
ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಹಾಗೂ ವಿಚಾರಣಾಧೀನ ಕೈದಿಯಾಗಿರುವ ಆರ್.ಡಿ.ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನ ವರ್ತನೆಯಿಂದ ಕೇಂದ್ರ ಕಾರಾಗೃಹದಲ್ಲಿ ಅಶಾಂತಿ ಹೆಚ್ಚಾಗಿದ್ದು, ಆತನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಾರಾಗೃಹ ಇಲಾಖೆಯ ಡಿಐಜಿಗೆ ಪತ್ರ ಬರೆದಿದ್ದಾರೆಂದು ಗೊತ್ತಾಗಿದೆ. ಜೈಲಿನೊಳಗಿನಿಂದಲೇ ಆರ್.ಡಿ.ಪಾಟೀಲ್ ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಜೈಲು ವ್ಯವಸ್ಥೆಯಲ್ಲಿನ ಹಲವು ಹತ್ತು ಸ್ವರೂಪದ ಅವ್ಯವಸ್ಥೆಗಳಿಗೆ ಕನ್ನಡಿ ಹಿಡಿಯುವ ಮೂಲಕ ತೀವ್ರ ಸಂಚಲನ ಮೂಡಿಸಿದೆ.
ಏತನ್ಮಧ್ಯೆ ಬ್ಯಾರಕ್ ತಪಾಸಣೆಗೆ ತೆರಳಿದ್ದ ಜೈಲು ಸಿಬ್ಬಂದಿ ಶಿವಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆ ಫರಹತಾಬಾದ್ ಪೊಲೀಸರು ಆರ್. ಡಿ. ಪಾಟೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರ್ ಡಿ ಪಾಟೀಲ್ ಕಳೆದ ಒಂದು ತಿಂಗಳಲ್ಲೇ ಈ ರೀತಿ ಜೈಲು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿರುವ 2 ಪ್ರಕರಣ ಜೈಲಿನಿಂದ ವರದಿಯಾಗಿವೆ. ಈ ಪ್ರಕಣಗಳಿಗೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ಫರತಾಬಾದ್ ಠಾಣೆಯಲ್ಲಿ ದಾಖಲಾಗಿವೆ. ಕೇಂದ್ರೀಯ ಕಾರಾಗೃಹದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಸಂಬಂಧ ಆರ್ ಡಿ ಪಾಟೀಲ್ ನನ್ನು ಬಾಡಿ ವಾರೆಂಟ್ ಮೇಲೆ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆದು ಮಂಗಳವಾರ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಖಡಕ್ ಅಧಿಕಾರಿ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರಾಗಿ ಅಧಿಕಾರ ಹಾಗೂ ಜವಾಬ್ದಾರಿ ವಹಿಸಿಕೊಂಡ ನಂತರ ಜೈಲಿನಲ್ಲಿ ಬಿಗಿ ನಿಯಮ ಜಾರಿಗೊಂಡಿರೋದರಿಂದ ಇದು ಕೈದಿಗಳಿಗೆ ನುಂಗಲಾರದ ತುತ್ತಾದಂತಾಗಿದೆ. ಈ ಬದಲಾವಣೆಯನ್ನು ಹಾಗೂ ಖಡಕ್ ನಿಯಮ ವಿರೋಧಿಸಿ ಆರ್‌ಡಿ ಪಟೀಲ್ ಸಿಬ್ಬಂದಿ ಜೊತೆ ಕಿರಿಕ್ ಮಾಡುತ್ತಿದ್ದಾನೆಂದು ಹೇಳಲಾಗುತ್ತಿದೆ.
ಆರ್.ಡಿ.ಪಾಟೀಲ್ ಜೈಲಿನ ವಾತಾವರಣ ಹಾಳು ಮಾಡುತ್ತಿದ್ದು, ಕೈದಿಗಳಿಗೂ ತೊಂದರೆ ನೀಡುತ್ತಿದ್ದಾನೆಂದು ಹಲವು ಹತ್ತು ಕರಣಗಳು, ಆತ ಜೈಲಿನೊಳಗೆ ತೋರುತ್ತಿರುವ ನಡಾವಳಿಗಳನ್ನೆಲ್ಲ ಉಲ್ಲೇಖಿಸಿ, ತಕ್ಷಣ ಕಲಬುರಗಿಯಿಂದ ಬೇರೆ ಜೈಲಿಗೆ ವರ್ಗಾಯಿಸುವಂತೆ ಉತ್ತರ ವಲಯ (ಬೆಳಗಾವಿ) ಡಿಐಜಿಗೆ ಜೈಲು ಅಧೀಕ್ಷಕಿ ಪತ್ರ ಬರೆದಿದ್ದಾರೆ. ಇವರು ಪತ್ರ ಬರೆದು ಹತ್ತು ದಿನ ಕಳೆದರೂ ಮೇಲಾಧಿಕಾರಿಗಳಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ವರ್ಗಾವಣೆ ಪ್ರಕ್ರಿಯೆ ಚರ್ಚೆಯಲ್ಲಿರುವ ನಡುವೆಯೇ, ಆರ್.ಡಿ.ಪಾಟೀಲ್ ತನ್ನ ಬೆಂಬಲಿಗರ ಮೂಲಕ ಜೈಲಿನೊಳಗಿನಿಂದಲೇ ವಿಡಿಯೋ ಬಿಡುಗಡೆ ಮಾಡಿಸಿದ್ದು, ಕೆಲ ಜೈಲಾಧಿಕಾರಿಗಳು ತನ್ನಿಂದ ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ತನ್ನ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ, ಹೀಗೆಲ್ಲಾ ಬ್ಯಾರಾಕ್‌ಗೆ ಬಂದು ತೊಂದರೆ ಕೊಡಲು ಶುರುಮಾಡಿದ್ದಾರೆಂದು ಆರೋಪಿಸಿದ್ದಾನೆ.
ಆರ್‌ಡಿ ಪಾಟೀಲ್ ಜೈಲ್ ಸಿಬ್ಬಂದಿ ಜೊತೆ ವಾಗ್ವಾದ ನಡೆಸುವ ಹಾಗೂ ಆರೋಪ ಮಾಡಿರುವ ವಿಡಿಯೋಗಳೆರಡೂ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಜೈಲಲ್ಲಿ ಹೀಗೆಲ್ಲಾ ವಿಡಿಯೋ ಮಾಡಿದ್ದು, ಮೋಬೈಲ್ ಬಳಸಿದ್ದು ಯಾರು ಎಂಬುದೇ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕಲಬುರಗಿ ಜೈಲಿನಿಂದ ಕೈದಿಗಳ ಬಳಿಯಿಂದ ಮೋಬೈಲ್, ಬ್ಲೂಟೂತ್ ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದವು. ಇದೀಗ ಜೈಲ್‌ನಿಂದಲೇ ವಿಡಿಯೋ ಮಾಡಿ ಹರಬಿಡುತ್ತಿರೋದು ಗಮನಿಸಿದರೆ ಕೈದಿಗಳು ಮೊಬೈಲ್ ಸೇರಿದಂತೆ ಹಲವು ಸವಲತ್ತುಗಳೊಂದಿಗೆ ಅರಾಮಾಗಿದ್ದಾನೆಂಬ ಶಂಕೆ ಕಾಡಲಾರಂಭಿಸಿದೆ.
2023ರ ಅಕ್ಟೋಬರ್ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ನಡೆದಿದ್ದು, ಅಂದು ಬ್ಲೂಟೂತ್ ಸಹಾಯದಿಂದ ಪರೀಕ್ಷಾ ಕೊಠಡಿಯಲ್ಲಿದ್ದ ಅಭ್ಯರ್ಥಿಗಳಿಗೆ ಆರ್ ಡಿ ಪಾಟೀಲ್, ಅಂಬರೀಶ್ ಮತ್ತು ತ್ರಿಮೂರ್ತಿ ತಳವಾರ್ ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಿ ಕೊಠಡಿ ಮೇಲ್ವಿಚಾರಕಿಯಾದ ಸಹಾಯಕ ಉಪನ್ಯಾಸಕಿ ಶಿಲ್ಪಾ ಅವರು ದೂರು ನೀಡಿದ್ದರು. ಇದರ ಅನ್ವಯ ಕಲಬುರ್ಗಿಯ ಅಶೋಕ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 420,120B, 109, 114, 36, 37, 34 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66(ಡಿ) ಅಡಿ ಆರ್ ಡಿ ಪಾಟೀಲ್ ಒಳಗೊಂಡು ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ಇನ್ನು ಕೂಡ ವಿಚಾರಣೆ ಹಂತದಲ್ಲಿದೆ.