ಬಿಬಿಎಂಪಿ ಖರ್ಚು ಮಾಡುವ ಪ್ರತಿ ಪೈಸೆ ಲೆಕ್ಕ ಸಾರ್ವಜನಿಕರಿಗೆ..!

By Kannadaprabha NewsFirst Published Nov 8, 2020, 7:45 AM IST
Highlights

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರತಿ ಕಾಮಗಾರಿಯ ಮಾಹಿತಿ ದಾಖಲೆ ಸಹಿತ ಲಭ್ಯ| ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇನ್ನು ಮುಂದೆ ಬಿಬಿಎಂಪಿಯಿಂದ ವೆಚ್ಚ ಮಾಡುವ ಪ್ರತಿ ಪೈಸೆಯ ಲೆಕ್ಕವನ್ನೂ ಸಾರ್ವಜನಿಕರಿಗೆ ಲಭ್ಯ| 

ಬೆಂಗಳೂರು(ನ.08): ಇನ್ನು ಮುಂದೆ ಸಾರ್ವಜನಿಕರು ಬಿಬಿಎಂಪಿ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ದಾಖಲೆ ಸಹಿತ ವೀಕ್ಷಿಸಬಹುದು. ಈ ಕಾಮಗಾರಿಗಳ ಕುರಿತು ತಮ್ಮ ಪ್ರತಿಕ್ರಿಯೆಯನ್ನೂ ಸಹ ನೀಡಬಹುದು.

ಬಿಬಿಎಂಪಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪಾಲಿಕೆಯ ಅಧಿಕೃತ ವೆಬ್‌ಸೈಟ್‌ ಮರುವಿನ್ಯಾಸಗೊಳಿಸಿದ್ದು, ಪಾಲಿಕೆಯ ಕಾಮಗಾರಿಗಳು ಸೇರಿದಂತೆ ಹಲವು ಮಾಹಿತಿಗಳು ಸಾರ್ವಜನಿಕರಿಗೆ ಸಿಗಲಿದೆ. ಶನಿವಾರ ಬಿಬಿ​ಎಂಪಿಯ ಕೇಂದ್ರ ಕಚೇ​ರಿ​ಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತಾ ಹಾಗೂ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಪಾಲಿಕೆಯ ವೆಬ್‌ಸೈಟ್‌ನ (http://bbmp.gov.in/Citizenviewkannada.html) ಲಿಂಕ್‌ ಬಿಡುಗಡೆಗೊಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇನ್ನು ಮುಂದೆ ಬಿಬಿಎಂಪಿಯಿಂದ ವೆಚ್ಚ ಮಾಡುವ ಪ್ರತಿ ಪೈಸೆಯ ಲೆಕ್ಕವನ್ನೂ ಸಾರ್ವಜನಿಕರಿಗೆ ನೀಡುತ್ತೇವೆ. ಈ ನಿಟ್ಟಿನಲ್ಲಿ ಮೊದಲಿಗೆ ಪಾಲಿಕೆಯ ವೆಬ್‌​ಸೈಟ್‌ ಅಪ್‌​ಡೇಟ್‌ ಮಾಡಿದ್ದು, ಮೊದಲ ಹಂತ​ದಲ್ಲಿ 2015ರ ಜೂನ್‌​ನಿಂದ ಈವರೆಗೆ ಪೂರ್ಣ​ಗೊಂಡಿ​ರುವ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮ​ಗಾ​ರಿ​ಗಳ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ಮುಂದಿನ ದಿನ​ಗ​ಳಲ್ಲಿ ನಗ​ರೋ​ತ್ಥಾನ ಯೋಜನೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನು​ದಾ​ನದ ವಿವ​ರ​ಗಳು, ಹಾಲಿ ಚಾಲ್ತಿ​ಯ​ಲ್ಲಿರುವ ವಿವ​ರ​ಗಳು ಮತ್ತು ಪಾಲಿ​ಕೆಯ ಬಜೆಟ್‌ ವಿವ​ರ​ಗಳು ಈ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ ಎಂದು ಹೇಳಿದರು.

ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಮಾಸ್ಟರ್‌ ಪ್ಲಾನ್‌!

ಜನ ಕೇಳುವ ಮುನ್ನವೇ ಮಾಹಿತಿ:

ಪ್ರತಿ ನಿತ್ಯ ಮಾಹಿತಿ ಹಕ್ಕು ಕಾಯ್ದೆಯಡಿ ಕಾಮಗಾರಿ ಸೇರಿದಂತೆ ವಿವಿಧ ಮಾಹಿತಿ ಕೇಳಿ ಪಾಲಿಕೆಗೆ ನೂರಾರು ಅರ್ಜಿಗಳು ಬರುತ್ತಿವೆ. ಇನ್ನು ಮುಂದೆ ಸಾರ್ವಜನಿಕರು ಕೇಳುವ ಮುನ್ನವೇ ನಾವು ಮಾಹಿತಿ ನೀಡಲಿದ್ದೇವೆ. ಸಾರ್ವಜನಿಕರಿಗೆ ಮಾಹಿತಿ ಸಿಗುವುದರಿಂದ ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಒಂದು ನಿರ್ದಿಷ್ಟಕಾಮಗಾರಿ ದೃಢೀಕರಣ ಪತ್ರ ನೀಡುವಾಗಲೂ ಎಚ್ಚರ ವಹಿಸಬೇಕು. ಒಂದು ವೇಳೆ ಏನಾದರೂ ಲೋಪಗಳಿದ್ದರೂ ಬಹಿರಂಗವಾಗಲಿದೆ ಎಂದು ಹೇಳಿದರು.

ಕಾಮಗಾರಿ ಮಾಹಿತಿ ವೀಕ್ಷಣೆ ಹೇಗೆ?

ಸಾರ್ವಜನಿಕರು ಪಾಲಿ​ಕೆಯ ವೆಬ್‌​ಸೈಟ್‌ನಲ್ಲಿ ನಾಗರಿಕ ವೀಕ್ಷಣೆ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ರಸ್ತೆ ಇತಿ​ಹಾಸ, ಬಿಬಿ​ಎಂಪಿ ವರ್ಕ್ ಬಿಲ್‌ ಹಾಗೂ ಆಡ​ಳಿ​ತಾ​ಧಿ​ಕಾರಿ ನಡಾ​ವಳಿ ಎಂಬ ಆಯ್ಕೆ​ಗಳು ಕಾಣುತ್ತವೆ. ಇದ​ರಲ್ಲಿ ಬಿಬಿ​ಎಂಪಿ ವರ್ಕ್ನ ಮೇಲೆ ಕ್ಲಿಕ್‌ ಮಾಡಿ​ದರೆ ವಾರ್ಡ್‌ ಸಂಖ್ಯೆ ಮತ್ತು ಕಾಲಂ ತೆರೆಯಲಿದೆ. ಇದರಲ್ಲಿ ಸಾರ್ವ​ಜ​ನಿ​ಕರು ಆಯಾ ವಾರ್ಡ್‌ ವ್ಯಾಪ್ತಿಯ ಕಾಮ​ಗಾರಿಯ ಮಾಹಿತಿ ಪಡೆಯಬಹುದು.

ದಾಖಲೆಗಳ ಡೌನ್‌ಲೋಡ್‌ಗೂ ಅವಕಾಶ

ಈ ವೆಬ್‌ಸೈಟ್‌ನಲ್ಲಿ ಈಗಾಗಲೇ ಪೂರ್ಣಗೊಂಡಿರುವಕಾಮ​ಗಾ​ರಿ​ಗಳ ಜಾಬ್‌​ ಕೋಡ್‌ ಸಂಖ್ಯೆ, ಛಾಯಾ​ಚಿತ್ರ, ಅಂದಾ​ಜು​ಪಟ್ಟಿ, ಮೆಷರ್‌​ಮೆಂಟ್‌ ಬುಕ್‌, ಕಾಮ​ಗಾರಿ ಹೆಸರು, ಗುತ್ತಿ​ಗೆ​ದಾ​ರರ ಹೆಸರು, ಅನು​ದಾನ ಹಾಗೂ ಸಮಯದ ಸಂಪೂರ್ಣ ಮಾಹಿತಿ ಲಭ್ಯ​ವಾ​ಗ​ಲಿದೆ. ಸಾರ್ವಜನಿಕರು ಕಾಮಗಾರಿ ದಾಖಲೆಗಳ ಸ್ಕ್ಯಾನ್‌ ಪಡೆಯಲು, ಎಕ್ಸೆಲ್‌ ಅಥವಾ ಪಿಡಿಎಫ್‌ ರೂಪದಲ್ಲಿ ಡೌನ್‌ಲೋಡ್‌ ಮಾಡಲು ಅವಕಾಶವಿದೆ. ಯಾವುದೇ ಕಾಮಗಾರಿ ಕುರಿತು ವೆಬ್‌ಸೈಟ್‌ನಲ್ಲಿಯೇ ಪ್ರತಿಕ್ರಿಯಿಸಲೂಬಹುದು. ಇದನ್ನು ಅಧಿಕಾರಿಗಳು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.

ಬಿಬಿಎಂಪಿಯಿಂದ ಕೈಗೆತ್ತಿಕೊಳ್ಳುವ ಎಲ್ಲ ಕಾಮಗಾರಿಗಳ ವಿವರಗಳನ್ನು ನಾಗರಿಕರಿಗೆ ತಿಳಿಸುವ ಉದ್ದೇಶ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೆಬ್‌ಸೈಟ್‌ನಲ್ಲಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ತಿಳಿಸಿದ್ದಾರೆ. 
 

click me!