ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಕೂಗು ಜೋರಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೆಂಡ್ ಆಗುತ್ತಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ
ಹೊನ್ನಾವರ, (ಜುಲೈ.30): ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಮತ್ತೆ ಹೋರಾಟ ನಡೆದಿದೆ. ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟ ಹಾಗೂ ಸಾರ್ವಜನಿಕರಿಂದ ಜಿಲ್ಲೆಯ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಮುಂದಿನ ಚುನಾವಣೆ ಒಳಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಅಡಿಪಾಯ ಹಾಕದಿದ್ದಲ್ಲಿ ಮುಂಬರುವ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಶಿರೂರಿನಲ್ಲಿ ಮೃತರಾದವರಿಗೆ ತಲಾ 30 ಲಕ್ಷ ರೂ.ಪರಿಹಾರ ಐಆರ್‌ಬಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ...
ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹಿಂದಿನಿಂದಲೂ ಸಾಕಷ್ಟು ಕೂಗು ಕೇಳಿಬಂದಿತ್ತು. ಆದರೆ, ಸರಕಾರ ಮಾತ್ರ ಇದಕ್ಕೆ ಯಾವುದೇ ಸೂಕ್ತ ಸ್ಪಂದನೆ ನೀಡಿರಲಿಲ್ಲ. ಇತ್ತೀಚೆಗೆ ಹೊನ್ನಾವರದಿಂದ ಉಡುಪಿಯತ್ತ ಸಾಗುತ್ತಿದ್ದ ಆ್ಯಂಬುಲೆನ್ಸ್ ಶಿರೂರು ಟೋಲ್‌ಗೇಟ್‌ನಲ್ಲಿ ಅಪಘಾತಕ್ಕೀಡಾದ ಬಳಿಕ ಜನರಿಂದ ಹೋರಾಟ, ಅಭಿಯಾನ ಪ್ರಾರಂಭಗೊಂಡಿತ್ತು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸ್ವಾಮೀಜಿಗಳು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಆಸ್ಪತ್ರೆಗಾಗಿ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಈ ಹೋರಾಟ ಸೈಲೆಂಟಾಗುವ ಮುನ್ನವೇ ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟ ಹಾಗೂ ಸಾರ್ವಜನಿಕರಿಂದ ಹೊನ್ನಾವರದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಉತ್ತರ ಕನ್ನಡಕ್ಕೊಂದು ಆಸ್ಪತ್ರೆಗಾಗಿ ಬೆಂಗ್ಳೂರಲ್ಲಿ ಪ್ರತಿಭಟನೆ, ಮನ್ ಕೀ ಬಾತ್‌ಗೆ ಕರೆ ಮಾಡಲು ನಿರ್ಣಯ
ಹೊನ್ನಾವರದ ಶರಾವತಿ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಆಸ್ಪತ್ರೆ ಕೊಡಿ, ಜೀವ ಉಳಿಸಿ ಎಂದು ಘೋಷಣೆ ಹಾಕಿದರು. ನಂತರ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನಾ ಸಭೆ ನಡೆಸಿ, ಸ್ಥಳದಲ್ಲೇ ಸಂಜೆಯವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡರು. ಈ ವೇಳೆ ಮಾತನಾಡಿದ ಪ್ರಮುಖರು, ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಸರಕಾರ ಇನ್ನೆಷ್ಟು ಬಲಿಗಾಗಿ ಕಾಯುತ್ತಿದೆ ಎಂದು ತಿಳಿದಿಲ್ಲ. ಜನರಿಗಾಗಿ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಿಲ್ಲಂದ್ರೆ ಜನಪ್ರತಿನಿಧಿಗಳಿಗೆ ಅಧಿಕಾರ ಮಾಡೋ ಯೋಗ್ಯತೆಯಿಲ್ಲ. ಮುಂದಿನ ಚುನವಣೆಯ ಒಳಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಅಡಿಪಾಯ ಹಾಕದಿದ್ದಲ್ಲಿ ಮುಂಬರುವ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಹೋರಾಟದ ನಡುವೆ ಸರಕಾರ ಅಧಿಕೃತ ಆದೇಶ ಹೊರಡಿಸುವವರೆಗೂ ಸಂಜೆಯವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಅಲ್ಲದೇ, ಹೊನ್ನಾವರ ತಾಲೂಕು ಆಡಳಿತ ಸೌಧದ ಮುಂಭಾಗವೇ ಪ್ರತಿಭಟನಾಕಾರರು ಉಪವಾಸಕ್ಕೆ ಕುಳಿತಿದ್ದಾರೆ. ಆಸ್ಪತ್ರೆಗಾಗಿ ಹೋರಾಟಕ್ಕೆ ವಿವಿಧ ಕ್ಷೇತ್ರದ ಗಣ್ಯರು, ಮಠಾಧೀಶರು, ಸಾಹಿತಿಗಳಿಂದ ಬೆಂಬಲ ದೊರಕಿದೆ. ಆದರೆ, ಸರಕಾರ ಹಾಗೂ ಜನಪ್ರತಿನಿಧಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರೂರು ಟೋಲ್‌ಗೇಟ್‌ನಲ್ಲಿ ನಡೆದ ಅಪಘಾತಕ್ಕೆ ಐಆರ್‌ಬಿಯೇ ನೇರ ಕಾರಣ. ಜಿಲ್ಲೆಯಲ್ಲಿ ಐಆರ್‌ಬಿ ಕಾಮಗಾರಿಯಿಂದಾಗಿ ಸಾಕಷ್ಟು ಸಾವು ನೋವುಗಳು ಉಂಟಾಗಿವೆ. ಶಿರೂರಿನಲ್ಲಿ ಮೃತಗೊಂಡ ಕುಟುಂಬಕ್ಕೆ ತಲಾ 30ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ಐಆರ್‌ಬಿಯವರ ಟೋಲ್‌ಗೇಟ್ ಅನ್ನು ಜನರು ಒಡೆದು ಹಾಕಲು ಕೂಡಾ ಹಿಂಜರಿಯುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಜನರು ರಾಜ್ಯ ಸರಕಾರ ಹಾಗೂ ಐಆರ್‌ಬಿ ವಿರುದ್ಧ ಸಿಡಿದೆದ್ದಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಾಡಿಯೇ ತೀರಬೇಕೆಂದು ಹಠಕಟ್ಟಿ ಕುಳಿತಿದ್ದಾರೆ. ಅಲ್ಲದೇ, ಐಆರ್‌ಬಿ ಕಂಪೆನಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಬಿಸಿ ತಟ್ಟೋದಂತೂ ಗ್ಯಾರಂಟಿ.