ಹದಗೆಟ್ಟ ಹೊಳೆಆಲೂರ-ರೋಣ ರಸ್ತೆ: ಪ್ರಯಾಣಿಕರ ಗೋಳು ಕೇಳೋರೆ ಇಲ್ಲ!

By Web DeskFirst Published Nov 29, 2019, 9:08 AM IST
Highlights

ರಸ್ತೆ ಕಿರಿದಾಗಿದ್ದು, ಎರಡು ವಾಹನ ಎದುರಾದರೆ ರಸ್ತೆ ಬಿಟ್ಟು ಇಳಿಯಲೇಬೇಕು| ರಾತ್ರಿ ಸಂಚಾರ ಇನ್ನಷ್ಟು ಕಷ್ಟ| ಬಹಳಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ| ನಾಲ್ಕು ತಿಂಗಳಿಂದ ಇಂತಹ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ತಮಗೆ ಸಂಬಂಧವಿಲ್ಲವೇನೋ ಎನ್ನುವಂತೆ ಇದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶ|
 

ಹೊಳೆಆಲೂರ[ನ.29]: ಇಲ್ಲಿಂದ ರೋಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬೆನಹಾಳ ಕೆರೆಯ ಹತ್ತಿರ ಸಂಪೂರ್ಣ ಹಾಳಾಗಿ ಹೋಗಿದ್ದು, ಈ ರಸ್ತೆಯಲ್ಲಿ ಎದ್ದು ಬಿದ್ದು, ಕೈಕಾಲು ಮುರಿದುಕೊಂಡು ಹೋದವರು ಸಾಕಷ್ಟು ಜನರಿದ್ದಾರೆ.

ಈ ಭಾಗದಲ್ಲಿ ಸುಮಾರು 100 ಮೀಟರ್‌ ರಸ್ತೆ ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ. ಅಲ್ಲದೆ ರಸ್ತೆ ಕಿರಿದಾಗಿದ್ದು, ಎರಡು ವಾಹನ ಎದುರಾದರೆ ರಸ್ತೆ ಬಿಟ್ಟು ಇಳಿಯಲೇಬೇಕು. ರಾತ್ರಿ ಸಂಚಾರ ಇನ್ನಷ್ಟು ಕಷ್ಟ. ಬಹಳಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ. ನಾಲ್ಕು ತಿಂಗಳಿಂದ ಇಂತಹ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟಅಧಿಕಾರಿಗಳು ತಮಗೆ ಸಂಬಂಧವಿಲ್ಲವೇನೋ ಎನ್ನುವಂತೆ ಇದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶ.

ಹಲವು ಬಾರಿ ಈ ರಸ್ತೆ ದುರವಸ್ಥೆ ಕುರಿತು ಸಂಬಂಧಪಟ್ಟಅಧಿಕಾರಿಗಳಿಗೆ ವಿವರಿಸಲು ಸಾರ್ವಜನಿಕರು ಪ್ರಯತ್ನ ನಡೆಸಿದ್ದಾರೆ. ಆದರೆ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನವೂ ವಿಫಲವಾಗಿದೆ. ಅಧಿಕಾರಿಗಳು ಕರೆಗಳನ್ನೇ ಸ್ವೀಕರಿಸುತ್ತಿಲ್ಲ ಎಂದು ಹಲವರು ಹೇಳುತ್ತಾರೆ. ಯಾರಿಗೆ ನಮ್ಮ ಸಮಸ್ಯೆ ಹೇಳಿಕೊಳ್ಳುವುದು ಎಂದು ಪ್ರಶ್ನಿಸುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಎರಡು ಮೂರು ದಿನದಲ್ಲಿ ಟೆಂಡರ್‌ ಒಪನ್‌ ಆಗಲಿದೆ. ಆ ರಸ್ತೆ ಕಾಮಗಾರಿ ನಡೆಸಿ, ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು, ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಪಿಡಬ್ಲ್ಯೂಡಿ ಎಇಇ ಐ.ಎಫ್‌. ಹೊಸೂರು ಅವರು ಹೇಳಿದ್ದಾರೆ.

ಬೆನಹಾಳ ಬಳಿ ರಸ್ತೆ ದುರಸ್ತಿಗೆ  60 ಸಾವಿರ ಹಣ ನಿಗದಿಪಡಿಸಲಾಗಿದ್ದು, 2-3 ದಿನಗಳಲ್ಲಿ ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಿರಿಯ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸದಿದ್ದರೆ ಸಾರ್ವಜನಿಕರು ಪಿಡಬ್ಲ್ಯೂಡಿ ಎಇಇ ಹೊಸೂರು ಅವರಿಗೆ ದೂರು ಸಲ್ಲಿಸಬಹುದು ಎಂದು ಎಒ, ಪಿಡಬ್ಲೂಡಿ ಸಂತೋಷ ಪಾಟೀಲ ಅವರು ತಿಳಿಸಿದ್ದಾರೆ.  

click me!