ರಾಜ್ಯದಲ್ಲಿ ಚುನಾವಣೆ ರಂಗೇರಿದೆ ಮೇ 10 ರಂದು ಚುನಾವಣೆ ನಡೆಯಲಿದ್ದು, ತುಮಕೂರಿನಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.
ತುಮಕೂರು : ರಾಜ್ಯದಲ್ಲಿ ಚುನಾವಣೆ ರಂಗೇರಿದೆ ಮೇ 10 ರಂದು ಚುನಾವಣೆ ನಡೆಯಲಿದ್ದು, ತುಮಕೂರಿನಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.
24 ಕೋಟಿ ಒಡೆಯ ಜಯಚಂದ್ರ
ಶಿರಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಟಿ.ಬಿ. ಅವರು ಒಟ್ಟು 24.7 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ತಮ್ಮ ಆಸ್ತಿ ಘೋಷಣೆಯಲ್ಲಿ ತಮ್ಮ ಬಳಿ 1 ಲಕ್ಷ 51 ಸಾವಿರ ರುಪಾಯಿ 385 ರು. ಹಾಗೂ ತಮ್ಮ ಬಳಿ 100 ಗ್ರಾಂ ಚಿನ್ನಾಭರಣವಿದೆ. ಹಾಗೆಯೇ ತಮ್ಮ ಪತ್ನಿ ಬಳಿ 74 ಸಾವಿರದ 284 ರುಪಾಯಿ ಹಣ ಹೊಂದಿದ್ದಾರೆ. ಇವರ ಪತ್ನಿ ಅವರ ಬಳಿ 610 ಗ್ರಾಂ ಚಿನ್ನ 2 ಕೆಜಿ ಬೆಳ್ಳಿ ಹೊಂದಿದ್ದಾರೆ. ಒಟ್ಟಾರೆಯಾಗಿ ಜಯಚಂದ್ರ ಅವರು 1 ಕೋಟಿ 30 ಲಕ್ಷ 455 ರು. ಮೌಲ್ಯದ ಚರಾಸ್ತಿ ಹಾಗೂ 24.7 ಕೋಟಿ ರು. ಮೌಲ್ಯದ ಸ್ಥಿರಾಸ್ತಿ, ಪತ್ನಿ ಹತ್ತಿರ 8.62 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹಾಗೂ 99 ಲಕ್ಷ 60 ಸಾವಿರ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಜೆ.ಸಿ.ಮಾಧುಸ್ವಾಮಿ 27 ಕೋಟಿ ರು. ಒಡೆಯ
ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು ಆಸ್ತಿ ಘೋಷಣೆ ವೇಳೆ ತಮ್ಮ ಬಳಿ ನಾಲ್ಕು ಮನೆ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ಕುಟುಂಬದ ಚರ- ಸ್ಥಿರಾಸ್ತಿ 4.13 ಕೋಟಿ ಇತ್ತು . ಈ ಬಾರಿ 27.5 ಕೋಟಿ ರು. ಹೆಚ್ಚಳವಾಗಿದೆ. ಟಿಎಂಸಿಸಿ ಬ್ಯಾಂಕಿನಲ್ಲಿ 7.27 ಕೋಟಿ ರು ಹಾಗೂ ಅವರ ಪತ್ನಿ 10.50 ಕೋಟಿ ರು. ಸಾಲ ಹೊಂದಿದ್ದಾರೆ.
ವಿವಿಧ ಬ್ಯಾಂಕುಗಳಲ್ಲಿರುವ ಠೇವಣಿ, ಉಳಿತಾಯ, ಮ್ಯೂಚುಯಲ್ ಫಂಡ್, ಡಿಬೆಂಚರ್‌ಗಳಲ್ಲಿ ಜೆಡಿಎಂ ಹಾಗೂ ಅವರ ಪತ್ನಿ ತ್ರಿವೇಣಿ ಹಣ ಹೂಡಿಕೆ ಮಾಡಿದ್ದಾರೆ. ಮಾಧುಸ್ವಾಮಿ ಹೆಸರಿನಲ್ಲಿ 83.25 ಎಕರೆ ಹಾಗೂ ಪತ್ನಿ ಹೆಸರಿನಲ್ಲಿ 47.20 ಎಕರೆ ಕೃಷಿ ಭೂಮಿ ಇದೆ. ಮಾಧುಸ್ವಾಮಿ ಬಳಿ ಜೆಸಿ ಪುರದಲ್ಲಿ ಪಿತ್ರಾರ್ಜಿತ ಮನೆ, ನಿವೇಶನ, ಮೈಸೂರು- ಬೆಂಗಳೂರಿನ ಸಂಜಯನಗರದಲ್ಲಿ ಅಪಾರ್ಚ್‌ಮೆಂಟ್, ಪತ್ನಿ ತ್ರಿವೇಣಿ ಅವರ ಬಳಿ ತುಮಕೂರಿನಲ್ಲಿ 4000 ಚದರ ವಿಸ್ತೀರ್ಣದ ಮನೆ, ಬೆಂಗಳೂರಿನಲ್ಲಿ ಫ್ಲಾಟ್, ಬೆಂಗಳೂರಿನ ರಾಜ್ ಮಹಲ್ ವಿಲಾಸ್ ಬಡಾವಣೆಯಲ್ಲಿ 4.81 ಕೋಟಿ 91 ಲಕ್ಷ ಮೌಲ್ಯದ ಮನೆ ಮತ್ತು ನಿವೇಶನ ಹೊಂದಿದ್ದಾರೆ. ಮಾಧುಸ್ವಾಮಿ ಹೆಸರಲ್ಲಿ 2ಲಕ್ಷ ಮೌಲ್ಯದ ಟ್ರ್ಯಾಕ್ಟರ್, ಟಯೋಟ ಫಾರ್ಚುನರ್ ಕಾರು ಇದೆ. ಇವರ ಬಳಿ 50 ಸಾವಿರ ಹಾಗೂ ಪತ್ನಿಯಲ್ಲಿ 30 ಸಾವಿರ ನಗದು ಹೊಂದಿರುವುದಾಗಿ ಘೋಷಿಸಿದ್ದಾರೆ. ಪೀಣ್ಯ ಇಂಡಸ್ಟ್ರೀಯಲ್ ಏರಿಯಾ ಬಳಿ 4 ಕೋಟಿ ಮೌಲ್ಯದ ಸ್ಥಿರಾಸ್ಥಿ ಸೇರಿ ಪತ್ನಿ ಹೆಸರಿನಲ್ಲಿ 15,14,03,731 ರು ಸ್ಥಿರಾಸ್ತಿ ಖರೀದಿಸಿದ್ದಾರೆ.
ಬಿ.ಸಿ.ನಾಗೇಶ್ ಆಸ್ತಿ 4 ಕೋಟಿ
ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಪಟೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಬಳಿ 4 ಕೋಟಿ 35 ಲಕ್ಷದ ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಪತ್ನಿ ವೀಣಾ ಅವರ ಹೆಸರಿನಲ್ಲಿ 90 ಲಕ್ಷ 92 ಸಾವಿರದ 828 ರು. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು 5 ಕೋಟಿ 65 ಲಕ್ಷ 750 ರು. ಮೌಲ್ಯದ ಸ್ಥಿರಾಸ್ತಿ ಇದ್ದು, ತಮ್ಮ ಮಗ ವಿಶ್ವದೀಪ್ ಹೆಸರಿನಲ್ಲಿ 52.21 ಲಕ್ಷ ಚರಾಸ್ತಿ, 24 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ನಾಗೇಶ್ ಅವರು ತಮ್ಮ ಆಸ್ತಿ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ.
ಜ್ಯೋತಿಗಣೇಶ್ 33 ಕೋಟಿ ಸ್ಥಿರಾಸ್ತಿ
ತುಮಕೂರು ಶಾಸಕ ಜ್ಯೋತಿ ಗಣೇಶ್ ಅವರು ತಮ್ಮ ಬಳಿ 33 ಕೋಟಿ ರುಪಾಯಿ ಸ್ಥಿರಾಸ್ತಿ ಇದ್ದು 7 ಕೋಟಿ 25 ಲಕ್ಷ 84 ಸಾವಿರದ 713 ರು. ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 86 ಲಕ್ಷ ಮೌಲ್ಯದ ಚರಾಸ್ತಿ, ಪತ್ನಿ ಸುಮನ ಅವರ ಹೆಸರಿನಲ್ಲಿ 69 ಲಕ್ಷ 50 ಸಾವಿರ ಚರಾಸ್ತಿ ಇರುವುದಾಗಿ ಹೇಳಿಕೊಂಡಿದ್ದಾರೆ. ಚರಾಸ್ಥಿ ಪೈಕಿ 20 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ಇರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಜ್ಯೋತಿ ಗಣೇಶ್ ಹೆಸರಿನಲ್ಲಿ 2 ಸಾವಿರ ಇಸವಿಯ ಹೀರೋ ಹೋಂಡ ಬೈಕ್ ಇರುವುದಾಗಿ ಹೇಳಿಕೊಂಡಿದ್ದಾರೆ.
ಗೋವಿಂದರಾಜು ಸ್ಥಿರಾಸ್ಥಿಯಷ್ಟೆ ಎಷ್ಟೋ ಸಾಲ ಅಷ್ಟೆ
ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಗೋವಿಂದರಾಜು ಅವರು 26 ಕೋಟಿ ರು. ಸ್ಥಿರಾಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಸಾಲ ಇರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಬಳಿ 19.15 ಕೋಟಿ ರು. ಮೌಲ್ಯದ ಚರಾಸ್ತಿ, ಪತ್ನಿ ಹೇಮಲತಾ ಅವರ ಹೆಸರಿನಲ್ಲಿ 3.10 ಕೋಟಿ ಮೌಲ್ಯದ ಚರಸ್ಥಿ ಹೊಂದಿರುವುದಾಗಿ ತಿಳಿಸಿದ್ದಾರೆ. ಗೋವಿಂದರಾಜು ಅವರು 26.68 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದು ಪತ್ನಿ ಹೆಸರಿನಲ್ಲಿ 1.76 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ ಎಂದಿದ್ದಾರೆ. ತಾವು ವಿವಿಧ ಬ್ಯಾಂಕ್‌ನಿಂದ 26.68 ಕೋಟಿ ಸಾಲ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ಪತ್ನಿ ಹೆಸರಿನಲ್ಲಿ 1.76 ಕೋಟಿ ಸಾಲ ಇದೆ ಎಂದಿದ್ದಾರೆ.