Bengaluru: ಕಬ್ಬನ್‌ ಪಾರ್ಕ್‌ನಲ್ಲಿ ಲಾಂಛನ ಸ್ಥಾಪನೆಗೆ ಸಾರ್ವಜನಿಕರ ವಿರೋಧ

ನಗರದ ಹೃದಯ ಭಾಗದಲ್ಲಿರುವ ಕಬ್ಬನ್‌ ಉದ್ಯಾನವನದಲ್ಲಿ ರೇಸರ್‌ ಪೇ ಕಂಪೆನಿ ‘ಯುನಿಕಾರ್ನ್‌ ವಿತ್‌ ವಿಂಗ್ಸ್‌’ (ಹಾರುವ ಕುದುರೆ) ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕರು ಮತ್ತು ನಡಿಗೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 


ಬೆಂಗಳೂರು (ಜು.03): ನಗರದ ಹೃದಯ ಭಾಗದಲ್ಲಿರುವ ಕಬ್ಬನ್‌ ಉದ್ಯಾನವನದಲ್ಲಿ ರೇಸರ್‌ ಪೇ ಕಂಪೆನಿ ‘ಯುನಿಕಾರ್ನ್‌ ವಿತ್‌ ವಿಂಗ್ಸ್‌’ (ಹಾರುವ ಕುದುರೆ) ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕರು ಮತ್ತು ನಡಿಗೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶನಿವಾರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು, ನಗರದಲ್ಲಿ ವಾಯು ವಿಹಾರಕ್ಕಾಗಿ ಕಬ್ಬನ್‌ ಉದ್ಯಾನ ಮಾತ್ರ ಇದೆ. 

ವಿಧಾನಸೌಧ ಮತ್ತು ಹೈಕೋರ್ಟ್‌ನ ಕೂಗಳತೆ ದೂರದಲ್ಲಿದೆ. ಇಂತಹ ಸ್ಥಳದಲ್ಲಿ ಯಾವುದೇ ರೀತಿಯ ಖಾಯಂ ಕಟ್ಟಡಗಳನ್ನು ನಿರ್ಮಿಸುವುದರಿಂದ ಹಂತ ಹಂತವಾಗಿ ಉದ್ಯಾನದ ಸೌಂದರ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಪಾರ್ಕ್ಸ್ ಮತ್ತು ಗಾರ್ಡನ್ಸ್‌ ಕಾಯಿದೆಯ ಪ್ರಕಾರ ಉದ್ಯಾನದಲ್ಲಿ ಯಾವುದೇ ಶಾಶ್ವತವಾದ ಕಟ್ಟಡ, ಪ್ರತಿಮೆ ನಿರ್ಮಿಸುವುದಕ್ಕೆ ಅವಕಾಶ ಇಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Latest Videos

Bengaluru: ಸಾಕು ನಾಯಿಗಳಿಗೆ ಕಬ್ಬನ್‌ ಪಾರ್ಕ್‌ ಪ್ರವೇಶವಿಲ್ಲ!

ನ್ಯಾಯಾಂಗ ಹೋರಾಟದ ಎಚ್ಚರಿಕೆ: ಕಾನೂನಿನ ಪ್ರಕಾರ ಉದ್ಯಾನದಲ್ಲಿ ಯಾವುದೇ ಕಟ್ಟಡಗಳು ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಸಂಬಂಧ ಹಲವು ಬಾರಿ ನ್ಯಾಯಾಲಯದಲ್ಲಿ ಸರ್ಕಾರಕ್ಕೆ ನಿರ್ದೆಶನ ನೀಡಲಾಗಿದೆ. ಹೀಗಿದ್ದರೂ ಸಾರ್ವಜನಿಕರ ಮತ್ತು ನಡಿಗೆದಾರರ ಅಭಿಪ್ರಾಯಕ್ಕೆ ಬೆಲೆ ಸಿಗದಿದ್ದಲ್ಲಿ ನ್ಯಾಯಾಂಗ ಹೋರಾಟಕ್ಕೂ ಮುಂದಾಗುವುದಾಗಿ ಸಂಘದ ಅಧ್ಯಕ್ಷ ಉಮೇಶ್‌ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ, ನಿರ್ದೆಶಕ ನಾಗೇಂದ್ರ ಪ್ರಸಾದ್‌, ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್‌, ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ, ರೇಸರ್‌ ಪೇ ಕಂಪೆನಿಯ ಪ್ರತಿನಿಧಿ ಅಪೂರ್ವಾ ಸೆರಿದಂತೆ 100ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಭಾಗಿಯಾಗಿದ್ದರು.

ಓಪನ್‌ ಜಿಮ್‌ ಕುರಿತು ಇಂದು ಸಭೆ: ಬೆಂಗಳೂರಿನಲ್ಲಿರುವ ಸ್ವಿಡ್ಜರ್‌ಲ್ಯಾಂಡ್‌ನ ರಾಯಭಾರಿ ಕಚೇರಿ ನಗರದ ಕಬ್ಬನ್‌ ಉದ್ಯಾನದಲ್ಲಿ ಸಾರ್ವಜನಿಕರಿಗಾಗಿ ಬಯಲು ವ್ಯಾಯಾಮ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಸುಮಾರು ಅರ್ಧ ಎಕರೆ ಜಾಗ ನೀಡುವಂತೆ ತೋಟಗಾರಿಕೆ ಇಲಾಖೆಗೆ ಮನವಿ ಮಾಡಿದೆ. ಈ ಸಂಬಂಧ ಭಾನುವಾರ ಬೆಳಗ್ಗೆ 8.30ಕ್ಕೆ ಕಬ್ಬನ್‌ ಪಾರ್ಕ್ ಬ್ಯಾಂಡ್‌ ಸ್ಟ್ಯಾಂಡ್‌ನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ಸಲ್ಲಿಸಬಹುದು.

ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ಗೆ ಮತ್ತೆ ಕಳೆ: ಪ್ರವಾಸಿಗರ ಸಂಖ್ಯೆ ಹೆಚ್ಚಳ

ಉದ್ಯಾನದಲ್ಲಿ ಏನೇನಿರಬೇಕು ಎಂಬುದನ್ನು ನಿರ್ಧರಿಸುವುದು ಸಾರ್ವಜನಿಕರು. ಈ ನಿಟ್ಟಿನಲ್ಲಿ ಸಾರ್ವಜನಿರಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರಲಾಗುವುದು. ಅದನ್ನು ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
-ರಾಜೇಂದ್ರಕುಮಾರ ಕಟಾರಿಯಾ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ

click me!