ಬುಡಕಟ್ಟು ಕಾಡುಗೊಲ್ಲರಿಗೂ ಎಸ್ಟಿ ಮೀಸಲು ಕಲ್ಪಿಸಿ; ಚೇತನ್‌ ಆಗ್ರಹ

By Kannadaprabha News  |  First Published Oct 31, 2022, 10:11 AM IST
  • ಬುಡಕಟ್ಟು ಕಾಡುಗೊಲ್ಲರಿಗೂ ಎಸ್ಟಿಮೀಸಲು ಕಲ್ಪಿಸಿ
  • ಹಿರಿಯೂರಿನಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಆಗ್ರಹ
  •  ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮೀಸಲು ಸೌಲಭ್ಯ ಹೆಚ್ಚಳಕ್ಕೆ ಸ್ವಾಗತ

ಹಿರಿಯೂರು (ಅ.31) ಮಧ್ಯಕರ್ನಾಟಕ ಭಾಗದಲ್ಲಿ ವಿಸ್ತೃತವಾಗಿ ಹರಡಿರುವ ಬುಡಕಟ್ಟು ಸಂಸ್ಕೃತಿಯ ದಟ್ಟಪ್ರಭಾವದ ಕಾಡುಗೊಲ್ಲರಿಗೆ ಪರಿಶಿಷ್ಟಪಂಗಡ ಮೀಸಲು ಸೌಲಭ್ಯ ಕಲ್ಪಿಸುವುದು ಅಗತ್ಯವೆಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ಪ್ರತಿಪಾದಿಸಿದರು. ಕಾರ್ಯನಿಮಿತ್ತ ಭಾನುವಾರ ಹಿರಿಯೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಡುಗೊಲ್ಲರಿಗೆ ಎಸ್ಟಿಮೀಸಲು ಸೌಲಭ್ಯ ಸಂಬಂಧ ಈಗಾಗಲೇ ಹೋರಾಟಗಳು ಆರಂಭವಾಗಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದರು.

ಸಂಘಟಿತ ಹೋರಾಟ ನಡೆಸಿದಲ್ಲಿ ಕಾಡುಗೊಲ್ಲರಿಗೆ ಯಶಸ್ಸು: ಸಿ.ಟಿ.ರವಿ

Tap to resize

Latest Videos

ಕಾಡುಗೊಲ್ಲ ಬುಡಕಟ್ಟು ಜನಾಂಗ ತನ್ನದೆ ಆದ ವಿಶೇಷ ಮತ್ತು ವಿಶಿಷ್ಟಸಂಸ್ಕೃತಿ ಹೊಂದಿದೆ. ಈ ಸಮುದಾಯದಲ್ಲಿ ಜುಂಜಪ್ಪ, ಯತ್ತಪ್ಪ, ಜಂಪಣ್ಣ, ಕಾಟಪ್ಪ, ಕರಡಿ ಬುಳ್ಳಪ್ಪರಂತಹ ಮಹಾನ… ಪುರುಷರ ಪರಂಪರೆಯಿದೆ. ಬುಡಕಟ್ಟು ಲಕ್ಷಣಗಳನ್ನು ಹೊಂದಿರುವ ಸಮಾಜಕ್ಕೆ 2018ರಲ್ಲಿ ಜಾತಿ ಪಟ್ಟಿನೀಡುವಂತೆ ಸಮುದಾಯದ ಹೋರಾಟಗಾರರು, ಸ್ನೇಹಿತರು ಮತ್ತು ಮುಖಂಡರೊಂದಿಗೆ ಹೋರಾಟ ಮಾಡಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಯಿತು ಎಂದರು.

ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಬೇಡಿಕೆ ಇದ್ದು ಹೋರಾಟಕ್ಕೆ ದನಿಗೂಡಿಸುತ್ತೇನೆ. ಈ ಬಗ್ಗೆ ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯವರಿಗೆ ಒತ್ತಡ ಹಾಕಲಾಗಿದೆ. ಆದಷ್ಟುಬೇಗ ಮೀಸಲಾತಿ ನೀಡುವಂತೆ ಮತ್ತೆ ಮನವರಿಕೆ ಮಾಡಿಕೊಡಲಾಗುವುದು. ಕಾಡುಗೊಲ್ಲರ ಎಸ್‌ಟಿ ಬೇಡಿಕೆ ಬಹಳ ನ್ಯಾಯಯುತವಾಗಿದೆ. ಕಾಡುಗೊಲ್ಲ ಸಮುದಾಯ, ಆದಿವಾಸಿ ಸಮಾಜ, ಮೂಲನಿವಾಸಿಗಳು ಹಾಗೂ ಬಹು ಸಂಸ್ಕೃತಿ ಜೊತೆ ಸದಾ ಇರುತ್ತೇನೆ ಎಂದು ಚೇತನ್‌ ಹೇಳಿದರು.

ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯದ ಪರಿಕಲ್ಪನೆ. ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕು ಪಡೆಯುವುದಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌, ಅಂಬೇಡ್ಕರ್‌ ಪೆರಿಯಾರ್‌ ಸೇರಿದಂತೆ ಮತ್ತಿತರರು ಮೀಸಲಾತಿ ತಿದ್ದುಪಡಿ ತರಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಉಳಿಸುವುದು ಬಹಳ ಮುಖ್ಯ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳಿಗೆ ಮೀಸಲು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿಲುವು ಸ್ವಾಗತಾರ್ಹವೆಂದರು.

ಹಿಂದೂ ಧರ್ಮದಿಂದ ಬೇರ್ಪಡಿಸುವ ಸಂಚು: ಕರಾವಳಿಯ ದೈವಾರಧಕರು ಗರಂ

ಚಿತ್ರದುರ್ಗ ಭಾಗದಲ್ಲಿ ಮೀಸಲಾತಿ ಹೋರಾಟ ಮುಂದುವರಿದಿದ್ದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ನಡೆಸಿದ್ದಾರೆ. ನಾಗಮೋಹನ್‌ ದಾಸ್‌ ವರದಿಯಿಂದ ಎಸ್‌ಟಿ ಜನಾಂಗಕ್ಕೆ 3 ರಿಂದ 7 ಪರ್ಸೆಂಚ್‌ಗೆ ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯ ಜೊತೆಗೆ ಒಳಮೀಸಲಾತಿ ಸಿಗಬೇಕು. ಅಸಮಾನತೆ ಮಾಡಿದ ಬ್ರಾಹ್ಮಣ್ಯ - ವೈಧಿಕತೆಯನ್ನು ಎಲ್ಲರೂ ವಿರೋಧಿಸೋಣ ಎಂದು ಚೇತನ್‌ ಹೇಳಿದರು.

click me!