ಕಲ್ಪತರು ನಾಡಿಗೆ ಈ ವರ್ಷ ಮಳೆ ಇಲ್ಲದ ಕಾರಣ ಹಾಗೂ ಮಳೆಗಾಲದಲ್ಲೂ ಒಂದು ರೀತಿಯಲ್ಲಿ ಬೇಸಿಗೆ ದಿನಗಳು ಆರಂಭವಾಗಿದ್ದು ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಪಶುಸಂಗೋಪನೆಯೇ ಹೆಚ್ಚಾಗಿರುವ ತಾಲೂಕಿನಾದ್ಯಂತ ಹೊಲಬದುಗಳಲ್ಲಿ, ಕೆರೆ ಅಂಗಳಗಳಲ್ಲಿ, ಗೋಮಾಳಗಳಲ್ಲಿ ಮತ್ತು ಗುಡ್ಡಬೆಟ್ಟಗಳ ಪರಿಸರದಲ್ಲಿ ಮೇವು ಚಿಗುರದೆ ಜಾನುವಾರುಗಳ ಮೇವಿಗೆ ತೀವ್ರ ಬರ ಬಂದಿದ್ದು, ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಬಿ. ರಂಗಸ್ವಾಮಿ
ತಿಪಟೂರು : ಕಲ್ಪತರು ನಾಡಿಗೆ ಈ ವರ್ಷ ಮಳೆ ಇಲ್ಲದ ಕಾರಣ ಹಾಗೂ ಮಳೆಗಾಲದಲ್ಲೂ ಒಂದು ರೀತಿಯಲ್ಲಿ ಬೇಸಿಗೆ ದಿನಗಳು ಆರಂಭವಾಗಿದ್ದು ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಪಶುಸಂಗೋಪನೆಯೇ ಹೆಚ್ಚಾಗಿರುವ ತಾಲೂಕಿನಾದ್ಯಂತ ಹೊಲಬದುಗಳಲ್ಲಿ, ಕೆರೆ ಅಂಗಳಗಳಲ್ಲಿ, ಗೋಮಾಳಗಳಲ್ಲಿ ಮತ್ತು ಗುಡ್ಡಬೆಟ್ಟಗಳ ಪರಿಸರದಲ್ಲಿ ಮೇವು ಚಿಗುರದೆ ಜಾನುವಾರುಗಳ ಮೇವಿಗೆ ತೀವ್ರ ಬರ ಬಂದಿದ್ದು, ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಶೇ.80ಕ್ಕೂ ಹೆಚ್ಚು ಕುಟುಂಬಗಳು ಪಶುಸಂಗೋಪನೆಯನ್ನೇ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ರಾಗಿ, ಜೋಳಗಳ ಹುಲ್ಲಿನ ಮೇವು ಹಸು, ಎಮ್ಮೆಗಳ ಪ್ರಮುಖ ಆಹಾರ. ಆದರೆ ಈ ವರ್ಷ ಮಳೆರಾಯ ಸಂಪೂರ್ಣ ಕೈಕೊಟ್ಟಿರುವುದರಿಂದ ರಾಗಿ ಬಿತ್ತನೆ ಶೇ.50 ದಾಟಿಲ್ಲ. ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ರಾಗಿಪೈರು ತುಂಬಾ ಎಳೆಯದ್ದಾಗಿದ್ದು ಮಳೆ ಇಲ್ಲದೆ ಬಿಸಿಲಿನ ತಾಪಕ್ಕೆ ಬಾಡಿ ಒಣಗಲಾರಂಭಿಸಿದೆ. ಕಳೆದ ವರ್ಷ ಮಳೆ ಹೆಚ್ಚಾದ ಕಾರಣ ರಾಗಿ ಪೈರು ಭೂಮಿಗೆ ಬಿದ್ದು ಹೋಗಿ ರಾಗಿ ಹುಲ್ಲಿನ ಇಳುವರಿ ತುಂಬಾ ಕಡಿಮೆಯಾಗಿದ್ದರಿಂದ ರೈತರ ಬಳಿ ಇದ್ದ ಅಲ್ಪಸ್ವಲ್ಪ ದಾಸ್ತಾನು ಮುಗಿದು ಹೋಗುತ್ತಿದೆ. ಹಣ ಕೊಟ್ಟು ಖರೀದಿ ಮಾಡಿ ತರಲು ಪ್ರಯತ್ನಿಸುತ್ತಿರುವ ರೈತರ ಸಂಖ್ಯೆ ಬಹಳ ಹೆಚ್ಚಿದ್ದು ರಾಜ್ಯದ ಯಾವ ಭಾಗದಲ್ಲೂ ರಾಗಿಮೇವು ಸಿಗುತ್ತಿಲ್ಲ. ರಾಗಿ ಹುಲ್ಲು ನೀಡಿದರೆ ರಾಸುಗಳ ಆರೋಗ್ಯ ಸದೃಢವಾಗಿರುವುದಲ್ಲದೆ ಹೆಚ್ಚು ಹಾಲು ಹಿಂಡುವುದರಿಂದ ಎಲ್ಲೆಲ್ಲೂ ರಾಗಿಹುಲ್ಲಿನ ದಾಸ್ತಾನಿಗೂ ಬರ ಬಂದಿರುವುದು ಪಶುಸಂಗೋಪನೆಗೆ ಬಹುದೊಡ್ಡ ಹೊಡೆತ ನೀಡುವುದು ಖಚಿತವಾಗುತ್ತಿದೆ.
ಆತಂಕದಲ್ಲಿ ರೈತ ಮಹಿಳೆಯರು:
ಪಶುಸಂಗೋಪನೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ರೈತಕುಟುಂಬಗಳು ಒಂದು ರೀತಿಯಲ್ಲಿ ಆಘಾತಕ್ಕೊಳಗಾಗಿರುವುದು ಕಂಡು ಬರುತ್ತಿದೆ. ಪಶುಸಂಗೋಪನೆ ನಿಂತು ಹೋದರೆ ಜೀವನ ಸಾಗಿಸುವುದು ಹೇಗಪ್ಪ ಎಂಬುದು ಹಸು ಸಾಕಾಣಿಕೆಯಲ್ಲಿ ಹೆಚ್ಚು ಅವಲಂಬಿತರಾಗಿರುವ ರೈತ ಮಹಿಳೆಯರ ಆತಂಕವಾಗಿದೆ. ಮುಂಗಾರು ಬೆಳೆಗಳು ಬಿತ್ತನೆ ನಂತರ ಮಳೆ ಬಾರದಿರುವ ಪರಿಣಾಮ ರಾಗಿ ಮತ್ತಿತರೆ ಬೆಳೆಗಳು ಪೈರಿನಲ್ಲಿಯೇ ಒಣಗುವ ಭೀತಿ ಎದುರಾಗಿದೆ. ಕಳೆದ ತಿಂಗಳಿನಿಂದಲೂ ಬಿಸಿಲಿನ ತಾಪ ವಿಪರೀತ ಹೆಚ್ಚಾಗಿದ್ದು ನೀರು ಮತ್ತು ಮೇವಿಗಿ ಪರಿಪಾಟಲು ಬೀಳುವಂತಾಗಿದೆ. ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ನಂತರದ ರೈತರ ಆದಾಯವೆಂದರೆ ಪಶುಸಂಗೋಪನೆ. ಆದರೆ ಪಶುಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯವಾಗಿದೆ. ಮಳೆರಾಯನ ಮುನಿಸಿನಿಂದ ಕಳೆದ ಬಾರಿಯಂತೆ ಈ ವರ್ಷವೂ ದನಕರುಗಳಿಗೂ ಮೇವಿಲ್ಲದಂತಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿರುವುದರಿಂದ ರೈತರು ಗಾಬರಿ ಬೀಳುವಂತಾಗಿದೆ. ಈಗಾಗಲೆ ದನಕರುಗಳು, ಕುರಿ ಮೇಕೆಗಳನ್ನು ಮೇಯಿಸಲು ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಬಾರದೆ ಭೀಕರ ಬರಗಾಲ ಎದುರಾಗಿದ್ದು ದನಕರುಗಳನ್ನು ಕೇಳಿದಷ್ಟುಬೆಲೆಗೆ ಕಡುಕರಿಗೆ ಮಾರುವಂತಹ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಆದರೆ ಶಾಸಕರಾದಿಯಾಗಿ ತಾಲೂಕು, ಜಿಲ್ಲಾಡಳಿತಗಳು ಮಾತ್ರ ನಿರ್ಲಕ್ಷ್ಯದಿಂದಿರುವುದು ಸರಿಯಲ್ಲ ಎಂದು ರೈತರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.
ಒಟ್ಟಾರೆ ಮಳೆರಾಯನ ಮುನಿಸಿನಿಂದ ಪಶುಸಂಗೋಪನೆಗೆ ನೀರು ಮತ್ತು ಮೇವಿಗಾಗಿ ರೈತರು ಪರದಾಡುವಂತಾಗಿದ್ದು, ಸರ್ಕಾರ ಕೂಡಲೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆದು ರೈತರಿಗೆ ನೆರವಾಗಬೇಕಿದೆ.
ಕಳೆದ ವರ್ಷ ಮಳೆಯಾಗಿದ್ದರಿಂದ ಜಾನುವಾರುಗಳ ನೀರು ಮತ್ತು ಮೇವಿಗೆ ಸಮಸ್ಯೆಯಾಗಿರಲಿಲ್ಲ. ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದು ಬಿತ್ತಿದ ರಾಗಿ ಭೂಮಿಯೊಳಗೆ ಒಣಗುತ್ತಿದೆ. ಜಾನುವಾರುಗಳ ಪ್ರಮುಖ ಆಹಾರ ರಾಗಿ ಹುಲ್ಲು ಇಲ್ಲದಿದ್ದರೆ ಜಾನುವಾರುಗಳ ಮೇವಿಗೆ ತೀವ್ರ ಬರ ಉಂಟಾಗಲಿದೆ. ಕೆರೆ ಅಂಗಳ, ರಸ್ತೆ ಬದಿಗಳಲ್ಲಿ ಮೇವಿಲ್ಲ. 10 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು 4-5 ಲೀಟರ್‌ಗೆ ಬಂದಿವೆ. ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದ್ದು ಸರ್ಕಾರ ಗೋಶಾಲೆ ತೆರೆದು ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. -
ರಾಧಾ ರಮೇಶ್ ರೈತ ಮಹಿಳೆ, ಮಾರುಗೊಂಡನಹಳ್ಳಿ, ತಿಪಟೂರು ತಾಲೂಕು