ಜಿಬಿಎ ರಚನೆ ಬಳಿಕ ಆಸ್ತಿ ತೆರಿಗೆ ವಸೂಲಿ ಕುಸಿತ

Kannadaprabha News   | Kannada Prabha
Published : Dec 05, 2025, 06:13 AM IST
Greater bengaluru

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆ ರಚನೆ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರಣದಿಂದ ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕುಸಿತ ಉಂಟಾಗಿದ್ದು, ಜಿಬಿಎ ಆಡಳಿತ ಮೊದಲ 3 ತಿಂಗಳಲ್ಲಿ ಕೇವಲ ₹325.75 ಕೋಟಿ ಆಸ್ತಿ ತೆರಿಗೆ ವಸೂಲಿಯಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆ ರಚನೆ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರಣದಿಂದ ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದಲ್ಲಿ ಕುಸಿತ ಉಂಟಾಗಿದ್ದು, ಜಿಬಿಎ ಆಡಳಿತ ಮೊದಲ 3 ತಿಂಗಳಲ್ಲಿ ಕೇವಲ ₹325.75 ಕೋಟಿ ಆಸ್ತಿ ತೆರಿಗೆ ವಸೂಲಿಯಾಗಿದೆ.

2025-26ನೇ ಸಾಲಿನಲ್ಲಿ ಒಟ್ಟು ₹6,700 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಈ ನಡುವೆ ಸೆ.2ಕ್ಕೆ ಜಿಬಿಎ ಹಾಗೂ 5 ಹೊಸ ನಗರ ಪಾಲಿಕೆ ರಚನೆಯಾಗಿ ಇದೀಗ 3 ತಿಂಗಳು ಪೂರ್ಣಗೊಂಡಿದ್ದು, ಆಸ್ತಿ ತೆರಿಗೆ ಸಂಗ್ರಹ ಮಾತ್ರ ಸಂಪೂರ್ಣವಾಗಿ ಕುಸಿತವಾಗಿದೆ. ಜಿಬಿಎ ರಚನೆಯಾದ ಸೆಪ್ಟಂಬರ್‌ ಮೊದಲ ವಾರ ಒಟ್ಟು ₹3,259 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ನವೆಂಬರ್‌ ಕೊನೆಯ ವಾರಕ್ಕೆ ಕೇವಲ ₹3,585 ಕೋಟಿ ಸಂಗ್ರಹವಾಗಿದೆ. ಜಿಬಿಎ ಆಡಳಿತದ 3 ತಿಂಗಳಿನಲ್ಲಿ ಕೇವಲ ₹325.75 ಕೋಟಿ ಮಾತ್ರ ಸಂಗ್ರಹವಾಗಿದೆ.

ಕಳೆದ ವರ್ಷಕ್ಕಿಂತ ಶೇ.16 ರಷ್ಟು ಕುಸಿತ:

ಜಿಬಿಎ ಮತ್ತು ಬಿಬಿಎಂಪಿಯ ಆಡಳಿತಾವಧಿಗೆ ಹೋಲಿಸಿದರೆ ತೆರಿಗೆ ವಸೂಲಿಯಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಉಂಟಾಗಿದೆ. ಬಿಬಿಎಂಪಿಯ ಆಡಳಿತಾವಧಿಯ 2024ರ ನವೆಂಬರ್‌ ಅಂತ್ಯಕ್ಕೆ 4,298 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಆಗಿತ್ತು. ಆದರೆ, ಪ್ರಸಕ್ತ 2025ರ ನವೆಂಬರ್‌ ಅಂತ್ಯಕ್ಕೆ ₹3,585 ಕೋಟಿ ವಸೂಲಿ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬರೋಬ್ಬರಿ 601 ಕೋಟಿ ರು. (ಶೇ.16 ರಷ್ಟು) ತೆರಿಗೆ ವಸೂಲಿಯಲ್ಲಿ ಇಳಿಕೆಯಾಗಿದೆ.

ಕುಸಿತಕ್ಕೆ ಜಾತಿಗಣತಿ, ಜಿಬಿಎ ರಚನೆ ಕಾರಣ:

ಆಸ್ತಿ ತೆರಿಗೆ ವಸೂಲಿ ಕುಸಿತಕ್ಕೆ ಜಿಬಿಎ ಮತ್ತು ಐದು ನಗರ ಪಾಲಿಕೆ ರಚನೆ ಹಾಗೂ ರಾಜ್ಯ ಸರ್ಕಾರದಿಂದ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಖ್ಯ ಕಾರಣವಾಗಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಾರೆ. ಐದು ಪಾಲಿಕೆ ರಚನೆಯಾದ ಸೆಪ್ಟಂಬರ್‌ನಲ್ಲಿ ಅಧಿಕಾರಿ, ಸಿಬ್ಬಂದಿಯ ಐದು ಪಾಲಿಕೆ ನಿಯೋಜನೆ ಸೇರಿದಂತೆ ಆಡಳಿತ ವ್ಯವಸ್ಥೆ ಸರಿಪಡಿಸುವುದರಲ್ಲಿ ಪೂರ್ಣಗೊಂಡಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಅಧಿಕಾರಿ ಸಿಬ್ಬಂದಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ಹೀಗಾಗಿ, ಎರಡು ತಿಂಗಳು ಆಸ್ತಿ ತೆರಿಗೆ ಸಂಗ್ರಹಣೆ ಸಾಧ್ಯವಾಗಲಿಲ್ಲ. ನವೆಂಬರ್‌ ಅವಧಿಯಲ್ಲಿ ಇ-ಖಾತಾ ಅರ್ಜಿ ವಿಲೇವಾರಿ ಸೇರಿದಂತೆ ಮೊದಲಾದ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲಾಯಿತು. ಈ ಎಲ್ಲ ಕಾರಣಕ್ಕೆ ಆಸ್ತಿ ತೆರಿಗೆ ವಸೂಲಿ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ರು)

ನಗರ ಪಾಲಿಕೆಬಿಬಿಎಂಪಿ ಅವಧಿ ಅಂತ್ಯಕ್ಕೆ ಒಟ್ಟು (ಸೆ.6)ಜಿಬಿಎ ಅವಧಿಯಲ್ಲಿ (ನ.29)ಸೆ.6 ರಿಂದ ನ.29 ಅವಧಿ ಸಂಗ್ರಹ ಮೊತ್ತ

ಬೆಂ.ಕೇಂದ್ರ614.82675.8961.03

ಬೆಂ.ಪೂರ್ವ871.90941.0969.19

ಬೆಂ.ಉತ್ತರ529.57601.4171.84

ಬೆಂ.ದಕ್ಷಿಣ604.63673.2168.58

ಬೆಂ.ಪಶ್ಚಿಮ638.64693.7355.09

ಒಟ್ಟು3,259.573,585.32325.75

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಗಳ ಅಧಿಕಾರಿ ಸಿಬ್ಬಂದಿಯು ಬೇರೆ ಬೇರೆ ಕಾರ್ಯದಲ್ಲಿ ತೊಡಗಿಕೊಂಡಿರುವುದರಿಂದ ಆಸ್ತಿ ತೆರಿಗೆ ವಸೂಲಿಗೆ ಗಮನ ನೀಡುವುದಕ್ಕೆ ಸಾಧ್ಯವಾಗಿಲ್ಲ. ಆಸ್ತಿ ತೆರಿಗೆ ಸಂಗ್ರಹಕ್ಕೆ ವಿಶೇಷ ಆಂದೋಲನ ನಡೆಸುವ ಮೂಲಕ ವಸೂಲಿಗೆ ಕ್ರಮವಹಿಸಲಾಗುವುದು.

- ಮಹೇಶ್ವರ್‌ ರಾವ್‌, ಮುಖ್ಯ ಆಯುಕ್ತರು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ

PREV
Read more Articles on
click me!

Recommended Stories

ವಧು-ವರ ಇಲ್ಲದೆ ಹುಬ್ಬಳ್ಳೀಲಿ ಆರತಕ್ಷತೆ!
ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!