ಪ್ರಸಕ್ತ ಆರ್ಥಿಕ ವರ್ಷದ ಎರಡೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ನರೇಗಾ ಕೆಲಸಗಳನ್ನು ಮಾಡಿರುವ ತಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.
ರವಿ ಕಾಂಬಳೆ
ಹುಕ್ಕೇರಿ(ಜೂ.09): ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 2023-24ನೇ ಸಾಲಿನ ಕಳೆದ ಎರಡು ತಿಂಗಳಲ್ಲಿ ಹುಕ್ಕೇರಿ ತಾಲೂಕು ಪಂಚಾಯಿತಿ 4.33 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ನಿಗದಿತ ಗುರಿ ಮೀರಿ ಪ್ರಗತಿ ಸಾಧಿಸಿದೆ. ಜೊತೆಗೆ ಮಾನವ ದಿನಗಳ ಸೃಜನೆಯಲ್ಲಿ ಬೆಳಗಾವಿ ಜಿಲ್ಲೆ 14 ತಾಲೂಕುಗಳ ಪೈಕಿ ಹುಕ್ಕೇರಿ ಮೊದಲ ಸ್ಥಾನದಲ್ಲಿದೆ.
ಪ್ರಸಕ್ತ ಆರ್ಥಿಕ ವರ್ಷದ ಎರಡೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡುವ ಮೂಲಕ ರಾಜ್ಯದಲ್ಲೇ ಉತ್ತಮ ನರೇಗಾ ಕೆಲಸಗಳನ್ನು ಮಾಡಿರುವ ತಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.
ಜನರ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿ: ಸಚಿವ ಸತೀಶ ಜಾರಕಿಹೊಳಿ
ತಾಲೂಕಿನಲ್ಲಿ ಒಟ್ಟು 52 ಗ್ರಾಮ ಪಂಚಾಯತಿಗಳಿದ್ದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಈ ಉದ್ಯೋಗ ಖಾತರಿ ಸಾಕಷ್ಟುನೆರವಾಗಿದೆ. 2023-24ನೇ ಆರ್ಥಿಕ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿಗೆ 3.80 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಆದರೆ, 4.33 ಲಕ್ಷ ಮಾನವ ದಿನಗಳನ್ನು ಸೃಜಿಸಿ ಅದ್ಭುತ ಸಾಧನೆ ಮಾಡಲಾಗಿದ್ದು .12 ಕೋಟಿ ಆರ್ಥಿಕ ಪ್ರಗತಿ ಕಂಡಿದೆ.
ರೈತರಿಗೆ ತಮ್ಮ ಜಮೀನುಗಳಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಿ ಉತ್ಪಾದಕತೆ ಹೆಚ್ಚಿಸಲಾಗಿದೆ. ಹೀಗಾಗಿ ನರೇಗಾ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮೊದಲ ದಿನದಿಂದಲೇ ಉತ್ತಮ ಪ್ರಗತಿ ಸಾಧಿಸುವ ಗುರಿ ಹೊಂದಿದ್ದರಿಂದ ಶೀಘ್ರದಲ್ಲೇ ಆ ಗುರಿ ಸಾಧಿಸಲಾಗಿದೆ. ಕಳೆದ ವಾರದಲ್ಲಿ ಜಿಪಂ ಸಿಇಒ ಹರ್ಷಲ್ ನಾರಾಯಣರಾವ್ ಭೋಯರ್ ತಾಲೂಕಿನ ವಿವಿಧೆಡೆ ಭೇಟಿ ನೀಡಿ ಖಾತರಿ ಕಾಮಗಾರಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನರೇಗಾ ಯೋಜನೆಯಡಿ ನರೇಗಾ ಡೇ ಕಾರ್ಯಕ್ರಮ, ರೋಜಗಾರ ವಾಹಿನಿ ಮೂಲಕ ಕಟ್ಟಕಡೆಯ ಜನರಿಗೂ ಉದ್ಯೋಗ ನೀಡಲಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಒದಗಿಸಲಾಗುತ್ತಿದೆ. ಅಲ್ಲದೇ ಯೋಜನೆಯಡಿ ಕೂಲಿಕಾರರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಉಚಿತ ತಪಾಸಣೆ ಕೂಡ ನಡೆಸಲಾಗುತ್ತಿದೆ.
ತಾಲೂಕು ವ್ಯಾಪ್ತಿಯಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೂಲಿಕಾರರು ಆಧಾರಿತ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ. ಕೆರೆ, ಬಾಂದಾರ, ಕಾಲುವೆ ಹೂಳೆತ್ತುವುದು, ಅರಣ್ಯೀಕರಣ, ಕೊಳವೆಭಾಂವಿ ಪುನಶ್ಚೇತನ ಮತ್ತು ನೀರಧಾರೆ, ಕೃಷಿ ಹೊಂಡ, ತೆರೆದಭಾಂವಿ, ಜಾನುವಾರು ಶೆಡ್, ಬಚ್ಚಲು ಗುಂಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕೊಲ್ಲಾಪುರ ಹಿಂಸಾಚಾರ: ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ
ಇನ್ನು ಶಾಲಾ ಸಮಗ್ರ ಅಭಿವೃದ್ಧಿಗಾಗಿ ಕಾಂಪೌಂಡ್, ಪೌಷ್ಟಿಕ ಕೈತೋಟ, ಭೋಜನಾಲಯ, ಆಟದ ಮೈದಾನ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಲಸಂರಕ್ಷಣೆ ಕಾಮಗಾರಿ, ಮಣ್ಣಿನ ಸವಕಳಿ ತಡೆಗಟ್ಟಲು ಅಂಜರ್ತಲ ಮಟ್ಟಹೆಚ್ಚಿಸಲು ಚೆಕ್ ಡ್ಯಾಂ ನಿರ್ಮಾಣ, ಅಮೃತ ಸರೋವರಕ್ಕೆ ಆಯ್ಕೆಯಾದ ಸರೋವರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಬಗ್ಗೆ ವ್ಯಾಪಕ ಪ್ರಚಾರ, ಮಾಹಿತಿ ಕೊಡಲಾಗುತ್ತಿದೆ. ಜಿಪಂ ಸಿಇಒ ಮತ್ತು ಉಪ ಕಾರ್ಯದರ್ಶಿ ಅವರ ಬೆಂಬಲದಿಂದ ಉತ್ತಮ ಸಾಧನೆ ಮಾಡಲಾಗಿದೆ. ಇದಕ್ಕಾಗಿ ಪಿಡಿಒ, ಗ್ರಾಪಂ ಸಿಬ್ಬಂದಿ ಹಾಗೂ ತಾಂತ್ರಿಕ ವಿಭಾಗದವರು ಶ್ರಮಿಸಿದ್ದಾರೆ ಅಂತ ಹುಕ್ಕೇರಿ ತಾಪಂ ಇಒ ಉಮೇಶ ಸಿದ್ನಾಳ ತಿಳಿಸಿದ್ದಾರೆ.