ಶೇಷಮೂರ್ತಿ ಅವಧಾನಿ

ಕಲಬುರಗಿ(ಮಾ.19): ಜಿಲ್ಲೆಯಲ್ಲಿ ಕೋರೋನಾ ಸೋಂಕು ದಿಢೀರ್‌ ಹೆಚ್ಚಳವಾಗುತ್ತ ಸಾಗಿದೆ. ಹೆಮ್ಮಾರಿ ಆರ್ಭಟ ತಗ್ಗಿದ್ದ ಕಲಬುರಗಿಯಲ್ಲಿ ನಿತ್ಯ ಎಂಟು- ಹತ್ತು ಪ್ರಕರಣಗಳು ಮಾತ್ರ ವರದಿಯಾಗುತ್ತಿದ್ದವು, ಕಳೆದೊಂದು ವಾರದಿಂದ ಸೋಂಕಿನ ಪ್ರಮಾಣದಲ್ಲಿ ಏಕಾಏಕಿ ಏರಿಕೆ ಕಂಡಿದೆ. ಇದರಿಂದಾಗಿ ಕೊರೋನಾ 2 ನೇ ಅಲೆಯ ಭೀತಿ ಜಿಲ್ಲೆಯನ್ನಾವರಿಸಿದೆ.

2, 3ನೇ ಸ್ತರದ ನಗರಗಳಲ್ಲಿ ಸೋಂಕು ಹೆಚ್ಚುತ್ತಿದ್ದು 2ನೇ ಅಲೆ ತಡೆಯಲು ಕಠಿಣ ಕ್ರಮ ಅನಿವಾರ್ಯವೆಂದು ವಿವಿಧ ರಾಜ್ಯಗಳ ಸಿಎಂಗಳೊಂದಿಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಕಲಬುರಗಿ ಹೆಸರನ್ನೇ ಪ್ರಸ್ತಾಪಿಸುತ್ತ ನೀಡಿರುವ ಎಚ್ಚರಿಕೆ ಕಲಬುರಗಿಯಲ್ಲಿನ ಕೊರೋನರ್ಭಟಕ್ಕೆ ಕನ್ನಡಿ ಹಿಡಿದಿದೆ. ಕಳೆದ ವರ್ಷ ಕೊರೋನಾ ಸೋಂಕಿನಿಂದ ಇಡೀ ದೇಶದಲ್ಲೇ ಮೊದಲ ಸಾವು ದಾಖಲಾಗಿ ಕಲಬುರಗಿ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ 2 ನೇ ಅಲೆ ಬಲಗೊಂಡಿರುವ ಊರುಗಳಲ್ಲಿ ಅಗ್ರಗಣ್ಯ ನಗರವಾಗಿ ಕಲಬುರಗಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಕೋವಿಡ್ ಜಾಸ್ತಿಯಾಗದಂತೆ ಎಚ್ಚರ ವಹಿಸೋಣ: ಸಚಿವ ಎಸ್.ಟಿ.ಸೋಮಶೇಖರ್

2ನೇ ಅಲೆಗೆ ಇವೆಲ್ಲ ಕಾರಣಗಳು:

ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿ ಹಂಚಿಕೊಂಡಿರುವುದೇ ಜಿಲ್ಲೆಯಲ್ಲಿ ಸೊಂಕು ಹೆಚ್ಚಲು ಮುಖ್ಯ ಕಾರಣ. ಇದಲ್ಲದೆ ಮುಂಬೈಗೆ ಹೋಗಿ ಬರುವವರ ಸಂಖ್ಯೆಯೂ ಇಲ್ಲಿ ಅಧಿಕ, ಹೀಗಾಗಿ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣಿಸಿದೆ. 2 ನೇ ಅಲೆ ಕಾಡುತ್ತಿರುವ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರು ಕೋವಿಡ್‌- 19 ನೆಗೆಟಿವ್‌ ವರದಿ (72 ಗಂಟೆ ಒಳಗಿನದ್ದು) ಕಡ್ಡಾಯ ಹೊಂದಿರತಕ್ಕದೆಂದು ಮಹಾ ಗಡಿಗೆ ಅಂಟಿರುವ ಅಫಜಲ್ಪುರ, ಆಳಂದದಲ್ಲಿ 5 ಚೆಕ್‌ಪೋಸ್ಟ್‌ ಆರಂಭಿಸಿ ನಿಗಾ ಇಡಲಾಗಿದೆ. ದತ್ತಾತ್ರೇಯ (ಆಗಾಣಗಾಪುರ), ಭಾಗ್ಯವಂತಿ (ಘತ್ತರಗಾ), ರೇಣುಕಾ ಯಲ್ಲಮ್ಮ (ಮಣ್ಣೂರು) ದೇವಾಲಯಗಳಿಗೆ ಭಕ್ತರನ್ನು ಸಂಪೂರ್ಣ ನಿಷೇಧಿಸಿ ಕಟ್ಟೆಚ್ಚರ ಘೋಷಿಸಲಾಗಿದ್ದರೂ ಅಡ್ಡ ದಾರಿಗಳಲ್ಲಿ ಜಿಲ್ಲೆ ಪ್ರವೇಶಿಸುತ್ತಿರುವ ಮಹಾರಾಷ್ಟ್ರಿಗರ ಮೇಲೆ ಸಂಪೂರ್ಣ ನಿಯಂತ್ರಣ ಹೇರಲು ಸಾಧ್ಯವಾಗಿಲ್ಲ. ಹೀಗಾಗಿ ಸೋಂಕು ನಿಧಾನಕ್ಕೆ ಹೆಚ್ಚುತ್ತಲೇ ಹೊರಟಿದೆ. ಇತ್ತ ತೆಲಂಗಾಣ ಗಡಿಯಲ್ಲಿರುವ ಚಿಂಚೋಳಿ, ಸೇಡಂ ತಾಲೂಕುಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಇಲ್ಲಿಯೂ ನೆರೆಯ ತೆಲಂಗಾಣ, ಆಂಧ್ರಪ್ರದೇಶದವರ ಸಂಚಾರಕ್ಕೆ ಮುಕ ಅವಕಾಶವಿರೋದರಿಂದ ಸೋಂಕು ಜಿಲ್ಲೆಯನ್ನೇ ವ್ಯಾಪಿಸುತ್ತಿದೆ.

ಮುಂದುವರಿದ ಸಾವಿನ ಸರಣಿ

ಕೋವಿಡ್‌ ಸಾವು ನೋವಿನ ಸರಣಿ ಕಲಬುರಗಿಯಲ್ಲಿ ಹಾಗೇ ಮುಂದುವರಿದಿದೆ. ಫೆ. 25 ಕ್ಕೆ ಜಿಲ್ಲೆಯಲ್ಲಿ ಸೋಂಕಿನಿಂದ 330 ನೇ ಸಾವು ಸಂಭವಿಸಿ ಸರಣಿ ಅಲ್ಲಿಗೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮಾ. 12 ಕ್ಕೆ ಶಹಾಬಾದ್‌ನಲ್ಲಿ, ಮಾ. 16 ಕ್ಕೆ ಕಲಬುರಗಿಯ ಶಹಾಬಜಾರ್‌ನಲ್ಲಿ ಸಾವುಗಳು ಸಂಭವಿಸಿ ಸಾವಿನ ಸರಣಿ ಮುಂದುವರಿದಿದ್ದು ಒಟ್ಟು ಸತ್ತವರ ಸಂಖ್ಯೆ 332 ಕ್ಕೆ ಹೆಚ್ಚಿದೆ. ರಾಜ್ಯದಲ್ಲೇ ಹೆಚ್ಚಿನ ಸಾವು ಕಂಡುಬಂದ ಕಲಬುರಗಿಯಲ್ಲೇ ಮೊದಲ ದೂರ ಸಂಪರ್ಕದ ವೈದ್ಯಕೀಯ ನೆರವಿನ ಪದ್ಧತಿ ಜಾರಿಗೆ ತಂದದ್ದನ್ನು ಇಲ್ಲಿ ಸ್ಮರಿಸಬಹುದು.

ಕೊರೋನಾ ಲಸಿಕೆ ಪಡೆದ ತಾಯಿ ಮಗುವಿನಲ್ಲಿ ಆ್ಯಂಟಿಬಾಡಿ ಪತ್ತೆ

ಕಳೆದೊಂದು ವಾರದಿಂದ ಸೋಂಕಿತರು

1) ಮಾ. 12- 38 ಪಾಸಿಟಿವ್‌ (1 ಸಾವು)
2) ಮಾ. 13- 35 ಪಾಸಿಟಿವ್‌
3) ಮಾ. 14- 43 ಪಾಸಿಟಿವ್‌
4) ಮಾ. 15- 43 ಪಾಸಿಟಿವ್‌
5) ಮಾ. 16- 46 ಪಾಸಿಟಿವ್‌ (1 ಸಾವು)
6) ಮಾ. 17- 61 ಪಾಸಿಟಿವ್‌

ಕಲಬುರಗಿ ಕೊರೋನಾ ಬುಲೆಟಿನ್‌

ಒಟ್ಟು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು- 22,531
ಸಂಭವಿಸಿದ ಒಟ್ಟು ಸಾವಿನ ಪ್ರಕರಣಗಳು- 332
ಆಸ್ಪತ್ರೆಯಲ್ಲಿರುವ ಒಟ್ಟು ಸೋಂಕಿತರು- 88
ಮನೆಯಲ್ಲಿ ಕ್ವಾರಂಟೈನ್‌ ಆಗಿರುವವರು- 247
ಸಕ್ರೀಯ ಸೋಂಕಿನ ಪ್ರಕರಣಗಳು- 355
ಕೋವಿಡ್‌ ವರದಿ ನಿರೀಕ್ಷೆಯಲ್ಲಿರುವವರು- 2, 882

ಟಫ್‌ ರೂಲ್ಸ್‌ ಜಾರಿಗೆ ಮುಂದಾದ ಜಿಲ್ಲಾಡಳಿತ

1) 5 ಕ್ಕಿಂತ ಹೆಚ್ಚು ಸೋಂಕಿತರು ಕಂಡು ಬಂದಲ್ಲಿ ಅಂತಹ ಬಡಾವಣೆ/ ಪ್ರದೇಶವನ್ನು ಮೈಕ್ರೋ ಕಂಟೈನ್ಮೇಂಟ್‌ ಝೋನ್‌ ಎಂದು ಘೋಷಣೆ
2) ತಾರಫೈಲ್‌, ವಿಜಯ ನಗರ, ಎಂಬಿ ನಗರ, ಗಾಜಿಪುರ, ಮೆಕ್ಕಾ ಕಾಲೋನಿ, ಹನುಮಾನ್‌ ನಗರ, ಸೂಪರ್‌ ಮಾರ್ಕೆಟ್‌ ಪ್ರದೇಶ, ಶಹಾಬಜಾರ್‌ಗಳಲ್ಲಿ ತೀವ್ರ ನಿಗಾ
3) ಎಲ್ಲಾ ಮೈಕ್ರೋ ಕಂಟೈನ್ಮಂಟ್‌ ಝೋನ್‌ಗಳಲ್ಲಿರುವವರಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆ
4) ಸಾಮಾಜಿಕ ಅಂತರ ಕಾಪಾಡದ ವಾಣಿಜ್ಯ ಅಂಗಡಿಗಳನ್ನು ಬಂದ್‌ ಮಾಡುವುದಾಗಿ ಪಾಲಿಕೆ ಘೋಷಣೆ
5) ಕಡ್ಡಾಯ ಮಾಸ್ಕ್‌ ಧಾರಣೆಗೆ ಸೂಚನೆ, ಮಾಸ್ಕ್‌ ರಹಿತರಿಗೆ ಭಾರಿ ಮೊತ್ತದ ದಂಡ
6) ಮಾಸ್ಕ್‌ ಇಲ್ಲದಿದ್ದರೆ ಮಳಿಗೆ- ಮಾಲ್‌ ಪ್ರವೇಶ ನಿರ್ಬಂಧ- ಅಂಗಡಿ ಮಾಲೀಕರಿಗೆ ಪಾಲಿಕೆ ಖಡಕ್‌ ಸೂಚನೆ
7) ನಿತ್ಯ 2 ಸಾವಿರಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲು ನಿರ್ಧಾರ