ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ತುಮಕೂರು : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 40 ವರ್ಷಗಳಿಂದ ಪಕ್ಷವನ್ನು ಕಟ್ಟಿ, ಬೆಳೆಸಿದ ನಿಷ್ಠಾವಂತ ಕಾರ್ಯಕರ್ತನಾದ ನನಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದು ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವುದಾಗಿ ತಿಳಿಸಿದರು.
ಎರಡು ಜೋಳಿಗೆ ಹಿಡಿದು 1ಕ್ಕೆ ಓಟು, 1ಕ್ಕೆ ನೋಟು ಎಂಬ ಧ್ಯೇಯದೊಂದಿಗೆ ನಗರದಾದ್ಯಂತ ಮತ ಭಿಕ್ಷೆ ಬೇಡುವ ಮೂಲಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಹೋರಾಟ ಮಾಡಲು ಜೈಲಿಗೆ ಹೋಗಲು ಸಿದ್ದ ಎಂದ ಅವರು, ಶಾಂತಿ ಮತ್ತು ಸೌಹಾರ್ದತೆಯಿಂದ ಜನ ಜೀವನ ನಡೆಸಲು ನನಗೆ ಮತ ಹಾಕಬೇಕೆಂದು ಮನವಿ ಮಾಡಿಕೊಂಡರು.
ಶಾಸಕನಾಗಿ, ಸಚಿವನಾಗಿ 40 ವರ್ಷದ ರಾಜಕೀಯ ಜೀವನದಲ್ಲಿ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ಕರಪತ್ರಗಳನ್ನು ಮುದ್ರಿಸಿ, ಮನೆ, ಮನೆಗೆ ಅದನ್ನು ಹಂಚಿ ಮತ ಕೇಳುತ್ತೇನೆ. ಈ ಹೋರಾಟ ಬಿಜೆಪಿ ಪಕ್ಷದ ವಿರುದ್ಧವಲ್ಲ. ನನಗೆ ಟಿಕೆಟ್ ಕೈತಪ್ಪಲು ಕಾರಣವಾದವರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಎಂದು ಸ್ಪಷ್ಟಪಡಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಸ್.ಮಲ್ಲಿಕಾರ್ಜುನಯ್ಯ, ಕಾ.ಬೋರಪ್ಪ, ವೈ.ಸಿ. ನಂಜುಂಡಯ್ಯ, ಎಚ್.ಡಿ.ದೇವೇಗೌಡ ಮುಂತಾದ ಹಿರಿಯರೊಂದಿಗೆ ಜೈಲಿನಲ್ಲಿದ್ದು ಬಂದ ನಾನು ಬಿ.ಎಸ್.ಯಡಿಯೂರಪ್ಪನವರ ಮಾತಿಗೆ ಕಟ್ಟುಬಿದ್ದು ನನ್ನನ್ನು ಜೈಲಿಗೆ ಹಾಕಿಸಿದ ಪಕ್ಷದಿಂದ ಬಂದವರನ್ನು ಸಹಿಸಿಕೊಂಡಿದ್ದೆ. ಇನ್ನುಮುಂದೆ ಸಹಿಸುವುದಿಲ್ಲ ಎಂದರು.
ಏ.20 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ ಅವರು, ಎಲ್ಲ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ಅವರೂ ಸಹ ನನ್ನನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಗುಂಡು, ತುಂಡು, ದೇವಸ್ಥಾನದಲ್ಲಿ ಆಣೆ, ಪ್ರಮಾಣ ಮಾಡಿ ಮುಗ್ಗ ಮತದಾರರನ್ನು ವಂಚಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಮತದಾರರು ಮತ ನೀಡಬೇಕು. ನಾನು ಮತದಾರರಿಂದ ಅವರ ಮತವನ್ನು ಭಿಕ್ಷೆಯಾಗಿ ಬೇಡುತ್ತೇನೆ. ಯಾವುದೆ ಮತವನ್ನು ಖರೀದಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸ್ವಾಭಿಮಾನಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನಗೆ ಎಲ್ಲರ ಆಶೀರ್ವಾದ, ಸಹಾಯ, ಸಹಕಾರ ಅಗತ್ಯವೆಂದು ಮನವಿ ಮಾಡಿಕೊಂಡ ಅವರು, ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀಗಳು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಮಠವನ್ನು ಬೆಳೆಸಿದ ರೀತಿ ನನಗೆ ಮಾದರಿಯಾಗಿದ್ದು, ಅವರ ಹಾದಿಯಲ್ಲಿ ನಾನು ಸಾಗುತ್ತಿದ್ದು, ಮತಭಿಕ್ಷೆಗಾಗಿ ಜೋಳಿಗೆ ಹಿಡಿದ್ದಿದ್ದೇನೆ ಎಂದರು.
ಮುಖಂಡರಾದ ಜಯಸಿಂಹರಾವ್, ಧನಿಯಾಕುಮಾರ್, ಜ್ಯೋತಿಪ್ರಕಾಶ್, ಚೌಡೇಶ್, ಧರಣೇಶ್, ನರಸಿಂಹಯ್ಯ, ಅನಂತ್, ಟಿ.ಜಿ.ಮಂಜುನಾಥ್, ಚಿಕ್ಕರಾಮಣ್ಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಬಿಜೆಪಿಗೆ ಬಂಡಾಯದ ಬಿಸಿ
ತುಮಕೂರು (ಏ.12): ತುಮಕೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ಪಕ್ಷಕ್ಕೆ ರಾಜಿನಾಮೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುದ್ದಹನುಮೇಗೌಡ ಅವರು ಬಂಡಾಯ ಸ್ಪರ್ಧೆಗೆ ಚಿಂತನೆ ನಡೆಸಿದ್ದಾರೆ. ಹೀಗಾಗಿ, ತುಮಕೂರಲ್ಲಿ ಬಂಡಾಯದ ಬಿಸಿಗೆ ಕಮಲ ಅರಳುವೇ ಅಥವಾ ಮುದುಡುವುದೇ ಕಾದುನೋಡಬೇಕಿದೆ.
ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಿದ್ದತೆ ಮಾಡಿಕೊಂಡಿದ್ದಾರೆ. ತುಮಕೂರಿನ ಎಂ.ಜಿ ರಸ್ತೆಯಲ್ಲಿರುವ ಮಾಕಂ ಕಲ್ಯಾಣ ಮಂಟಪದಲ್ಲಿ ನೂರಾರು ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ವೇಳೆ ತಮಗೆ ತುಮಕೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಬಿಜೆಪಿಯನ್ನು ತೊರೆಯಲು ಮುಂದಾಗಿದ್ದಾರೆ.
ಸುಳ್ಯ ಶಾಸಕ ಎಸ್. ಅಂಗಾರ ರಾಜಕೀಯ ನಿವೃತ್ತಿ: ಬಿಜೆಪಿ ಅಭ್ಯರ್ಥಿಗೂ ಬೆಂಬಲಿಸಲ್ಲ
ರಾಜಿನಾಮೆ ಪತ್ರ ಹಿಡಿದುಕೊಂಡೇ ಸಭೆ: ಇನ್ನು ಸೊಗಡು ಶಿವಣ್ಣ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವ ನಿಟ್ಟಿನಲ್ಲಿ ರಾಜಿನಾಮೆ ಪತ್ರವನ್ನು ಸಿದ್ಧಪಡಿಸಿಕೊಂಡೇ ಸಭೆ ಮಾಡುತ್ತಿದ್ದಾರೆ. ಇನ್ನು ಇವರ ನೂರಾರು ಬೆಂಬಲಿಗರೂ ಕೂಡ ರಾಜೀನಾಮೆ ಪತ್ರ ಬರೆದಿಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ ಸಾಮೂಹಿಕ ರಾಜಿನಾಮೆ ಕೊಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಮಟ್ಟದಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಇದನ್ನು ತಣಿಸುವ ನಿಟ್ಟಿನಲ್ಲಿ ಹಿರಿಯ ನಾಯಕರು ಹಾಗೂ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಗಣೇಶ್ ಯಾವ ರೀತಿ ಸರ್ಕಸ್ ಮಾಡುತ್ತಾರೆ ಎಂಬುದನ್ನು ಕಾದು ನೊಡಬೇಕಿದೆ.
ತೋಟದ ಮನೆಯಲ್ಲಿ ಮುದ್ದಹನುಮೇಗೌಡ ಸಭೆ: ಮತ್ತೊಂದೆಡೆ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡ ಅವರೂ ಕೂಡ ಟಿಕೆಟ್ ಸಿಗದೇ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಎಂ.ಪಿ ಮುದ್ದಹನುಮೇಗೌಡ ಕೂಡ ತಮ್ಮ ಬೆಂಬಲಿಗರೊಂದಿಗೆ ತೋಟದ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ. ಇನ್ನು ಪಕ್ಷದಿಂದ ಟಿಕೆಟ್ ಕೈತಪ್ಪಿದ್ದು, ಕೃಷ್ಣಕುಮಾರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಮುಂದೆ ಯಾವ ನಡೆಯನ್ನು ಕೈಗೊಳ್ಳಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ.