ಆಕಾಶವನ್ನೇ ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ: ಸಚಿವ ಚಲುವರಾಯಸ್ವಾಮಿ ಬೇಸರ

Published : Apr 20, 2026, 09:26 PM IST
Chaluvarayaswamy

ಸಾರಾಂಶ

ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಾಗಮಂಗಲ (ಏ.20): ಜನರ ನಿರೀಕ್ಷೆಗೂ ಮೀರಿ ತಾಲೂಕಿನಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೂ ಸಹ ತೃಪ್ತಿ ಇಲ್ಲವೆಂದರೆ ಆಕಾಶವನ್ನು ಭೂಮಿಗಿಳಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹೆರಗನಹಳ್ಳಿಯಲ್ಲಿ ನಿರ್ಮಿಸಿರುವ ಕಲ್ಯಾಣಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಚುನಾವಣೆಯಲ್ಲಿ ನನ್ನ ವಿರುದ್ಧ ಗೆದ್ದವರು ಐದು ವರ್ಷ ಕಾಲ ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದರೂ ಜನ ಕೇಳುವುದಿಲ್ಲ. ನಾನು ಗೆದ್ದಾಗ ಮಾತ್ರ ಅಭಿವೃದ್ಧಿ ಕೆಲಸ ಮಾಡಿ ಎಂದು ಒತ್ತಡ ಹೇರುತ್ತೀರಿ. ಕ್ಷೇತ್ರದ ಜನರು ಚುನಾವಣೆಯಲ್ಲಿ ಎರಡು ಬಾರಿ ನನ್ನನ್ನು ಸೋಲಿಸದಿದ್ದರೆ ತಾಲೂಕು ಇನ್ನೂ ನಾಲ್ಕುಪಟ್ಟು ಅಭಿವೃದ್ಧಿಯಾಗುತ್ತಿತ್ತು ಎಂದರು.

ಗ್ರಾಮದ ಡಾ.ಎಚ್.ಎಲ್.ನಾಗೇಗೌಡರು ಮತ್ತು ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಅವರು ಸಾಹಿತ್ಯ ಹಾಗೂ ರಾಜಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿ ಗೌರವ ಕಾಪಾಡಿಕೊಂಡಿದ್ದಾರೆ. ಅವಕಾಶವಿದ್ದಾಗ ಶಾಶ್ವತವಾಗಿ ಉಳಿಯುವಂತಹ ಅಭಿವೃದ್ಧಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ನಾನೂ ಕೂಡ ಜನರ ನಿರೀಕ್ಷೆಗೂ ಮೀರಿ ಹಗಲಿರುಳು ಶ್ರಮಿಸುತ್ತಿದ್ದೇನೆ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.

ವಿಶೇಷ ಮಂಜೂರಾತಿ

ಈ ಹಿಂದೆ ಹೆರಗನಹಳ್ಳಿ ಸಮೀಪವಿರುವ ಎನ್‌ಬಿಸಿ ಕಾಲುವೆಯ ಎಡಭಾಗದ ಅಚ್ಚುಕಟ್ಟಿಗೆ ಮಾತ್ರ ಹೇಮಾವತಿ ನೀರು ಹರಿಸಲು ಕಾನೂನಿನಲ್ಲಿ ಅವಕಾಶವಿತ್ತು. ಈ ಹಿಂದೆ ನಾನು ಸಚಿವನಾಗಿದ್ದ ಅವಧಿಯಲ್ಲಿ ಬಲಭಾಗದ ಅಚ್ಚುಕಟ್ಟಿಗೂ ಅವಕಾಶ ಕಲ್ಪಿಸುವ ಸಲುವಾಗಿ ವಿಶೇಷ ಮಂಜೂರಾತಿ ಕೊಡಿಸಲಾಯಿತು. ನಂತರ ಈ ಭಾಗದ ಕೆರೆಗಳಿಗೂ ನೀರು ತುಂಬಿಸಲು 990 ಲಕ್ಷ ರು. ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಹೆರಗನಹಳ್ಳಿ ಸೇರಿದಂತೆ ಈಭಾಗದ ಬಹುತೇಕ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಲಿದೆ ಎಂದರು.

ಕೆ.ಆರ್.ಪೇಟೆ ಮೂಲಕ ತಾಲೂಕಿಗೆ ಹರಿದು ಬರುವ ಹೇಮಾವತಿ ಜಲಾಶಯದ ನೀರಿನಿಂದಾಗಿ ಹೊಣಕೆರೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ 340 ಕೋಟಿ ರು. ವೆಚ್ಚದ ಯೋಜನೆ ಕೈಗೆತ್ತಿಕೊಂಡು ಕೆಲ ತಿಂಗಳ ಹಿಂದೆ ತಾಲೂಕಿನ ಗಡಿಭಾಗ ಗಿಡುವಿನಹೊಸಹಳ್ಳಿ ಸಮೀಪ ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ತಾಲೂಕಿನ ಜನರು ಬರಗಾಲದ ನಡುವೆ ಜೀವನ ನಡೆಸಿದರೂ ಕೂಡ ಅತ್ಯಂತ ಸೌಮ್ಯಸ್ವಭಾವದವರು, ಬುದ್ಧವಂತರು ಎನ್ನುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕೆ ಬದಲಾವಣೆಯಾಗಿದ್ದಾರೆಂಬುದು ನನಗೆ ಗೊತ್ತಿಲ್ಲ. ಇನ್ನು ಮುಂದಾದರೂ ಪಕ್ಷ, ರಾಷ್ಟ್ರ ರಾಜಕಾರಣ ಹಾಗೂ ತಾಲೂಕಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುವವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

PREV
Read more Articles on
click me!

Recommended Stories

ಬೆಂಗಳೂರು ಗಿಗ್ ಮಹಿಳಾ ಕಾರ್ಮಿಕರ ಸಂಕಷ್ಟ, ಮನೆಕೆಲಸ, ಬ್ಯೂಟಿಷನ್ ಗಾಗಿ ತೆರಳುವ ಮನೆಗಳಲ್ಲಿ 1 ತೊಟ್ಟು ನೀರೂ ಇಲ್ಲ, ಶೌಚವೂ ಇಲ್ಲ!
ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ 14 ಸಾವಿರ ದಾಟಿದ ವಿದ್ಯಾರ್ಥಿಗಳ ಸಂಖ್ಯೆ! ಈ ಬಾರಿ ಹೊಸ ದಾಖಲೆ