ಉಳ್ಳವರಿಗೆ ಭೂ ಗುತ್ತಿಗೆ ನೀಡುವುದನ್ನು ವಿರೋಧಿಸಿ ಬೀದಿಗಿಳಿದ ಸಾವಿರಾರು ಜನರು: ಪ್ರತಿಭಟನೆಗೆ ನಲುಗಿದ ಮಡಿಕೇರಿ

Published : Jan 17, 2025, 06:02 PM IST
ಉಳ್ಳವರಿಗೆ ಭೂ ಗುತ್ತಿಗೆ ನೀಡುವುದನ್ನು ವಿರೋಧಿಸಿ ಬೀದಿಗಿಳಿದ ಸಾವಿರಾರು ಜನರು: ಪ್ರತಿಭಟನೆಗೆ ನಲುಗಿದ ಮಡಿಕೇರಿ

ಸಾರಾಂಶ

ಹಲವು ವರ್ಷಗಳಿಂದ ಉಳ್ಳವರಿಂದಲೇ ಒತ್ತುವರಿಯಾಗಿರುವ ಭೂಮಿಯನ್ನು ಮತ್ತೆ ಅವರಿಗೆಯೇ ಗುತ್ತಿಗೆ ನೀಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ವಿರೋಧಿಸಿ ಮಡಿಕೇರಿಯಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. 

ವರದಿ: ರವಿ. ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.17): ಹಲವು ವರ್ಷಗಳಿಂದ ಉಳ್ಳವರಿಂದಲೇ ಒತ್ತುವರಿಯಾಗಿರುವ ಭೂಮಿಯನ್ನು ಮತ್ತೆ ಅವರಿಗೆಯೇ ಗುತ್ತಿಗೆ ನೀಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ವಿರೋಧಿಸಿ ಮಡಿಕೇರಿಯಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಡಿಕೇರಿಯ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಭೂಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಸರ್ಕಾರದ ಭೂಗುತ್ತಿಗೆ ನೀತಿಯನ್ನು ವಿರೋಧಿಸಿ ಘೋಷಣೆ ಕೂಗಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಉಳ್ಳವರಿಂದಲೇ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. 

ಅದನ್ನು ಬಿಡಿಸಬೇಕಾದ ಸರ್ಕಾರ ಮತ್ತೆ ಉಳ್ಳವರಿಗೆ ಗುತ್ತಿಗೆ ನೀಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಸಾಗಿದ ಅವರು ಎರಡು ಕಿಲೋಮೀಟರ್ ಗೂ ಹೆಚ್ಚು ದೂರ ಮೆರವಣಿಗೆಯಲ್ಲಿ ನಡೆಸಿದರು. ಇದಕ್ಕೂ ಮೊದಲು ಪ್ರತಿಭಟನಾ ಮೆರವಣಿಗೆಯ ಮಧ್ಯದಲ್ಲಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಅರ್ಧಗಂಟೆಗೂ ಹೆಚ್ಚು ಸಮಯ ರಸ್ತೆಯಲ್ಲಿಯೇ ನಿಂತು ಸರ್ಕಾರದ ನೀತಿಯ ವಿರುದ್ಧ ಅಸಮಾಧಾನ ಹೊರಹಾಕಿದರು. ಇದರಿಂದಾಗಿ ಮೈಸೂರು ಮಡಿಕೇರಿ ಹಾಗೂ ಮಡಿಕೇರಿ ಮಂಗಳೂರು ಮತ್ತು ಮಡಿಕೇರಿ ವಿರಾಜಪೇಟೆ ಹೆದ್ದಾರಿಗಳು ಬಂದ್ ಆಗಿ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಕೂಡ ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದರು. 

ಕಾಡು ಪಾಲಾದ ರಾಜ್ಯದ ಮೊಟ್ಟ ಮೊದಲ ಮೇಕೆ ಹಾಲು ಉತ್ಪಾದನಾ ಘಟಕ

ಈ ಸಂದರ್ಭ ಸರ್ಕಾರಿ ಭೂಮಿ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಮುಖಂಡ ಪಿ.ಆರ್. ಭರತ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಉಳ್ಳ ಜಮೀನುದಾರರುಗಳೇ ಒತ್ತುವರಿ ಮಾಡಿಕೊಂಡು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ನಿವೇಶನವೂ ಇಲ್ಲದೆ ಲೈನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ ಬಡ ಜನರು ಬದುಕುತ್ತಿದ್ದಾರೆ. ಇವರಿಗೆ ನಿವೇಶನವನ್ನು ನೀಡುವಂತೆ ಹತ್ತಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಇದ್ದೇವೆ. ಆದರೆ ಇದ್ಯಾವುದಕ್ಕೂ ಕಿವಿಗೊಡದ ಸರ್ಕಾರ ಉಳ್ಳವರಿಗೆ ಸರ್ಕಾರಿ ಭೂಮಿಯನ್ನು 30 ವರ್ಷಗಳ ಕಾಲದವರೆಗೆ ಗುತ್ತಿಗೆ ನೀಡಲು ಮುಂದಾಗಿದೆ. 

ಇದು ಬಡವರ ವಿರೋಧಿ ಸರ್ಕಾರ ಎನ್ನುವುದು ಸ್ಪಷ್ಟ ಎಂದು ಅಸಮಾಧಾನ ಹೊರಹಾಕಿದರು. ಇದೇ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಕೊಡಗು ಜಿಲ್ಲಾಧ್ಯಕ್ಷ ನಿರ್ವಾಣಪ್ಪ ಮಾತನಾಡಿ ನಾವೇ ಓಟು ಹಾಕಿ ಗೆಲ್ಲಿಸಿದ ಜಿಲ್ಲೆಯ ಇಬ್ಬರು ಶಾಸಕರು ಇಂದು ನಮ್ಮ ವಿರುದ್ಧವೇ ಕೆಲಸ ಮಾಡಲು ಹೊರಟಿದ್ದಾರೆ. ಇದನ್ನು ಇಲ್ಲಿಗೆ ಕೈಬಿಟ್ಟು ಬಡವರಿಗೆ, ನಿವೇಶನ ರಹಿತರಿಗೆ ಭೂಮಿ ಕೊಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕೊಡಗಿನಿಂದ ಬೆಂಗಳೂರಿಗೆ ಜಾಥಾ ಹೊರಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಗೋವುಗಳ ಕೆಚ್ಚಲು ಕತ್ತರಿಸಿ ನೈಜ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿದ ನೈಜ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗೋವು ಸುರಕ್ಷಾ ಮತ್ತು ಸಂವರ್ಧನಾ ಸಮಿತಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ, ಸಂಘ ಪರಿವಾರದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ತಿಮ್ಮಯ್ಯ ವೃತ್ತದಲ್ಲಿ ಹತ್ತು ನಿಮಿಷಗಳ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಆ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕೂಡ ಹಿಂದೂಪರ ಸಂಘಟನೆಗಳ ಕಾರ್ಯಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಅಧ್ಯಕ್ಷ ಭೋಜೇಗೌಡ ಮಾತನಾಡಿ ರಾಜ್ಯದಲ್ಲಿ ಜಿಹಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಕ್ಫ್ಬೋರ್ಡ್ ವಿರುದ್ಧ ಪ್ರತಿಭಟನೆ ನಡೆಯುವ ಸಂದರ್ಭ ಇದೇ ಹಸುಗಳನ್ನು ಪ್ರತಿಭಟನೆಯಲ್ಲಿ ಕರೆದೊಯ್ಯಲಾಗಿತ್ತು. 

ಒತ್ತುವರಿದಾರರಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ

ಹೀಗಾಗಿ ಈ ಹಸುಗಳನ್ನು ಟಾರ್ಗೆಟ್ ಮಾಡಿ ಅವುಗಳ ಕೆಚ್ಚಲನ್ನು ಕತ್ತರಿಸಲಾಗಿದೆ. ಇದೊಂದು ವ್ಯವಸ್ಥಿತಿ ಷಡ್ಯಂತ್ರವಾಗಿದ್ದು, ಮತಾಂಧ ಶಕ್ತಿಗಳನ್ನು ಸೇಡು ತೀರಿಸಿಕೊಂಡಿವೆ. ಆದರೆ ಸರ್ಕಾರ ಅಸ್ಸಾಂನ ಯಾವುದೋ ಅಮಾಯಕನನ್ನು ಕರೆದುಕೊಂಡು ಬಂದು ಆತನನ್ನು ಬಂಧಿಸಿದ್ದೇವೆ ಎಂಬ ನಾಟಕ ಆಡುತ್ತಿದೆ. ಜೊತೆಗೆ ಅವನನ್ನು ಮಾನಸಿ ರೋಗಿ, ಕುಡುಕ ಎಂದು ಬಿಂಬಿಸಿ ಹಿಂದೂಗಳನ್ನು ಮೋಸಗೊಳಿಸಲು ಯತ್ನಿಸುತ್ತಿದೆ. ಇದನ್ನು ಹಿಂದೂಗಳು ಸುಮ್ಮನೆ ಬಿಡುವುದಿಲ್ಲ, ನೈಜ ಮತಾಂಧದನ್ನು ಬಂಧಿಸಿ ಅವನಿಗೆ ಗಲ್ಲುಶಿಕ್ಷೆ ಕೊಡುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.

PREV
Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ