ಬಂಡೀಪುರ ಸಫಾರಿ ಬಂದ್ ಪರಿಣಾಮ, ನಂಬಿದವರ ಬದುಕು ಸ್ಥಬ್ದ! ನೂರಾರು ಕುಟುಂಬಗಳ ಅಳಲು, ತೆರೆಯದಂತೆ ರೈತರ ವಿರೋಧ

Published : Dec 04, 2025, 08:46 PM IST
Bandipur safari

ಸಾರಾಂಶ

ಬಂಡೀಪುರ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಸ್ಥಳೀಯ ವ್ಯಾಪಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಪ್ರವಾಸೋದ್ಯಮವನ್ನೇ ನಂಬಿದ್ದ 300ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಫಾರಿ ಪುನರಾರಂಭಕ್ಕೆ ಒತ್ತಾಯಿಸುತ್ತಿವೆ.

ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಬಂಡೀಪುರ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಸ್ಥಳೀಯ ಸಣ್ಣ ವ್ಯಾಪಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅಲ್ಲದೇ ಸ್ಥಳೀಯ ಕಾಡಂಚಿನ ಜನರು ಕೂಡ ಪ್ರವಾಸೋದ್ಯಮ ನಂಬಿ ಜೀವನ ಕಟ್ಟಿಕೊಂಡಿದ್ದರು. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ದಿನ ನಿತ್ಯದ ಖರ್ಚಿಗೂ ಹಣವಿಲ್ಲದಾಗಿದೆ. ಸಫಾರಿ ಆರಂಭಿಸದಿದ್ರೆ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ವ್ಯಾಪಾರಿಗಳ ಸಂಕಷ್ಟ

ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಹಬ್ಬ-ಹರಿದಿನ ಸೇರಿದಂತೆ ಇತರೆ ಖರ್ಚುಗಳಿಗೆ ಹಣ ಸಂಪಾದನೆಯಾಗುತ್ತಿದ್ದರಿಂದ ಜೀವನ ತಕ್ಕ ಮಟ್ಟಿಗೆ ಸರಾಗವಾಗಿ ಸಾಗುತ್ತಿತ್ತು. ಆದರೆ, ಸಫಾರಿ ತಾತ್ಕಾಲಿಕ ಬಂದ್ ಎಂಬ ಬರಸಿಡಿಲಿನ ಆದೇಶ ಬದುಕಿನ ಬಂಡಿ ಹಳಿ ತಪ್ಪುವಂತೆ ಮಾಡಿದೆ. ಟೀ-ಕಾಫಿ, ಊಟ, ತಿಂಡಿ, ಎಳೆನೀರು, ಹಣ್ಣಿನ ವ್ಯಾಪಾರಿಗಳು, ತಂಪು ಪಾನೀಯ, ಕುರುಕಲು ತಿಂಡಿ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳ ನೋವಿನ ಮಾತುಗಳಿವು. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯನ್ನು ಸುಮಾರು ಒಂದು ತಿಂಗಳಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಣ್ಣ ಪುಟ್ಟ ವ್ಯಾಪಾರಿಗಳು, ಹೋಂ ಸ್ಟೇ, ರೇಸಾರ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದವರ ಈಗ ನಿರುದ್ಯೋಗಿಗಳು. ಹಾಗಾಗಿ ಅವರ ಕುಟುಂಬಗಳೂ ಸಂಕಷ್ಟಕ್ಕೀಡಾಗಿ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಅಲ್ಲದೇ ಬಂಡೀಪುರಕ್ಕೆ ಬರುವ ಪ್ರವಾಸಿಗರಿಗೆ ಸಫಾರಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಆದ್ರೆ ಬಂದ್ ಪರಿಣಾಮ ಬಂಡೀಪುರವೇ ಸ್ತಬ್ದವಾಗಿರುವುದು ಒಂದೆಡೆಯಾದರೆ, ಸಣ್ಣ ಪ್ರಮಾಣದ ವ್ಯಾಪಾರ ನೆಚ್ಚಿಕೊಂಡಿದ್ದವರು ಮತ್ತು ದುಡಿಯುವ ವರ್ಗಕ್ಕೆ ಮುಂದೇನು ಎಂಬ ಆತಂಕ ಕಾಡಲಾರಂಭಿಸಿದೆ.

ಕಾಡಂಚಿನ ಸಾಕಷ್ಟು ಜನರು ಸಂಕಷ್ಟದಲ್ಲಿ

ಇನ್ನೂ ಬಂಡೀಪುರದ ಪ್ರವಾಸೋದ್ಯಮ ನಂಬಿ ಕಾಡಂಚಿನ ಸಾಕಷ್ಟು ಜನರು ಸ್ಥಳೀಯವಾಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಇದನ್ನೇ ನಂಬಿ 300 ಕ್ಕೂ ಹೆಚ್ಚು ಕುಟುಂಬ ಜೀವನ ನಡೆಸುತ್ತಿದ್ದರು. ಇದೀಗಾ ಸಫಾರಿ ಬಂದ್ ಪರಿಣಾಮ ಪ್ರವಾಸಿಗರು ಬಂಡೀಪುರದತ್ತ ಸುಳಿಯುತ್ತಿಲ್ಲ. ಅಲ್ಲದೇ ಅರಣ್ಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ಮಾಡ್ತಿದ್ದವರ ಪಾಡು ಕೂಡ ಹೇಳತೀರದಾಗಿದೆ. ಸಫಾರಿ ಆರಂಭಿಸದಿದ್ರೆ ಹೋರಾಟ ಮಾಡುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಒಟ್ನಲ್ಲಿ ಸಫಾರಿ ಆರಂಭಿಸಿ ಅಂತಾ ಅರಣ್ಯವಾಸಿ ಹಾಗೂ ಸ್ಥಳೀಯರು ಒತ್ತಾಯ ಮಾಡ್ತಿದ್ರೆ ಇತ್ತ ರೈತರು ಯಾವುದಕ್ಕೂ ಸಫಾರಿ ಆರಂಭ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಸಫಾರಿ ಆರಂಭಿಸ್ತಾರಾ ಅಥವಾ ಇಲ್ವಾ ಅನ್ನೋದ್ನ ಕಾದು ನೋಡಬೇಕಾಗಿದೆ..

PREV
Read more Articles on
click me!

Recommended Stories

ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!
ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!