ರಿಪ್ಪನ್‌ಪೇಟೆ ಮಹಿಳಾ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ವಿರೋಧಿಸಿ ಪ್ರತಿಭಟನೆ..!

By Kannadaprabha NewsFirst Published May 12, 2020, 4:28 PM IST
Highlights

ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್‌ ಸೆಂಟರ್ ಮಾಡಲು ದಿ.ದೇವರಾಜ್‌ ಅರಸು ಮಹಿಳಾ ಹಾಸ್ಟೆಲ್‌ ಆಯ್ಕೆ ಮಾಡಿಕೊಂಡ ಜಿಲ್ಲಾಡಳಿತದ ಕ್ರಮ ರಿಪ್ಪನ್‌ಪೇಟೆ ಮಂದಿಯ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

ರಿಪ್ಪನ್‌ಪೇಟೆ(ಮೇ.12): ಇಲ್ಲಿನ ಬರುವೆ ಗ್ರಾಮದಲ್ಲಿರುವ ದಿ.ದೇವರಾಜ್‌ ಅರಸು ಮಹಿಳಾ ಹಾಸ್ಟೆಲ್‌ನಲ್ಲಿ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಕ್ವಾರಂಟೈನ್‌ ಮಾಡಬಾರದೆಂದು ಅಗ್ರಹಿಸಿ ದೊಡ್ಡಿನಕೊಪ್ಪ ಎಸ್‌.ಸಿ. ಕಾಲೋನಿಯವರು ಸೇರಿದಂತೆ ಸ್ಥಳೀಯರು ಬಾಲಕಿಯರ ಹಾಸ್ಟೆಲ್‌ ಗೇಟ್‌ ಎದುರು ಪ್ರತಿಭಟನೆ ನಡೆಸಿದರು.

ಕೊರೋನಾ ಮುಂಜಾಗ್ರತಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅದೇಶದಂತೆ ರಿಪ್ಪನ್‌ಪೇಟೆ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಸ್ವಚ್ಚಗೊಳಿಸುವ ಮೂಲಕ ಸೋಮವಾರ ರಾತ್ರಿ ಹೊರರಾಜ್ಯದಿಂದ ಬರುತ್ತಿರುವವರನ್ನು ಇಲ್ಲಿಯೇ ಕ್ವಾರಂಟೈನ್‌ ಮಾಡಲಾಗುತ್ತದೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಇದನ್ನು ಕೇಳಿ ಸ್ಥಳೀಯ ವಸತಿ ನಿಲಯದ ಅಕ್ಕಪಕ್ಕದ ನಿವಾಸಿಗಳು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಹಾಸ್ಟಲ್‌ ಬಳಿ ಜಮಾಯಿಸಿ ಯಾವುದೇ ಕಾರಣಕ್ಕೂ ಹೊರ ರಾಜ್ಯದವರನ್ನು ಕ್ವಾರಂಟೈನ್‌ ಮಾಡದಂತೆ ಒತ್ತಾಯಿಸಿದರು.

ಸಾಗರದಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಹೆಚ್ಚಿನ ಜನರು ಇದೇ ಮಾರ್ಗದಲ್ಲಿ ನಿತ್ಯ ಹಾಲು ಖರೀದಿ, ಕೃಷಿ ಇಲಾಖೆಯ ಕೆಲಸ ಸೇರಿದಂತೆ ಹಲವಾರು ಕೆಲಸಗಳಿಗೆ ಓಡಾಡುತ್ತಾರೆ. ಈ ಕಾರಣಕ್ಕೆ ಇಲ್ಲಿ ಯಾರನ್ನೂ ಕ್ವಾರಂಟೈನ್‌ ಮಾಡಬಾರದೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.

ತಾಪಂ ಸದಸ್ಯ ಎನ್‌. ಚಂದ್ರೇಶ್‌,ಗ್ರಾಪಂ. ಸದಸ್ಯ ಕೊಳವಳ್ಳಿ ಎಂ.ರಾಜೇಶ್‌, ವನಮಾಲ ಭೇಟಿ ನೀಡಿ ಪ್ರತಿಭಟನಾ ನಿರತರ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸಿ ಸಂಬಂಧ ಪಟ್ಟಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಪುಟ್ಟಪ್ಪ, ಎಂ.ಡಿ.ಇಂದ್ರಮ್ಮ, ಅಬ್ದುಲ್‌, ಖಾದರ್‌, ಶಾಂತಪ್ಪ, ಸ್ವಾಮಿ, ರವಿ, ಚಂದ್ರ, ಷಣ್ಮುಖ, ಶಾಂತಣ್ಣ, ಮಂಜು, ಶಂಕರಣ್ಣ, ಮೀನಾಕ್ಷಿ, ಸುಜಾತ, ಸುಮಿತ್ರ, ಶಾರದಮ್ಮ, ಹೇಮಾ, ವೇದಾ ಹಾಗೂ ನೂರಾರು ಜನರು ಜಮಾಯಿಸಿದ್ದರು.

click me!