ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿದ್ದು ಖಾಸಗಿ ಬಸ್ ಮಾಲೀಕರು ಹಾಗೂ ಕೆಲಸಗಾರರನ್ನು ಆತಂಕಕ್ಕೆ ದೂಡಿದೆ.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜೂ.09): ಖಾಸಗಿ ಬಸ್ ಮಾಲೀಕರು ಕೊರೋನಾ ಸಂದರ್ಭದಲ್ಲಿ ಪಡಬಾರದ ಕಷ್ಟ ಪಟ್ಟು ಈಗ ತಾನೇ ಚೇತರಿಸಿಕೊಳ್ತಿದ್ದಾರೆ. ಬೆಲೆ ಏರಿಕೆ ನಡುವೆಯೂ ಕೆಲಸಗಾರರಿಗೆ ಸಂಬಳ ನೀಡುತ್ತಾ ಬರ್ತಿದ್ದಾರೆ. ಇದೀಗ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಸರ್ಕಾರ ಘೋಷಣೆ ಮಾಡಿರುವ ಬಳಿಕ ಮತ್ತೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡ್ತಿದ್ದು, ಈ ಸಹವಾಸವೇ ಬೇಡ ಅಂತ ಕೆಲವರು ತಮ್ಮ ಬಸ್ ಗಳನ್ನು ಮಾರಲು ತೀರ್ಮಾನ ಮಾಡ್ತಿದ್ದಾರೆ.
ಹೌದು, ಚಿನ್ನದನಾಡು ಕೋಲಾರ ಜಿಲ್ಲೆಯಲ್ಲಿ ಜನರು ಹೆಚ್ಚಿಗೆ ಖಾಸಗಿ ಬಸ್ ಗಳ ಮೇಲೆ ಅವಲಂಭಿಸಿದ್ದಾರೆ. ಪ್ರತಿದಿನ ಆಂಧ್ರ,ತಮಿಳುನಾಡು ಹಾಗೂ ಬೆಂಗಳೂರಿಗೆ ಕೆಲಸಕ್ಕೆ ತೆರಳಲು ಖಾಸಗಿ ಬಸ್ ಗಳನ್ನು ನಂಬಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಬಸ್ ಗಳು ಸಂಚಾರ ಮಾಡ್ತಿದ್ದು, ಹಗಲಿರುಳು ದುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ 400 ಕ್ಕೂ ಅಧಿಕ ಖಾಸಗಿ ಬಸ್‌ಗಳಿದ್ದು, ಇದೀಗ ರಾಜ್ಯ ಸರ್ಕಾರದ ಗ್ಯಾರಂಟಿ ಭರವಸೆಯಿಂದ ಮಾಲೀಕರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಕೋಲಾರದಿಂದ ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ಹಾಗೂ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ಹಾಗೂ ಹಲವು ಸ್ಥಳಗಳಿಗೆ ನಿತ್ಯ ಖಾಸಗಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ಸುಗಳ ಕೊರತೆಯನ್ನು ನೀಗಿಸಿವೆ. ಇದೀಗ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿದ್ದು ಖಾಸಗಿ ಬಸ್ ಮಾಲೀಕರು ಹಾಗೂ ಕೆಲಸಗಾರರನ್ನು ಆತಂಕಕ್ಕೆ ದೂಡಿದೆ.
ಸಿಎಂ ಸಿದ್ದರಾಮಯ್ಯಗೆ ಶುರುವಾಯ್ತು ಮಹಿಳೆಯರಿಂದ ಮತ್ತೊಂದು ತಲೆನೋವು!
ಇನ್ನು ಕೋವಿಡ್ ಸಮಯದಲ್ಲಿ ನಷ್ಟಕ್ಕೆ ಒಳಗಾಗಿ ಕೆಲವರು ತಮ್ಮ ಬಸ್‌ಗಳನ್ನು ಮಾರಾಟ ಮಾಡಿದ್ದಾರೆ.ಚಾಲಕ, ನಿರ್ವಾಹಕರು, ಕ್ಲೀನರ್‌ಗಳು ಕೆಲಸ ಕಳೆದುಕೊಂಡು ಈಗಲೂ ಚೇತರಿಕೆ ಆಗ್ತಿದ್ದಾರೆ.ಆದ್ರೂ ಸಹ ಕೆಲವರು ಡೀಸೆಲ್ ಬೆಲೆ ಏರಿಕೆ ಹಾಗೂ ತೆರಿಗೆ ಏರಿಕೆ ನಡುವೆಯೂ ಸೇವೆ ನೀಡುತ್ತಾ ಬರ್ತಿದ್ದಾರೆ.ಇದೀಗ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣ ಅಂತ ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು ದಿಕ್ಕು ತೋಚದಂತಾಗಿದೆ.ಇದರ ನಡುವೆ 3 ತಿಂಗಳಿಗೊಮ್ಮೆ 48 ಸಾವಿರ ತೆರಿಗೆ ಪಾವತಿಸಬೇಕಾಗಿದೆ. ವಾರ್ಷಿಕ ನಿರ್ವಹಣೆಗೆ ಕನಿಷ್ಠ 50 ಸಾವಿರ ಬೇಕಿದೆ.ಆರು ತಿಂಗಳಿಗೊಮ್ಮೆ ಬಸ್ ಗಳ ಎರಡು ಟೈರ್ ಬದಲಿಸಬೇಕು ಅದಕ್ಕೆ 38 ಸಾವಿರ.ಇದಲ್ಲದೇ, ಚಾಲಕ, ನಿರ್ವಾಹಕ, ಕ್ಲೀನರ್ ಸಂಬಳ ನೀಡುವ ಅನಿವಾರ್ಯತೆ ಮುಂದಿದೆ.ಇನ್ನು ಮತ್ತೊಂದೆಡೆ ಉಚಿತ ಪ್ರಯಾಣದ ನಿರ್ಧಾರವನ್ನು ಬಹುತೇಕ ಮಹಿಳೆಯರು ಸ್ವಾಗತ ಮಾಡಿದ್ದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಖಾಸಗಿ ಬಸ್ ಮಾಲೀಕರ ಕಥೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ರಾಜ್ಯ ಸರ್ಕಾರದ ನಿರ್ಧಾರ ನಮ್ಮನ್ನು ಬಾವಿಗೆ ತಳ್ಳಿದೆ,ದಿಕ್ಕೇ ತೋಚುತ್ತಿಲ್ಲ ಅಂತ ನೋವು ತೋಡಿಕೊಳ್ತಿದ್ದಾರೆ. ಕೊನೆ ಪಕ್ಷ ಖಾಸಗಿ ಬಸ್ ಗಳ ಮೇಲೆ ಹಾಕುವ ತೆರಿಗೆ ಹಾಗೂ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿ ನಮ್ಮನ್ನು ಉಳಿಸಿ ಎಂದು ಕೆಲ ಖಾಸಗಿ ಬಸ್ ಗಳ ಮಾಲೀಕರು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡ್ತಿದ್ದಾರೆ.ಖಾಸಗಿ ಬಸ್ ಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಏನೂ ನಿರ್ಧಾರ ಕೈಗೊಳ್ಳಲಾಗಿದೆ ಅನ್ನೋದನ್ನು ಕಾದು ನೋಡಬೇಕಿದೆ.