
ಬೆಂಗಳೂರು (ಏ.20): ‘ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರವಾಗಿದ್ದರೂ ಜಾರಿ ಮಾಡದೆ ಕತ್ತೆ ಕಾಯತ್ತಿದ್ದರೇ ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇದೇ ವೇಳೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾತ್ರಿ 8.30ಕ್ಕೆ ಬಂದಾಗಲೆಲ್ಲ ಅಪಶಕುನ ತರುತ್ತಾರೆ. ಧೈರ್ಯವಿದ್ದರೆ ನರೇಂದ್ರ ಮೋದಿ ಅವರು ಒಂದು ಪ್ರೆಸ್ ಮೀಟ್ ಮಾಡಲಿ’ ಎಂದೂ ಅವರು ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್ ಕಾಂಗ್ರೆಸ್ ಎಂದು ಹೇಳಿದ್ದಾರೆ. ಮಹಿಳೆಯರ ಪರವಾಗಿ ಏನೂ ಹೇಳಿಲ್ಲ. ಮದುವೆ ಆಗಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದವರು, ಹೆಂಡತಿ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದವರು ಇಂದು ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು
ಕತ್ತೆ ಕಾಯುತ್ತಿದ್ದರೇ?: ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮೂರು ವಿಧೇಯಕಗಳನ್ನು ಮಂಡಿಸಿದೆ. ಅದರಲ್ಲಿ ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಪಾಸಾಗಿದೆ. ಆಗ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಿದೆ ಎಂದು ಮಹಿಳಾ ಸಂಸದರ ಜತೆ ನರೇಂದ್ರ ಮೋದಿ ಅವರೂ ಸಂಭ್ರಮಿಸಿದ್ದರು. ಅದರ ಅಧಿಸೂಚನೆಯೂ ಹೊರಬಿದ್ದಿದೆ. ಈಗ ಅದಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಜೋಡಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಪ್ರಿಯಾಂಕ್ ದೂರಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಸಮಿತಿ ರಚನೆ ಮಾಡಿ ಬೇಕಾದ ಹಾಗೆ ಮರುವಿಂಗಡಣೆ ಮಾಡುತ್ತಾರೆ. ಇಲ್ಲಿಯತನಕ ಅವರು ಕತ್ತೆ ಕಾಯುತ್ತಿದ್ದರೇ? ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಈಗಾಗಲೇ ಕಾಯ್ದೆ ಜಾರಿಯಲ್ಲಿದ್ದು, 543 ಕ್ಷೇತ್ರಗಳಲ್ಲೇ ಮಹಿಳಾ ಮೀಸಲಾತಿ ಜಾರಿ ಮಾಡಲಿ ಎಂದು ಒತ್ತಾಯಿಸಿದರು. ಮಹಿಳೆಯರ ಪರ ಇದ್ದರೆ ಸಚಿವ ಸಂಪುಟದಲ್ಲಿ 17 ಮಂದಿ ಮಹಿಳೆಯರಿಗೆ ಅವಕಾಶ ನೀಡಲಿ. ಲೋಕಸಭೆ ಟಿಕೆಟ್ ನೀಡುವಾಗ ಯಾಕೆ ಮಹಿಳೆಯರು ನೆನಪಾಗಿಲ್ಲ? ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರು ಇದ್ದಾರೆಯೇ ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರೆಲ್ಲ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಿದೆ. ಕಾಂಗ್ರೆಸ್ ಪಕ್ಷವು ಬುದ್ಧ, ಬಸವ, ಅಂಬೇಡ್ಕರ್ ತತ್ವ ಇಟ್ಟುಕೊಂಡಿದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಂಡವರ ಮೇಲೆ ಕ್ರಮ ಆಗುತ್ತದೆ. ವೈಯಕ್ತಿಕವಾಗಿ ಯಾರ ಮೇಲೂ ಕ್ರಮ ಆಗಿಲ್ಲ ಎಂದು ಹೇಳಿದರು.