
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.7): ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ರಾಜ್ಯ ಹೆದ್ದಾರಿಗಳ ಹದೆಗೆಟ್ಟ ರಸ್ತೆಗಳ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇಂದು ಗ್ರಾಮಸ್ಥರು ಕಳಸ ಪಟ್ಟಣದಲ್ಲಿ ನಡೆಸಿದ ರಸ್ತೆ ತಡೆ, ಪ್ರತಿಭಟನೆಯಲ್ಲಿ ಲೋಕೊಪಯೋಗಿ ಇಲಾಖಾ ಇಂಜಿನಿಯರುಗಳ ಬೆವರಿಳಿಸಿದರು. ಪ್ರವಾಸಿ ತಾಣ ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರು ರಸ್ತೆಯಲ್ಲಿ ಸಂಚಾರಿಸುವುದೇ ದುಸ್ಥಿರವಾಗಿ ಪರಿಣಾಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿರುದ್ದ ಆಕ್ರೋಶ ಹೊರಹಾಕಿದರು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಹದಗೆಟ್ಟಿರುವ ರಸ್ತೆಯಿಂದ ಪ್ರಯಾಣಿಕರು ನಿತ್ಯವೂ ಸಂಕಷ್ಟದಲ್ಲಿ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಳೆಹೊಳೆ-ಕಳಸ-ಹೊರನಾಡು-ಕುದುರೆಮುಖ ಮಾರ್ಗದ ರಸ್ತೆಯೂ ಸಂಪೂರ್ಣ ಗುಂಡಿ ಬಿದ್ದಿರುವ ಬಗ್ಗೆ ಸ್ಥಳೀಯರು ಅಧಿಕಾರಿಗಳುಮ ಜನಪ್ರತಿನಿಧಿಗಳ ಗಮನಕ್ಕೆತಂದ್ರೂ ಪ್ರಯೋಜವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಟೋ ಚಾಲಕರು ಮತ್ತು ಮಾಲಿಕರ ಸಂಘ ಮುಖಂಡ ಬಿ.ವಿ.ರವಿ ರೈ ನೇತ್ರತ್ವದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆಗೆ ಇಳಿದಿದ್ದರು. ಕಳಸ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಕೆ.ಎಂ.ರಸ್ತೆ ಮತ್ತು ಮುಖ್ಯ ರಸ್ತೆ ಸೇರುವ ಭಾಗದಲ್ಲಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಲೋಕೋಪಯೋಗಿ ಇಲಾಖಾ ಅಧಿಕಾರಿಗಳ ವಿರುದ್ಧ ಘೋಷನೆ ಕೂಗಿದರು.
ಪಿಡಬ್ಲ್ಯೂ ಡಿ ಎಂಜಿನಿಯರನ್ನ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಕಿರಿಯ ಇಂಜಿನಿಯರ್ ಸತೀಶ್ ಸ್ಥಳಕ್ಕೆ ಆಗಮಿಸಿದರು.ಈ ಸಂದರ್ಭದಲ್ಲಿ ಸೇರಿದ್ದ ಪ್ರತಿಭಟನಾಕಾರರು ಇಂಜಿನಿಯರುಗಳ ವಿರುದ್ದ ಹರಿಹಾಯ್ದರು. ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಮುಖಂಡ ಬಿ.ವಿ.ರವಿ ರೈ ಇಂಜಿನಿರುಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಆಟೋ ಚಾಲಕರು ಮತ್ತು ಮಾಲಕರು ಇಂಜಿನಿಯರುಗಳು ಆಟೋದಲ್ಲಿ ಬಾಳೆಹೊಳೆ ತನಕ ಬಂದು ರಸ್ತೆಯಲ್ಲಿ ಪ್ರಯಾಣಿಸುವ ಅನುಭವವನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇತ್ತ ಗ್ರಾಮಸ್ಥರ ಆಕ್ರೋಶಕ್ಕೆ ಇಂಜಿನಿಯರುಗಳು ಕಕ್ಕಾ ಬಿಕ್ಕಿಯಾದರು. ಯಾವತ್ತಿನಿಂದ ಕೆಲಸ ಶುರು ಮಾಡುತ್ತೀರಿ ಹೇಳಿ ಇಲ್ಲವಾದರೆ ಇಲ್ಲಿಂದ ನಿಮ್ಮನ್ನು ಕದಲು ಬಿಡುವುದಿಲ್ಲ. ಜನ ಸಾಮಾನ್ಯ ಕಷ್ಟ ಎಲ್ಲಿ ನಿಮಗೆ ಅರ್ಥವಾಗುತ್ತದೆ ಎಂದು ಕಳಸ, ಸಂಸೆ, ನೆಲ್ಲಿಬೀಡು, ಕುದುರೆಮುಖ, ಹೊರನಾಡು, ಬಾಳೆಹೊಳೆ ಭಾಗಗಳಿಂದ ಬಂದ ಗ್ರಾಮಸ್ಥರು ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಇಂಜಿನಿಯರುಗಳ ವರ್ತನೆಗೆ ಆಕ್ರೋಶಗೊಂಡ ಪ್ರತಿಭಟನಾಕಾರರು ತೀವ್ರವಾಗಿ ನಿಂದಿಸಿ ಮುಗಿ ಬಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಇಂಜಿನಿಯರುಗಳಿಗೆ ರಕ್ಷಣೆ ನೀಡಿದರು.
ಚಿಕ್ಕಮಗಳೂರು: ದಶಕಗಳಿಂದ ಹದಗೆಟ್ಟ ರಸ್ತೆ: ರಿಪೇರಿಗೆ ಆಗ್ರಹಿಸಿ ರೋಡ್‌ನಲ್ಲಿ ಗಿಡನೆಟ್ಟು ಮಹಿಳೆಯರ ಪ್ರತಿಭಟನೆ
ಈ ಸಂದರ್ಭದಲ್ಲಿ ಇಂಜಿನೀಯರ್ ಮಂಜುನಾಥ್ ಮಾತನಾಡಿ ಕಳಸ ಮುಖ್ಯ ರಸ್ತೆಗೆ 1 ಕೋಟಿ, ಕಳಸ-ಕುದುರೆಮುಖ ರಸ್ತೆಗೆ 4ಕೋಟಿ, ಹೊರನಾಡು-ಬಾಳೂರು ರಸ್ತೆಗೆ ಒಂದೂವರೆ ಕೋಟಿ, ಕಳಸ-ಮಾಗುಂಡಿ ರಸ್ತೆಗೆ 5 ಕೋಟಿ ಮಂಜೂರಾಗಿದ್ದು, ಆಯ್ಧ ಭಾಗಗಳಿಗೆ ಡಾಂಬರೀಕರಣ ಮಾಡುತ್ತೇವೆ.ಟೆಂಡರ್ ಕೂಡ ಆಗಿದೆ ಮಳೆಯ ಕಾರಣದಿಂದ ಕಾಮಗಾರಿ ಆರಂಬಿಸಲು ಸಾಧ್ಯವಾಗಲಿಲ್ಲ ಇನ್ನು ಎರಡು ದಿನದಲ್ಲಿ ರಸ್ತೆಗೆ ಜಲ್ಲಿ ಹಾಕುವ ಕೆಲಸ ಪ್ರಾರಂಭಿಸುತ್ತೇವೆ. ಬಿಸಿಲು ಹೆಚ್ಚಾದಾಗ ಡಾಂಬರೀಕರಣ ಮಾಡುತ್ತೇವೆ ಎಂದು ಖಚಿತ ಭರವಸೆ ನೀಡಿದ ಬಳಿಕ, ಮುಂದಿನ ಸೋಮವಾರ ಕೆಲಸ ಪ್ರಾರಂಭ ಮಾಡದೆ ಇದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಯಿತು.
ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆಗಳು: 'ದುರ್ಗಾದೇವಿ' ವೇಷ ತೊಟ್ಟು ಬಾಲಕಿ ವಿಭಿನ್ನ ಅಭಿಯಾನ
ಕಳಸ ಮುಖ್ಯ ರಸ್ತೆಯನ್ನು ರಸ್ತೆ ತಡೆ ಮಾಡಿದ ಹಿನ್ನಲೆಯಲ್ಲಿ ಹೊರನಾಡು ರಸ್ತೆ, ಕುದುರೆಮುಖ ರಸ್ತೆ, ಮುಖ್ಯ ರಸ್ತೆ ಟ್ರಾಫಿಕ್ ಜಾಮ್ ಆಗಿತ್ತು. ಹೊರನಾಡಿಗೆ ಬಂದ ಪ್ರವಾಸಿಗರು ತಾವು ಬಂದ ರಸ್ತೆಯ ಪರಿಸ್ಥಿತಿಯನ್ನು ಅರಿತು ಪ್ರವಾಸಿಗರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆಯ ಪರಿಸ್ಥಿಯ ಬಗ್ಗೆ ತೀವ್ರ ಅಸಮಾದಾನವನ್ನು ಹೊರಹಾಕಿದರು.