿಸುವವರು ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿಯ ಮುಂದೆ ಬೆಳಗ್ಗೆಯಿಂದಲೇ ಕಾಯುವ ಸ್ಥಿತಿ ಇದೆ. ಪಟ್ಟಣದ ಪೋಸ್ಟ್ ಆಫೀಸ್, ಎಸ್‌ಬಿಐ, ಪಟ್ಟಣ ಪಂಚಾಯ್ತಿ ಮತ್ತು ತಾಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಕಾರ್ಯ ಮಾಡಲಾಗುತ್ತಿತ್ತು. ಆದರೆ ಯಾವುದೋ ಕಾರಣದಿಂದಾಗಿ ಪೋಸ್ಟ್ ಆಫೀಸ್, ತಹಸೀಲ್ದಾರ್‌ರವರ ಕಚೇರಿ ಮತ್ತು ಎಸ್‌ಬಿಐನಲ್ಲಿ ಕಳೆದ ಹಲವಾರು ದಿನಗಳಿಂದ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಕೇವಲ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಮಾತ್ರ ನೋಂದಣಿ ಕಾರ್ಯ ಮಾಡಲಾಗುತ್ತಿದೆ.
ತಾಲೂಕಿಗೆ ಇದೊಂದು ಕೇಂದ್ರದಲ್ಲಿ ಮಾತ್ರ ನೋಂದಣಿ ಕಾರ್ಯ ಮಾಡುತ್ತಿರುವುದರಿಂದ ಜನಸಂದಣಿ ಸಹಜವಾಗಿದೆ. ಒಂದು ಕೇಂದ್ರದಲ್ಲಿ ಗರಿಷ್ಠ 25 ರಿಂದ 30 ಮಾತ್ರ ನೋಂದಣಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಹಾಗಾಗಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲಲು ಜನರು ಮುಗಿ ಬೀಳುತ್ತಿದ್ದಾರೆ. ತಾಲೂಕಿನ ವಿವಿಧೆಡೆಯಿಂದ ವಾಹನಗಳ ಸಹಾಯದಿಂದಲೋ ಅಥವಾ ಅಕ್ಕಪಕ್ಕದ ಗ್ರಾಮದವರು ನಡೆದುಕೊಂಡು ತಮ್ಮ ಕೆಲಸಕ್ಕಾಗಿ ಬರುತ್ತಿದ್ದಾರೆ.
ಬೆಳಗ್ಗೆ 4 ಗಂಟೆಗೆ ಬರುವ ಜನರು ಕಚೇರಿಯ ಸಿಬ್ಬಂದಿ ಬೆಳಗ್ಗೆ 10 ಗಂಟೆಯ ನಂತರ ಬರುತ್ತಾರೆ. ಅಲ್ಲಿಯವರೆಗೂ ನಿಲ್ಲಲು ಸಾಧ್ಯವಿಲ್ಲವೆಂದು ತಮ್ಮ ಚಪ್ಪಲಿಗಳನ್ನೇ ತಮ್ಮ ಸರತಿಗಾಗಿ ಬಿಟ್ಟು ದೂರದಲ್ಲಿ ಕುಳಿತು ಕಾಲ ಕಳೆಯುವ ಸ್ಥಿತಿ ಇದೆ. ಬಿಸಿಲು, ಮಳೆ, ಚಳಿ ಎನ್ನದೇ ಅಂಗಡಿ ಮುಂಗಟ್ಟುಗಳ ಮುಂದೆ ಬೆಳಗ್ಗೆಯೇ ಮಹಿಳೆಯರು, ವಯೋವೃದ್ಧರು, ಪುಟಾಣಿ ಮಕ್ಕಳೊಂದಿಗೆ ಇಲ್ಲಿ ಕಾಯುವಂತಾಗಿದೆ. ಕಚೇರಿಯ ಸಿಬ್ಬಂದಿ ಬರುವ ತನಕ ತಮ್ಮ ಕೆಲಸ ಮಾಡಿಸಿಕೊಳ್ಳಲು ಜಾತಕ ಪಕ್ಷಿಯಂತೆ ತಮ್ಮ ಸರತಿಗಾಗಿ ಜನರು ಕಾಯುತ್ತಿದ್ದಾರೆ.
ಹೆಚ್ಚು ಶುಲ್ಕ: ಆಧಾರ್ ಕಾರ್ಡ್ ತಿದ್ದುಪಡಿಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ಹಣ ಹಾಗೂ ಉಚಿತವಾಗಿ ನೀಡಬೇಕಾದ ಅರ್ಜಿಗೂ ಹಣವನ್ನು ವಸೂಲು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹೆಚ್ಚು ಕೇಂದ್ರ: ತಾಲೂಕಿನಲ್ಲಿ ಕೇವಲ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ ಕಾರ್ಯ ನಡೆಯುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ನೋಂದಣಿ ಕಾರ್ಯಗಳನ್ನು ತೆರೆಯಬೇಕೆಂದೂ ಸಹ ಸಾರ್ವಜನಿಕರು ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.