ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ಸುಗಳ ಸಿಬ್ಬಂದಿಗಳ ನಡುವೆ ಹೊಡೆದಾಟ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ
ವರದಿ- ಶಶಿಧರ ಮಾಸ್ತಿಬೈಲು, ಉಡುಪಿ
ಉಡುಪಿ (ಏ. 06): ಉಡುಪಿ (Udupi) ಜಿಲ್ಲೆಯಲ್ಲಿ ಏನಿದ್ದರೂ ಖಾಸಗಿ ಬಸ್ಸುಗಳದ್ದೇ (Private Bus) ಭರಾಟೆ! ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಓಡಾಟ ಕೇವಲ ನಾಮಕಾವಾಸ್ತೆ ಎನ್ನುವಂತಿದೆ. ಇಷ್ಟಕ್ಕೂ ಖಾಸಗಿ ಬಸ್ಸುಗಳು ಪ್ರಯಾಣಿಕರಿಗೆ ನೆಮ್ಮದಿಯ ಸೇವೆ ನೀಡುತ್ತಿದೆಯಾ? ಉಡುಪಿಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಈ ಘಟನೆ ನೋಡಿದರೆ ಅದು ಕೂಡ ಡೌಟು. ಬಸ್ ಟೈಮಿಂಗ್ ವಿಚಾರದಲ್ಲಿ ಖಾಸಗಿ ಬಸ್ಸುಗಳ ಸಿಬ್ಬಂದಿಗಳ ನಡುವೆ ಹೊಡೆದಾಟ, ಬಡಿದಾಟ,ಮಾತಿನ ಚಕಮಕಿ ನಡೆಯುವುದು ಮಾಮೂಲು. ಈಗ ಮತ್ತೊಮ್ಮೆ ಅಂತಹದೇ ಮಾತಿನಚಕಮಕಿ ಹೊಡೆದಾಟದಲ್ಲಿ ಅಂತ್ಯವಾಗಿದೆ. ಎರಡು ಬಸ್ಸುಗಳ ಸಿಬ್ಬಂದಿಗಳು ಟೈಮಿಂಗ್ ವಿಚಾರದಲ್ಲಿ ಕಚ್ಚಾಡಿಕೊಂಡು ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ.
undefined
ಪ್ರಯಾಣಿಕರ ಎದುರೇ ಇಬ್ಬರು ಹೊಡೆದಾಡಿ ಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಹೊಡೆದಾಡಟದ ದೃಶ್ಯ ಪ್ರಯಾಣಿಕರ ಮೊಬೈಲ್ನಲ್ಲಿ ಸರಿಯಾಗಿದೆ. ಕೂಡಿದಷ್ಟು ಹೊಡೆದುಕೊಳ್ಳಲಿ ಯಾರು ತಡೆಯುವುದು ಬೇಡ ಎಂದು ನಿರ್ಧರಿಸಿದ್ದ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿಗಳು, ಗಲಾಟೆ ಮಾಡುವವರನ್ನು ಅವರ ಪಾಡಿಗೆ ಬಿಟ್ಟು ಬಿಟ್ಟಿದ್ದಾರೆ.
ಇದನ್ನೂ ಓದಿ: ಜಮೀನಿಗಾಗಿ ಮಾರಾಮಾರಿ, ಅಣ್ತಮ್ಮಂದಿರ ನಡುವೆ ಹುಳಿ ಹಿಂಡಿದ್ರಾ ರಾಜಕೀಯ ಮುಖಂಡರು, ಪೊಲೀಸ್ರು?
ಇಷ್ಟಕ್ಕೂ ಇಂತಹಾ ಗಲಾಟೆಗಳಿಗೆ ಕಾರಣ ಏನು ಗೊತ್ತಾ?: ಉಡುಪಿ ಜಿಲ್ಲೆಯ ಮೂಲೆ ಮೂಲೆಯ ಗ್ರಾಮಗಳಿಗೂ ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತವೆ. ಅದರಲ್ಲೂ ಉಡುಪಿ -ಮಂಗಳೂರು, ಉಡುಪಿ-ಮಣಿಪಾಲ ಇಂತಹ ರೂಟ್ ಗಳಿಗೆ ಪ್ರತಿದಿನ ನೂರಾರು ಬಸ್ಸುಗಳು ಓಡಾಟ ನಡೆಸುತ್ತವೆ. ಈ ವೇಳೆ ಖಾಸಗಿ ಬಸ್ಸುಗಳೇ ಪರಸ್ಪರ ತಮ್ಮ ನಡುವೆ ಪೈಪೋಟಿ ನಡೆಸುತ್ತವೆ.
ಕೆಲವೊಮ್ಮೆ ನಿಮಿಷ ಲೆಕ್ಕದಲ್ಲಿ ಇನ್ನೂ ಕೆಲವೊಮ್ಮೆ ಸೆಕುಂಡುಗಳ ಅಂತರದಲ್ಲಿ ಇವು ಸಂಚಾರ ನಡೆಸುವ ಪರಿಸ್ಥಿತಿ ಇದೆ. ಕೇವಲ ಮೂವತ್ತು ಸೆಕೆಂಡುಗಳ ಅಂತರದಲ್ಲೂ ಬಸ್ಸುಗಳು ಓಡಾಟ ನಡೆಸುವುದಿದೆ. ಇಂತಹ ಸಂದರ್ಭಗಳಲ್ಲಿ ಟೈಮಿಂಗ್ ವಿಷಯದಲ್ಲಿ ದಿನನಿತ್ಯ ಗಲಾಟೆ ಆಗುವುದುಂಟು. ಪರಸ್ಪರ ದೊಣ್ಣೆ, ತಲವಾರುಗಳನ್ನು ತೋರಿಸಿ ಬೆದರಿಸುವುದೂ ಉಂಟು.
ಬಸ್ಸು ಸಿಬ್ಬಂದಿಗಳ ಈ ಪೈಪೋಟಿಗೆ ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಟೈಮಿಂಗ್ ಒತ್ತಡವನ್ನು ಪ್ರಯಾಣಿಕರ ಮೇಲೆ ಹೇರಿ, ಗದ್ದಲ ಮಾಡುವ ಘಟನೆಗಳು ಸಾಮಾನ್ಯವಾಗಿದೆ.ಇನ್ನು ಬಸ್ಸುಗಳು ಪೈಪೋಟಿಗಿಳಿದರೆ ಕೇಳುವುದೇ ಬೇಡ. ರೇಸ್ ಗಳಲ್ಲಿ ಓಡುವ ವಾಹನಗಳಂತೆ ಅತಿವೇಗದಿಂದ ಸಂಚರಿಸಿ, ಪ್ರಯಾಣಿಕರು ತಮ್ಮ ಜೀವ ಕೈಯಲ್ಲಿ ಹಿಡಿಯುವ ಪರಿಸ್ಥಿತಿ ತಂದಿಡುತ್ತಾರೆ.
ಇದನ್ನೂ ಓದಿ: ನಡು ಬೀದಿಯಲ್ಲಿ ನಾರಿಯರ ಬಿಗ್ ಫೈಟ್, ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತೋ ಸುಸ್ತು
ಸರಕಾರಿ ಬಸ್‌ಗಳೂ ಲಭ್ಯ: ಖಾಸಗಿ ಬಸ್‌ಗಳ ಪೈಪೋಟಿಯಿಂದ ರೋಸಿಹೋಗಿ ಕೆಲ ರೂಟ್ ಗಳಿಗೆ ಸರಕಾರಿ ಬಸ್ಸುಗಳನ್ನು ಬಿಡಲಾಗಿದೆ. ಆದರೆ ಸರಕಾರಿ ಬಸ್ಸುಗಳ ಜೊತೆಗೂ ಬೀದಿ ಜಗಳಕ್ಕಿಳಿದ ಖಾಸಗಿ ಬಸ್ ಸಿಬ್ಬಂದಿಗಳು, ಅನೇಕ ರೂಟ್ ಗಳಲ್ಲಿ ತಮ್ಮದೇ ಪಾರಮ್ಯ ಮರೆಯುತ್ತಿದ್ದಾರೆ.
ಸದಾಕಾಲ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಖಾಸಗಿ ಬಸ್ ಸಿಬ್ಬಂದಿ ಗಳು, ತಮ್ಮ ಸಹೋದ್ಯೋಗಿಗಳ ಜೊತೆಗೇನೆ ಕಚ್ಚಾಟ ನಡೆಸುವ ಅನಿವಾರ್ಯತೆ ಎದುರಿಸುತ್ತಾರೆ.ಟೈಮಿಂಗ್ ವಿಚಾರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯವರು ಮಧ್ಯಪ್ರವೇಶಿಸಿ ಇಂತಹ ಅಹಿತಕರ ಹೊಡೆದಾಟ ತಡೆದು ಖಾಸಗಿ ಬಸ್ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಹಿತ ಕಾಯಬೇಕಿದೆ.