
ಮೈಸೂರು: ಸರ್ಕಾರ ಬರ ಕುರಿತಂತೆ ಶೀಘ್ರ ಘೋಷಣೆ ಮಾಡಬೇಕು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರೈತರನ್ನು ರಕ್ಷಿಸಬೇಕು, ಬರ ಪರಿಸ್ಥಿತಿ ಕಾರಣ ರೈತರ ಸಾಲ ವಸೂಲಾತಿಗೆ ತಡೆ ಹಾಕಬೇಕು, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಸೆ.5 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ತಮಿಳುನಾಡಿಗೆ ನೀರು ಬಿಡುವುದನ್ನು ಈಗಲೂ ನಿಲ್ಲಿಸಿ, ಈ ಕುರಿತ ಆದೇಶದ ಬಗ್ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ಸಂಕಷ್ಟಸೂತ್ರಕ್ಕೆ ರಾಜ್ಯ ಸರ್ಕಾರ ಕೋರಬೇಕು, ಕಾವೇರಿ ಕುರಿತಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ದೀರ್ಘಾವಧಿ ವಿವಾದ ಇರುವ ಕಾರಣ ಕೇಂದ್ರ ಸರ್ಕಾರ ಈಗಲೂ ಮಧ್ಯ ಪ್ರವೇಶಿಸಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಸಹ ಬರ ಕುರಿತ ರಾಜ್ಯ ಸರ್ಕಾರದ ಶಿಫಾರಸು ಒಪ್ಪಬೇಕು, ಈ ಬಗೆಗಿನ ಮಾನದಂಡ ಮಾರ್ಪಡಿಸಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ಜಲ ಪ್ರಾಧಿಕಾರಕ್ಕೆ ಪುನರ್ ಪರಿಶೀಲನಾ ಅರ್ಜಿ ಹಾಕುವುದಾಗಿ ಹೇಳಿದ್ದಾರೆ. ಆದರೆ ಇದು ತಡವಾಗಿದೆ. ಈ ಮೊದಲೇ ಈ ಕೆಲಸ ಮಾಡಬೇಕಾಗಿತ್ತು. ಇದರೊಡನೆ ಕೇಂದ್ರದ ತಜ್ಞರು ರಾಜ್ಯಕ್ಕೆ ಭೇಟಿ ನೀಡಿ ಪರಾಮರ್ಶಿಸಬೇಕೆಂದು ಹೇಳುತ್ತಿದ್ದಾರೆ. ಇದೇ ಕೆಲಸ ಮೊದಲೇ ಮಾಡಬಹುದಾಗಿತ್ತು ಎಂದರು.
ಈ ಮೊದಲು ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ತಿಳಿಸಿದ್ದ ಕಾರಣ ರೈತರು ಭತ್ತ ಬಿತ್ತನೆ ಮಾಡುತ್ತಿದ್ದಾರೆ. ಈಗ ಅದು ಸಾಧ್ಯವಿಲ್ಲವೆಂಬ ಮಾತು ಕೇಳಿ ಬಂದಿದೆ. ಹೀಗಾಗಿ ರೈತರಿಗೆ ಪ್ರತಿ ಎಕರೆಗೆ . 25 ಸಾವಿರ ಪರಿಹಾರ ನೀಡಬೇಕು. ಇದಲ್ಲದೆ, ಕಿರು ನೀರಾವರಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಗಮನ ನೀಡಬೇಕು. ಇದರಿಂದಾಗಿ ಕೆರೆ, ಕಟ್ಟೆ, ತೊರೆ ಉಳಿಸಿಕೊಳ್ಳುವುದರೊಡನೆ ಅಂತರ್ಜಲ ವೃದ್ಧಿಯಾಗುತ್ತದೆ. ಅಲ್ಲದೆ, ಕುಡಿಯುವ ನೀರು, ಜಾನುವಾರು ಮೊದಲಾದವುಗಳಿಗಾಗಿ ನದಿ ನೀರು ಅವಲಂಬಿಸುವುದು ಕಡಿಮೆ ಆಗಲಿದೆ ಎಂದು ಅವರು ಸಲಹೆ ನೀಡಿದರು.
ಕಾವೇರಿ ವಿವಾದ ಇನ್ನಷ್ಟುಉಲ್ಬಣಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಪ್ರಕೃತಿಗೆ ಸಂಬಂಧಿಸಿದಂತೆ ಯಾವುದೇ ನಿಖರ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ. ನಗರ, ಪಟ್ಟಣಗಳಲ್ಲಿನ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಇಂತಿಷ್ಟೇ ನೀರು ಸದಾ ಕಾಲ ಅಗತ್ಯವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ನೀರಿನಿ ಬಗ್ಗೆ ನೀತಿಯೊಂದನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.
ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮೊದಲೇ ರೈತ ಸಂಘ ಎಚ್ಚರಿಸಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಲಿಲ್ಲ. ಚುನಾವಣೆ ಮುಗಿದ ಬಳಿಕ ಯಾವುದೇ ಪಕ್ಷವಾದರೂ ಈ ಬಗ್ಗೆ ಇಚ್ಛಾಸಕ್ತಿ ಪ್ರದರ್ಶಿಸದಿರುವುದೇ ಇದಕ್ಕೆ ಕಾರಣವಾಗಿದೆ. ಆ ವೇಳೆಯೇ ಸರ್ಕಾರ ಈ ಬಾರಿ ನೀರಿನ ಕೊರತೆಯುಂಟಾಗಲಿದೆ. ಹೀಗಾಗಿ ಕಡಿಮೆ ನೀರು ಅಗತ್ಯವಾದ ಬೆಳೆ ಬೆಳೆಯಿರೆಂದು ತಿಳಿಸಬಹುದಾಗಿತ್ತು. ಆದರೆ ಆ ರೀತಿ ಮಾಡದಿದ್ದರಿಂದಾಗಿ ರೈತರು ಹೆಚ್ಚು ನೀರು ಅಗತ್ಯವಾಗಿರುವ ಬೆಳೆ ಬೆಳೆದು, ಈಗ ನೀರು ಕೊರತೆಯಿಂದ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ರೀತಿ ರೈತರಿಗೆ ಅಪಾರ ನಷ್ಟವಾಗುವ ಕಾರಣ ಸರ್ಕಾರ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ಪ್ರಸನ್ನ ಎನ್. ಗೌಡ, ಮಂಡಕಳ್ಳಿ ಮಹೇಶ್, ಪಿ. ಮರಂಕಯ್ಯ ಇದ್ದರು.