ಕೊಡಗು: ಕೊಳವೆ ಬಾವಿಗೆ ಲಕ್ಷ ಲಕ್ಷ ಹಣ ಸುರಿದ ನಗರಸಭೆ, ಸಾರ್ವಜನಿಕರ ಆಕ್ರೋಶ

By Girish Goudar  |  First Published Jun 23, 2023, 8:57 PM IST

ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಸುರಿದು ಕೊಳವೆ ಬಾವಿ ಕೊರೆಸಿ ಸಾರ್ವಜನಿಕರ ತೆರಿಗೆ ಹಣವನ್ನು ಹೊಳೆಯಲ್ಲಿ ಹೋಮ ಮಾಡಿದಂತೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 


ವರದಿ: ರವಿ.ಎಸ್ ಹಳ್ಳ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಜೂ.23):  ಇದೇನು ಕೊಳವೆ ಬಾವಿಗೆ ಯಾಕೆ ನಗರಸಭೆಯವರು ಲಕ್ಷಾಂತರ ರೂಪಾಯಿ ಹಣ ಸುರಿದರು ಎಂದು ಆಶ್ಚರ್ಯ ಆಗುತ್ತಿದೆಯೇ. ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ನಾಡಿಗೆ ಜೀವಜಲ ನೀಡುವ ಕಾವೇರಿ ನದಿ ಹುಟ್ಟುವ ಕೊಡಗಿನ ಏಕೈಕ ನಗರಸಭೆ ಆಗಿರುವ ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಆಗಿಂದಾಗ್ಗೆ ಸಮಸ್ಯೆ ತಲೆದೋರುವುದು ಹೊಸದೇನಲ್ಲ. ಇದನ್ನು ಮನಗಂಡೇ ಮಡಿಕೇರಿ ನಗರದ ಹಲವು ಬಡಾವಣೆಗಳಲ್ಲಿ ನಗರಸಭೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಆರು ವರ್ಷಗಳ ಹಿಂದೆಯೇ ಆರು ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಅಷ್ಟು ಕೊಳವೆ ಬಾವಿಗಳಿಗೂ ಮೋಟಾರ್ ಗಳನ್ನು ಇಳಿಸಿ ಎಲ್ಲಾ ಕೆಲಸಗಳನ್ನು ಮಾಡಲಾಗಿತ್ತು. 

Tap to resize

Latest Videos

undefined

ಆದರೆ ವಿದ್ಯುತ್ ಸಂಪರ್ಕ ಕೊಡುವುದಕ್ಕೆ ವಿದ್ಯುತ್ ಪರಿವರ್ತಕಗಳು ಬೇಕಾಗಿದ್ದು ಅವುಗಳಿಗೆ ತಲಾ ಒಂದು ಲಕ್ಷ ಕಟ್ಟಬೇಕು ಎನ್ನುವ ಒಂದೇ ಕಾರಣಕ್ಕೆ ಮೋಟಾರ್ ಗಳನ್ನು ಇಳಿಸಿದ್ದ ನಗರಸಭೆ ಅಷ್ಟಕ್ಕೇ ಕೈತೊಳೆದುಕೊಂಡು ಸುಮ್ಮನಾಗಿಬಿಟ್ಟಿದೆ. ಆ ಮೂಲಕ ಜನರ 15 ರಿಂದ 18 ಲಕ್ಷ ಹಣವನ್ನು ಕೊಳವೆ ಬಾವಿಗೆ ಸುರಿದು ಸುಮ್ಮನಾಗಿ ಬಿಟ್ಟಿದೆ.  ಈ ವಿಷಯ ಗೊತ್ತಾಗುತ್ತಿದ್ದಂತೆ ಮಡಿಕೇರಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಕೊಡಗಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ, ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಹೌದು, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಡೈರಿ ಫಾರಂ, ಅಶೋಕಪುರ, ರಾಜರಾಜೇಶ್ವರಿ ನಗರ ಸೇರಿದಂತೆ ಒಟ್ಟು ಆರು ಬಡಾವಣೆಗಳಲ್ಲಿ ಆರು ಕೊಳವೆ ಬಾವಿಗಳನ್ನು 2018 ಕ್ಕೂ ಮೊದಲೇ ಕೊರೆಯಲಾಗಿದೆ. ಅವುಗಳಿಗೆ 10 ಹೆಚ್ಪಿ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಸ್ಟಾರ್ಟ್ ಸ್ವಿಚ್, ಮೀಟರ್ ಬೋರ್ಡ್ ಸೇರಿದಂತೆ ಎಲ್ಲವುಗಳ ಅಳವಡಿಕೆ ಮಾಡಲಾಗಿದೆ. ಇಷ್ಟೆಲ್ಲಾ ಆದರೂ ವಿದ್ಯುತ್ ಸಂಪರ್ಕ ಕಲ್ಪಿಸಿ ಜನರಿಗೆ ನೀರು ಪೂರೈಸಿಲ್ಲ. ಆರು ಬಾವಿಗಳಿಗೂ ಆರು ಮೋಟಾರ್ಗಳನ್ನು ಇಳಿಸಿ ಅಷ್ಟಕ್ಕೆ ಸುಮ್ಮನಾಗಿದ್ದಾರೆ. ಹೀಗಾಗಿ ಸಾರ್ವಜನಿಕರ ಲಕ್ಷಾಂತರ ತೆರಿಗೆಯ ಹಣ ಪೋಲಾಗಿದೆ. ಅಷ್ಟು ವರ್ಷಗಳಿಂದ ಮೋಟಾರ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಹಾಗೆಯೇ ನೀರಿನೊಳಗೆ ಬಿಟ್ಟಿರುವುದರಿಂದ ಎಲ್ಲಾ ಮೋಟಾರ್ ಗಳು ಹಾಳಾಗಿರಬಹುದು. 

ನಗರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಾರ್ವಜನಿಕರ ಇಷ್ಟೊಂದು ಹಣವನ್ನು ಪೋಲು ಮಾಡಿದ್ದು ಯಾಕೆ. ಕಳೆದ ಹದಿನೈದು ದಿನಗಳ ಹಿಂದೆ ಕೂಟು ಹೊಳೆಯಿಂದ ನೀರು ಸರಬರಾಜು ಮಾಡುವ ಎರಡು ಮೋಟಾರ್ ಗಳು ಕೆಟ್ಟು ಹೋಗಿ ಇಡೀ ನಗರದ ಜನರು ನೀರಿಲ್ಲದೆ ಪರಿತಪಿಸಿದ್ದರು. ನಗರಸಭೆ ಅಧಿಕಾರಿಗಳು ಈ ಬೋರ್ವೆಲ್ ಗಳಿಗೆ ಹಿಂದೆಯೇ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೆ ಆ ಸಂದರ್ಭ ಆರು ಬಡಾವಣೆಗಳ ಜನರಿಗೆ ಕುಡಿಯುವ ನೀರು ಪೂರೈಸಬಹುದಿತ್ತು. ಇದ್ಯಾವುದೂ ನಮ್ಮ ನಗರಸಭೆ ಆಡಳಿತ ಮಂಡಳಿಯವರಿಗೆ ಮತ್ತು ಅಧಿಕಾರಿಗಳಿಗೆ ಯಾಕೆ ಗಮನಕ್ಕೆ ಬರುವುದಿಲ್ಲವೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಎಲ್ಲಡೆ ಒಂದು ವಿದ್ಯುತ್ ಪರಿವರ್ತಕ ಅಳವಡಿಸುವ ಅಗತ್ಯವಿದ್ದಿದ್ದರಿಂದ ತಲಾ ಒಂದು ಲಕ್ಷ ರೂಪಾಯಿ ವ್ಯಯಿಸಿ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ ಎನ್ನುತ್ತಿದ್ದಾರೆ. ಜೊತೆಗೆ ಆ ಕೊಳವೆ ಬಾವಿಗಳಲ್ಲಿ ಅಗತ್ಯ ಪ್ರಮಾಣದ ನೀರು ಇಲ್ಲದೆ ಇದ್ದಿದ್ದರಿಂದ ವಿದ್ಯುತ್ ಸಂಪರ್ಕ ಕೊಟ್ಟು, ಚಾಲನೆ ಮಾಡಿಲ್ಲ ಎನ್ನುತ್ತಿದ್ದಾರೆ. 

Karnataka Monsoon: ಕೊಡಗಿನಲ್ಲಿ ಚುರುಕುಗೊಂಡ ಮಳೆ; ಕರಾವಳಿಯಲ್ಲಿ ಸಾಧಾರಣ

ಅಗತ್ಯ ಪ್ರಮಾಣದ ನೀರು ಇಲ್ಲದಿದ್ದರೂ ಕೊಳವೆ ಬಾವಿಗಳಿಗೆ ಮೋಟಾರ್ ಇಳಿಸಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ. ಸದ್ಯ ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು ಮೂರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನೈಜವಾಗಿ ಗಮನಿಸಿದರೆ ಇಂದಿಗೂ ಚಾಮುಂಡೇಶ್ವರಿ ನಗರದಲ್ಲಿರುವ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. 

ಒಟ್ಟಿನಲ್ಲಿ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಸುರಿದು ಕೊಳವೆ ಬಾವಿ ಕೊರೆಸಿ ಸಾರ್ವಜನಿಕರ ತೆರಿಗೆ ಹಣವನ್ನು ಹೊಳೆಯಲ್ಲಿ ಹೋಮ ಮಾಡಿದಂತೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 

click me!