ಕೊಪ್ಪಳ (ಜು.30) : ಇರಕಲ್‌ಗಡಾ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು, ಇದನ್ನು ತಡೆಯುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ನೂರಾರು ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಪಬ್ಲಿಕ್ ಗ್ರೌಂಡ್‌ನಲ್ಲಿ ಜಮಾಯಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Upper Krishna Project: ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ: ಸಚಿವ ಕಾರಜೋಳ
undefined
ರೈತರಿಗೆ(Farmers) ಸರ್ಕಾರ ಕೊಟ್ಟಿರುವ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯುವ ಹುನ್ನಾರ ನಡೆಸಿ ರೈತರನ್ನು ಒಕ್ಕಲೆಬ್ಬಿಸುವ ಯತ್ನ ನಡೆಸಿದ್ದು, ಕೂಡಲೇ ಇದನ್ನು ಕೈಬಿಟ್ಟು ಕೊಟ್ಟಿರುವ ಜಮೀನು ರೈತರಿಗೆ ಉಳಿಯುವಂತಾಗಬೇಕು ಎಂದರು. ಇರಕಲ್‌ಗಡಾ ಭಾಗ, ಅರಸಿಕೇರಿ ಭಾಗ ಸೇರಿ ಇತರೆಡೆ ಕಳೆದ 50- 60 ವರ್ಷಗಳ ಕಾಲ ಸಾಗುವಳಿ ಮಾಡಿಕೊಂಡು ಬಂದಿರುವ ಕೃಷಿ ಜಮೀನನ್ನು ಈ ಹಿಂದೆ ಸರ್ಕಾರವೇ ಅಕ್ರಮ- ಸಕ್ರಮದಡಿ ರೈತರ ಹೆಸರಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ರೈತರು ಅದೇ ಜಮೀನು ನೆಚ್ಚಿಕೊಂಡು ಕೃಷಿಯಲ್ಲಿ ಜೀವನ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಬೋರ್‌ವೆಲ್ ಕೊರೆಯಿಸಿಕೊಂಡು ರೈತರು ನೀರಾವರಿ ಮಾಡಿಕೊಂಡಿದ್ದಾರೆ.
ಜನ- ಜಾನುವಾರು ಜೀವನ ಸಾಗಿಸುತ್ತಿವೆ. ಆದರೆ ಈಗ ಸರ್ಕಾರವೇ ಕೊಟ್ಟಿರುವ ಜಮೀನಿನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಜಮೀನು ತಮಗೆ ಸೇರಬೇಕಾಗಿದ್ದು ಎಂದು ಹೇಳಿ ತಹಸೀಲ್ದಾರ್ ಕಚೇರಿಗೆ ಮುಟೆಶನ್‌ಗೆ ಅರ್ಜಿ ಕೊಡುವ ಮೂಲಕ ಅಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಯತ್ನಕ್ಕೆ ಮುಂದಾಗಿದೆ. ಇದು ಅತ್ಯಂತ ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗಂಗಾವತಿ: ರಾಂಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಸೋರಿಕೆ
ರಾಜ್ಯ ಸರ್ಕಾರವು ಕೂಡಲೇ ಕಂದಾಯ ಇಲಾಖೆಯ ಮೂಲಕ ಅರಣ್ಯ ಇಲಾಖೆಗೆ ಪತ್ರ ಬರೆದು ರೈತರ ಒಕ್ಕಲೆಬ್ಬಿಸುವ ಯತ್ನ ನಿಲ್ಲಿಸಬೇಕು. ರೈತರಿಗೆ ಯಾವುದೇ ತೊಂದರೆ ಎದುರಾದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ(Protest)ಯಲ್ಲಿ ಕಾಂಗ್ರೆಸ್ ನಾಯಕರಾದ ಎಚ್.ಆರ್. ಶ್ರೀನಾಥ, ಕರಿಯಣ್ಣ ಸಂಗಟಿ, ಹೋರಾಟಗಾರ ವೈ.ಎನ್. ಗೌಡರ್, ಸಂಗಮೇಶ ಬಾದವಾಡಗಿ, ಟಿ. ರತ್ನಾಕರ ಸೇರಿದಂತೆ ಇರಕಲ್‌ಗಡಾ ಭಾಗದ ರೈತರು ಪಾಲ್ಗೊಂಡಿದ್ದರು.
ರೈತರಿಗೆ ಈಗಾಗಲೇ ಮಂಜೂರು ಮಾಡಿರುವ ಭೂಮಿಯ ಕುರಿತು ಸರ್ಕಾರವೇ ಹೊಸ ನಾಟಕವೊಂದನ್ನು ಪ್ರಾರಂಭಿಸಿದೆ. ಅರಣ್ಯ ಇಲಾಖೆಯ ಮೂಲಕ ರೈತರ ಭೂಮಿ ಮುಟೇಶನ್ ಮಾಡಲು ಮುಂದಾಗಿದೆ. ಇದನ್ನು ಪ್ರಾಣದ ಹಂಗು ತೊರೆದು ಹೋರಾಟ ಮಾಡಿ ರೈತರ ಹಿತ ಕಾಯಲಾಗುವುದು.
ಕರಿಯಣ್ಣ ಸಂಗಟಿ, ಮಾಜಿ ಸದಸ್ಯರು ವಿಧಾನಪರಿಷತ್
ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವ ಪ್ರಶ್ನೆಯೇ ಇಲ್ಲ. ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡ ಭೂಮಿಯನ್ನು ಕಿತ್ತುಕೊಳ್ಳುವಷ್ಟುಸರ್ಕಾರಕ್ಕೆ ಬಡತನ ಬಂದಿತಾ? ಇಂಥ ರೈತ ವಿರೋಧಿಯನ್ನು ಸಹಿಸಲು ಆಗುವುದಿಲ್ಲ.
ವೈ.ಎನ್. ಗೌಡರ್ ಹೋರಾಟಗಾರ
ರೈತರಿಗೆ ಈಗಾಗಲೇ ಮಂಜೂರಿಯಾಗಿರುವ ಭೂಮಿಯನ್ನು ಏಕಾಏಕಿ ಮರಳಿ ಪಡೆಯುವ ಮೂಲಕ ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು.
ಎಚ್.ಆರ್. ಶ್ರೀನಾಥ ಮಾಜಿ ಸದಸ್ಯರು ವಿಧಾನಪರಿಷತ್