ಕಲ್ಯಾಣ ಮಾಡಿನ ಪ್ರಗತಿಗೆ ಡಬ್ಬಲ್ ಎಂಜಿನ್ ಗ್ರಹಣ| ಕಲಬುರಗಿ ರೇಲ್ವೆ ವಿಭಾಗ, ಜವಳಿ ಪಾರ್ಕ್, ಏಮ್ಸ್ ಸ್ಥಾಪನೆ ಕುರಿತಂತೆ ಕೇಂದ್ರದ ನಿಷ್ಕಾಳಜಿಗೆ ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಬೇಸರ| ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಗ್ರಹಣ|
ಕಲಬುರಗಿ(ಮಾ.19): ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡದೆ ಇರುವುದು ತೀವ್ರ ಬೇಸರ ತರಿಸಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಈ ಹಿಂದೆ ಪ್ರಸ್ತಾಪಿಸಲಾದಂತೆ ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಅಡಿಗಲ್ಲು ನೆರವೇರಿಸಿ ಅನುದಾನ ಕೂಡಾ ಬಿಡುಗಡೆಯಾಗಿತ್ತು, ಸದರಿ ಜವಳಿ ಪಾರ್ಕ್ ಕೇಂದ್ರ ಸರ್ಕಾರ ವಾಪಸ್ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದಿಯೇ? ಎಂದು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಬಯಸಿದರೂ ಅಲ್ಲಿ ಕೇಳಿಬಂದ ಉತ್ತರದಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ವಿಷಾದಿಸಿದ್ದಾರೆ.
ನನ್ನ ಪ್ರಶ್ನೆಗೆ ಉತ್ತರಿಸಿದ ಮಾನ್ಯ ಕೈಮಗ್ಗ ಹಾಗೂ ಜವಳಿ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ್ ಅವರು ಜವಳಿ ಪಾರ್ಕ್ ಉಳಿಸಿಕೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರು ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯಕ್ಕೆ ಈ ಯೋಜನೆಯನ್ನು ಮುಂದುವರೆಸುವಂತೆ ಕೋರಿ ದಿನಾಂಕ 10.02.2020 ರಂದು ಪತ್ರ ಬರೆದಿದ್ದರು. ಕೇಂದ್ರ ಈ ಯೋಜನೆಗೆ ಒಪ್ಪಿಗೆ ನೀಡಿರುವುದಿಲ್ಲ ಹಾಗೂ ಜವಳಿ ಪಾರ್ಕ್ ನ ಮೂಲಭೂತ ಸೌಲಭ್ಯ ಅಭಿವೃದ್ಧಿಗಾಗಿ ಈಗಾಗಲೇ ಕೇಂದ್ರದಿಂದ ಬಿಡುಗಡೆ ಮಾಡಿರುವ ರೂ 1.85 ಕೋಟಿಗಳನ್ನು ಹಿಂದಿರುಗಿಸಲು ಕೋರಿದ್ದಾರೆಂದು ಉತ್ತರಿಸಿದ್ದಾರೆ.
ಮತ್ತೆ ವೈರಸ್ ಮೂಲಕ ದೇಶದ ಗಮನ ಸೆಳೆದ ಕಲಬುರಗಿ..!
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಮಂಜೂರಾಗಿದ್ದ ಎಲ್ಲಾ ಯೋಜನೆಗಳನ್ನು ಒಂದೊದಾಗಿ ಕೈಬಿಡಲಾಗುತ್ತಿದೆ.
ನಿಮ್ಜ್, ಏಮ್ಸ್, ಐಐಐಟಿ, ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗ, ಈಗ ಜವಳಿ ಪಾರ್ಕ್ ಯೋಜನೆಯನ್ನೂ ಜಿಲ್ಲೆಯಿಂದ ಕೈಬಿಡಲಾಗಿದೆ. ಈ ಯೋಜನೆಯಿಂದ ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ, ಈಗ ಈ ಯೋಜನೆಯನ್ನು ಕಿತ್ತುಕೊಂಡು, ಬಿಜೆಪಿ ಸರ್ಕಾರವು ಜಿಲ್ಲೆಗೆ ದ್ರೋಹ ಬಗೆದಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಈಗಾಗಲೇ ಕೊರೋನಾ ನೆಪವೊಡ್ಡಿ 371(ಜೆ) ಅಡಿಯಲ್ಲಿ ನೇರ ನೇಮಕಾತಿಗಳಿಗೂ ತಡೆಯೊಡ್ಡಿರುವ ರಾಜ್ಯ ಸರ್ಕಾರ, ಈಗ ಜವಳಿ ಪಾರ್ಕ್ ಯೋಜನೆಯನ್ನೂ ಕಿತ್ತುಕೊಂಡು ಇಲ್ಲಿನ ನಿರುದ್ಯೋಗಿ ಯುವಕ - ಯುವತಿಯರಿಗೆ ಮೋಸವೆಸಗಿದೆ ಎಂದಿರುವ ಪ್ರಿಯಾಂಕ್ ಖರ್ಗೆ ಇವೆಲ್ಲ ಕ್ರಮಗಳಿಂದ ಕಲ್ಯಾಣದ ಪ್ರಹಗತಿ ಬಾಡಿದೆ, ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಟೀಕಿಸಿದ್ದಾರೆ.